»   » ಚಿತ್ರಮಂದಿರಗಳ ಮಾಲೀಕರಿಂದ ಕನ್ನಡದ್ರೋಹ-ಕಂಬಾರ ಆಕ್ರೋಶ

ಚಿತ್ರಮಂದಿರಗಳ ಮಾಲೀಕರಿಂದ ಕನ್ನಡದ್ರೋಹ-ಕಂಬಾರ ಆಕ್ರೋಶ

Subscribe to Filmibeat Kannada

ಬೆಂಗಳೂರು : ಚಿತ್ರಮಂದಿರಗಳ ಉದ್ಧಟತನ ಹೆಚ್ಚಿದೆ. ನಾಡಿನ ಅನ್ನ ತಿನ್ನುತ್ತ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಚಿತ್ರಮಂದಿರಗಳ ಮಾಲೀಕರು ಕನ್ನಡಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಬೀರ್‌ ಸಮ್ಮಾನ್‌ ಪ್ರಶಸ್ತಿ ವಿಜೇತ ಕವಿ ಹಾಗೂ ಶಾಸಕ ಚಂದ್ರಶೇಖರ ಕಂಬಾರ ಹೇಳಿದ್ದಾರೆ.

ರಾಜ್ಯದಲ್ಲಿ ಪರ ಭಾಷಾ ಚಿತ್ರಗಳಿಗೆ ವಿಧಿಸಲಾಗಿದ್ದ ಏಳು ವಾರದ ನಿರ್ಬಂಧ ಸಮರ್ಪಕವಾಗಿತ್ತು. ನಂತರ ರಾಜೀ ಸಂಧಾನಗಳ ಮೂಲಕ ಮೂರು ವಾರಕ್ಕೆ ಇಳಿಸಲಾಯಿತು. ಈ ಒಪ್ಪಂದಕ್ಕೆ ಸಮ್ಮತಿಸಿ ಕನ್ನಡಿಗರು ಔದಾರ್ಯ ಪ್ರದರ್ಶಿಸಿದ್ದರು. ಆದರೆ ಈ ಒಪ್ಪಂದ ಉಲ್ಲಂಘಿಸಿ ಪ್ರದರ್ಶಕರು ಕನ್ನಡ ವಿರೋಧಿ ಕೃತ್ಯವೆಸಗುತ್ತಿದ್ದಾರೆ ಎಂದು ಕಂಬಾರ ಹೇಳಿದರು. ಮೂರು ವಾರಗಳ ಒಪ್ಪಂದ ಉಲ್ಲಂಘಿಸಿ ವೀರ್‌ ಝಾರಾ ಚಿತ್ರ ಬಿಡುಗಡೆ ಮಾಡಿರುವ ಕಾವೇರಿ ಚಿತ್ರಮಂದಿರದೆದುರು ಪ್ರತಿಭಟನೆ ನಡೆಸಿದ (ನ.18) ಕರುನಾಡ ಸೇನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಂಬಾರ ಮಾತನಾಡುತ್ತಿದ್ದರು.

ಎಲ್ಲಾ ಭಾಷೆಗಳಿಗೂ ಬೆಂಗಳೂರು ಮಾರುಕಟ್ಟೆ. ಆದರೆ ಕನ್ನಡ ಚಿತ್ರಗಳಿಗೆ ಕರ್ನಾಟಕ ಬಿಟ್ಟರೆ ಬೇರೆ ಮಾರುಕಟ್ಟೆ ಇಲ್ಲ. ಕನ್ನಡ ನೆಲದಲ್ಲೇ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶವಿಲ್ಲದಿರುವುದು ವಿಪರ್ಯಾಸಕರ ಎಂದು ಕಂಬಾರ ವಿಷಾದಿಸಿದರು.

ದಕ್ಷಿಣ ಭಾರತದ ಭಾಷೆಗಳಲ್ಲಿಯೇ ಕನ್ನಡ ಅತಿವೇಗದಿಂದ ಅವಸಾನದತ್ತ ಸಾಗುತ್ತಿದೆ ಎಂದು ಅಮೇರಿಕಾದ ಎಥಿನಿಕ್‌ ಡಾಟ್‌ ಕಾಮ್‌ ಸಮೀಕ್ಷೆ ತಿಳಿಸಿದೆ. ಕನ್ನಡಿಗರ ನಿರ್ಲಕ್ಷ್ಯ ಹೀಗೆಯೇ ಮುಂದುವರೆದರೆ ಕನ್ನಡ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಕಂಬಾರ ಆತಂಕ ವ್ಯಕ್ತಪಡಿಸಿದರು.

ನಾಗತಿ ಹಳ್ಳಿ ಚಂದ್ರಶೇಖರ್‌ ಮಾತನಾಡಿ- ರಾಜ್ಯದಲ್ಲಿ ಕ್ರಿಯಾತ್ಮಕ ಚಿತ್ರ ತಯಾರಿಸುವುದಕ್ಕಿಂತಲೂ ಅದನ್ನು ಬಿಡುಗಡೆ ಮಾಡುವುದೇ ಕಷ್ಟ. ಕನ್ನಡ ಭಾಷೆಯ ಉಳಿವಿಗೆ ಇಂತಹ ಚಳವಳಿಗಳು ಪೂರಕ ಎಂದರು.

ಲೇಖಖ ಶೂದ್ರ ಶ್ರೀನಿವಾಸ್‌, ಬಂಜಗೆರೆ ಜಯಪ್ರಕಾಶ್‌, ಸಿ. ಬಸವಲಿಂಗಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಗ್ರ ಹೋರಾಟ : ಕರುನಾಡ ಸೇನೆಯ ದಂಡನಾಯಕ ಶ್ರೀಧರ್‌ ಮಾತನಾಡಿ, ಪರಭಾಷಾ ಚಿತ್ರಗಳನ್ನು ಶುಕ್ರವಾರ(ನ.19)ದೊಳಗೆ ರದ್ದು ಪಡಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada