»   » ಕಂಬಾರರು ಬ್ಯಾಸರ ಮಾಡ್ಕೊಂಡಿದ್ದಾರ್ರೀ

ಕಂಬಾರರು ಬ್ಯಾಸರ ಮಾಡ್ಕೊಂಡಿದ್ದಾರ್ರೀ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಇದು ‘ಮೂಡಲ ಮನೆ’ಯ ಸಮಾಚಾರ...

ವೈಶಾಲಿ ಕಾಸರವಳ್ಳಿ ನಿರ್ದೇಶಿಸುತ್ತಿರುವ ಈ ದೈನಿಕ ಧಾರಾವಾಹಿ ಈ- ಟೀವಿಯಲ್ಲಿ ಪ್ರತಿ ರಾತ್ರಿ 9.30 ಗಂಟೆಗೆ ಪ್ರಸಾರವಾಗುತ್ತಿದೆ. ಜಾನಪದದ ಖದರಿನ ‘ರೆಂಬಿಕೊಂಬಿ ಮ್ಯಾಲ ಗೂಡು ಕಟ್ಟಿದಾಂವ ರೆಕ್ಕಿ ಬಲಿತ ಹಕ್ಕಿ...’ ಶೀರ್ಷಿಕೆ ಗೀತೆ ಕೂಡ ಧಾರಾವಾಹಿಯ ಜನಪ್ರಿಯತೆಯ ಸೆಳಕುಗಳಲ್ಲಿ ಮುಖ್ಯವಾದದ್ದು. ಇದರ ವಿಶೇಷ ಏನಪ್ಪಾ ಅಂದರೆ, ಈ ಗೀತೆಯನ್ನು ಬರೆದು, ಅದಕ್ಕೆ ಮಟ್ಟು ಹಾಕಿರುವವರು ಕನ್ನಡಕ್ಕೆ ಇನ್ನೊಂದು ಜ್ಞಾನಪೀಠದ ನಿರೀಕ್ಷೆ ಹುಟ್ಟಿಸಿರುವ ಚಂದ್ರಶೇಖರ ಕಂಬಾರ. ಉತ್ತರ ಕರ್ನಾಟಕದ ದೇಶಪಾಂಡೆ ಕುಟುಂಬವೊಂದರ ಸುತ್ತ, ಆ ಕಡೆಯ ಭಾಷೆಯಲ್ಲೇ ಹೆಣೆಯಲಾಗಿರುವ ಧಾರಾವಾಹಿ ಹನ್ನೊಂದು ಕಂತುಗಳ ಪೂರೈಸುವಷ್ಟರಲ್ಲೇ ಸಾಕಷ್ಟು ಶಹಬ್ಭಾಸ್‌ಗಿರಿಗೆ ಪಾತ್ರವಾಗಿದೆ.

ಸಾಕ್ಷಾತ್‌ ಗಿರೀಶ್‌ ಕಾಸರವಳ್ಳಿಯವರನ್ನು ಆವಾಹಿಸಿಕೊಂಡಂತೆ ವೈಶಾಲಿ ನಿರ್ದೇಶನ ಮಾಡಿದ್ದಾರೆ ಅನ್ನೋದು ಕೆಲವರ ಕಾಂಪ್ಲಿಮೆಂಟು. ಧಾರಾವಾಹಿ ತೆರೆಕಂಡ ನಂತರ ಕಂಬಾರರಿಗೆ ಸಾಕಷ್ಟು ಮಂದಿ ನಿಮ್ಮ ಹಾಡು- ರಾಗ ‘ಛಲೋ ಐತ್ರೀ’ ಅಂತ ಬಾಯಿತುಂಬಾ ಹೊಗಳಿದ್ದಾರೆ.

ಅದೇನು ಚೌಕಾಸಿ ನಡೆಯಿತೋ ಏನೋ, ಒಟ್ಟಿನಲ್ಲಿ ವೈಶಾಲಿ ಕಾಸರವಳ್ಳಿ ಕಂಬಾರರ ಕೆಲಸಕ್ಕೆ 5 ಸಾವಿರ ರುಪಾಯಿ ಸಂಭಾವನೆ ಕೊಟ್ಟಿದ್ದಾರೆ. ಟೈಟಲ್‌ ಗೀತೆಯ ಕೆಲಸಕ್ಕೆ ಎಲ್ಲರೂ ಅಷ್ಟೇ ಕೊಡೋದು ಅನ್ನೋದು ಅವರ ಲೆಕ್ಕಾಚಾರ. ಕಂಬಾರರು ಟೈಟಲ್‌ ಹಾಡಿನ ಜೊತೆಗೆ ಏಳೆಂಟು ಸಂಗೀತದ ಬಿಟ್‌ಗಳನ್ನೂ ವೈಶಾಲಿಯವರಿಗೆ ಕೊಟ್ಟಿದ್ದು, ಅವನ್ನು ಧಾರಾವಾಹಿಯಲ್ಲಿ ಅಚ್ಚುಕಟ್ಟಾಗಿ ಬಳಸಿಕೊಳ್ಳಲಾಗುತ್ತಿದೆ. ಕಂಬಾರರಿಗೆ ತಮ್ಮ ಕೆಲಸವನ್ನು ವೈಶಾಲಿ ಉಪಯೋಗಿಸಿಕೊಳ್ಳುತ್ತಿರುವ ಪರಿಗೆ ಮೆಚ್ಚುಗೆಯಿದೆ. ಆದರೆ, ಸಂಭಾವನೆ ವಿಷಯದಲ್ಲಿ ಭಾರೀ ಬ್ಯಾಸರವಾಗಿದೆ.

ನಿತ್ಯವೂ ಪ್ರಸಾರವಾಗುವ ಅಷ್ಟು ದೊಡ್ಡ ಧಾರಾವಾಹಿಯಲ್ಲಿ ದಿನವೂ ಕೇಳುವ ಹಾಡಿಗೆ ಕೊಟ್ಟ ಸಂಭಾವನೆ ತೀರಾ ಕಮ್ಮಿಯಾಯಿತು ಅನ್ನೋದು ಕಂಬಾರರ ಬ್ಯಾಸರಕ್ಕೆ ಕಾರಣ. ಈ ಬ್ಯಾಸರವನ್ನು ಅವರು ವೈಶಾಲಿ ಅವರ ಮುಂದೆ ತೋಡಿಕೊಂಡಾಗ, ಹಣ ಕೊಡುವುದನ್ನು ಈ- ಟೀವಿಯೇ ಫಿಕ್ಸ್‌ ಮಾಡೋದು ಅಂತ ಹೇಳಿದ್ದಾರೆ. ಏನೇನೋ ಮಾತುಕತೆಯ ನಂತರವೂ ಕಂಬಾರರನ್ನು ಸಮಾಧಾನ ಪಡಿಸಲು ವೈಶಾಲಿ ಕೈಲಿ ಆಗಿಲ್ಲ.

ಈಗ ಕಂಬಾರರ ಬ್ಯಾಸರ ಕೋಪದ ರೂಪ ಪಡಕೊಂಡಿದೆ. ಸಂಭಾವನೆ ವಿಷಯಕ್ಕೆ ವೈಶಾಲಿ ಕಾಸರವಳ್ಳಿ ವಿರುದ್ಧ ಕೋರ್ಟಿನ ಮೆಟ್ಟಿಲು ಹತ್ತುವ ಮಟ್ಟಕ್ಕೆ ಅವರು ಯೋಚಿಸುತ್ತಿದ್ದಾರೆ. ಒಟ್ಟಿನಲ್ಲಿ, ಕಂಬಾರರ ದೃಷ್ಟಿಯಲ್ಲೀಗ ವೈಶಾಲಿ ಕಾಸರವಳ್ಳಿ ಆರೋಪಿ.

ಇಷ್ಟಕ್ಕೂ ನಿಮ್ಮ ಸಂಭಾವನೆಯ ನಿರೀಕ್ಷೆಯೇನು ಕಂಬಾರರೆ ಅಂತ ಕೇಳಿದರೆ, ಪ್ರತಿ ಎಪಿಸೋಡಿಗೆ 1 ಸಾವಿರ ರುಪಾಯಿ ಅನ್ನುತ್ತಾರೆ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada