»   » ‘ನ್ಯೂಯಾರ್ಕಿನಲ್ಲಿ ನಕ್ಕೀರಿ ಜೋಕೆ, ಪೊಲೀಸರು ಹಿಡ್ಕೋತಾರೆ!’

‘ನ್ಯೂಯಾರ್ಕಿನಲ್ಲಿ ನಕ್ಕೀರಿ ಜೋಕೆ, ಪೊಲೀಸರು ಹಿಡ್ಕೋತಾರೆ!’

Posted By:
Subscribe to Filmibeat Kannada

ನ್ಯೂಯಾರ್ಕ್‌ : ತಾನೊಬ್ಬ ಸಂಭಾವಿತ ಭಾರತೀಯ ನಟಿ ಎಂಬುದನ್ನು ಅಮೆರಿಕ ಪೊಲೀಸರಿಗೆ ಮನದಟ್ಟು ಮಾಡಿಕೊಡಲು ಆಕೆಗೆ ನಾಲ್ಕು ತಾಸು ಬೇಕಾಯಿತು !
ಆ ನಟಿಯ ಹೆಸರು ಸಂಯುಕ್ತ ವರ್ಮಾ; ಮಲೆಯಾಳಿ ಚಿತ್ರೋದ್ಯಮದ ಮಿನುಗುತಾರೆ. ತನ್ನ ದೊಡ್ಡ ಕುಟುಂಬದ ಜೊತೆ ನ್ಯೂಯಾರ್ಕ್‌ ಸುತ್ತಲೆಂದು ಮಂಗಳವಾರ ರಾತ್ರಿ ಫ್ಲೈಟ್‌ ಇಳಿದಾಗ, ಪೊಲೀಸರು ಕಸ್ಟಡಿಗೆ ತೆಗೆದುಕೊಂಡು, ನಾಲ್ಕು ತಾಸು ಕೊರೆದರು. ಹೊರಗೆ ಬಂದ ನಂತರ ಸಂಯುಕ್ತ ಮುಖ ಬಾಡಿತ್ತು. ಆಕೆಗೆ ಭಾರತಾಂಬೆಯ ನೆನಪಾಗಿತ್ತು.

ಜೋರಾಗಿ ನಕ್ಕಿದ್ದೇ ಸಾಕು, ಬಂತಲ್ಲಪ್ಪಾ ತಾಪತ್ರಯ !
ನ್ಯೂಯಾರ್ಕನ್ನು ವಿಮಾನದೊಳಗಿಂದ ನೋಡಿದ ಸಂಯುಕ್ತ ವರ್ಮಾಗೆ ಕಂಡಾಪಟ್ಟೆ ಖುಷಿಯಾಗಿದೆ. ಯಾರಿಗೇ ಆಗಲಿ ತೀರಾ ಖುಷಿಯಾದರೆ, ದುಃಖವಾದರೆ, ನೋವಾದರೆ, ಅದನ್ನು ವ್ಯಕ್ತಪಡಿಸುವುದು ಮಾತೃಭಾಷೆಯಲ್ಲೇ ಅಲ್ಲವೇ? ಸಂಯುಕ್ತ ಮಾಡಿದ್ದೂ ಅದನ್ನೇ. ಮಲೆಯಾಳಿ ಭಾಷೇಲೇ ಕೇಕೆ ಹಾಕಿ ಮಾತಾಡಿದರು, ಗೊಳ್ಳೆಂದು ನಕ್ಕರು. ವಿಮಾನದೊಳಗಿದ್ದ ಅದಾರೋ ಅಮೆರಿಕ ಮಹಾತಾಯಿಗೆ ಇವರು ಉಗ್ರರಿರಬೇಕೆಂಬ ಅನುಮಾನ ಬಂದು ಬಿಟ್ಟಿದೆ. ಸೀದಾ ಹೋಗಿ, ಪೊಲೀಸರಿಗೆ ದೂರಿತ್ತಿದ್ದಾರೆ. ವಿಮಾನ ಇಳಿಯುತ್ತಿದ್ದಂತೆ ಸಂಯುಕ್ತ ವರ್ಮಾ ಮತ್ತು ಆಕೆಯ ಮನೆಯವರೆಲ್ಲರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೊರಗೆ ಬಿಟ್ಟಿದ್ದು ನಾಲ್ಕು ಗಂಟೆಯ ನಂತರ.

ಸಂಯುಕ್ತ ಪೊಲೀಸರಿಗೆ ಹೇಳಿದ್ದಿಷ್ಟು- ‘ನಾನು ನಕ್ಕರೆ, ಮಲೆಯಾಳಂನಲ್ಲಿ ಮಾತಾಡಿದರೆ ನಿಮಗೆ ಉಗ್ರಳ ರೀತಿ ಕಾಣಿಸುತ್ತೀನಾ?’ ಅರಳು ಹುರಿದಂತೆ ಇಂಗ್ಲಿಷ್‌ನಲ್ಲಿ ಮಾತಾಡಬಲ್ಲ ಸಂಯುಕ್ತಾಗೆ ಪೊಲೀಸರನ್ನು ಒಪ್ಪಿಸಿ, ಹೊರ ಬರಲು ನಾಲ್ಕು ತಾಸು ಬೇಕಾಯಿತು.

ಪೊಲೀಸರಿಗೆ ಸಣ್ಣ ಅನುಮಾನ ಬಂದರೂ ವಿಚಾರಣೆಗೆ
ಸೆಪ್ಟೆಂಬರ್‌ 11ರ ಉಗ್ರರ ದಾಳಿಯ ನಂತರ ಅಮೆರಿಕಾದ ಸೈಕಾಲಜಿಯನ್ನೇ ಅನುಮಾನ ಆವರಿಸಿಕೊಂಡಿದೆ. ಎಚ್ಚರಿಕೆಯಿಂದ ಇರಬೇಕು ಅನ್ನೊಂದು ಸರಿ. ಹಾಗಂತ ಕ್ಷುಲ್ಲಕ ಕಾರಣಗಳಿಗೆಲ್ಲಾ ಅಮಾಯಕರ ಮನ ನೋಯಿಸುವುದು ಎಷ್ಟು ಸರಿ? ಈ ಹಿಂದೆ ಕಮಲ ಹಾಸನ್‌ಗೂ ಕೆನಡಾದಲ್ಲಿ ಸಂಯುಕ್ತಾಗೆ ಆದ ಅನುಭವವೇ ಆಗಿತ್ತು. ಹರೀಬರಿಯಲ್ಲಿದ್ದ ಕಮಲ ಹಾಸನ್‌ ಅವರ ಅರ್ಧ ದಿನವನ್ನು ಪೊಲೀಸರು ಕಿತ್ತುಕೊಂಡರು !

ಈ ಖಾರವಾದ ಅನುಭವದ ನಂತರ ಸಂಯುಕ್ತಾ ಹೇಳೋದಿಷ್ಟು- ‘ನ್ಯೂಯಾರ್ಕೂ ಸಾಕು, ಅದರ ಸಹವಾಸವೂ ಸಾಕು. ನ್ಯೂಯಾರ್ಕ್‌ನಲ್ಲಿ ಯಾರಾದರೂ ನಕ್ಕೀರಿ, ಜೋಕೆ’.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada