ಮದನ್ ಪಟೇಲ್‌ಗೆ ವಿಹಿಂಪದಿಂದ ಬೆದರಿಕೆ ಕರೆ
ಮದನ್ ಪಟೇಲ್ ಅವರ ಮಹತ್ವಾಕಾಂಕ್ಷಿ 'ಸತ್ಯಾನಂದ' ಚಿತ್ರಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಈ ರೀತಿ ಸಮಸ್ಯೆಗಳು ಬಂದಾಗಲೆಲ್ಲಾ ಮದನ್ ಪತ್ರಿಕಾಗೋಷ್ಠಿ ಕರೆಯುವುದು ನೋಡಿ ನಮ್ಮ ಚಿತ್ರಕ್ಕೆ ಹಿಂಗಾಗಿದೆ ಎಂದು ಹೇಳುವುದು ಮಾಮೂಲಾಗಿದೆ.
ಸ್ವಾಮಿ ನಿತ್ಯಾನಂದ ಬೆಂಬಲಿಗರಿಂದ ತಮ್ಮ ಚಿತ್ರಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮದನ್ ಒಮ್ಮೆ ಆರೋಪಿಸಿದ್ದರು. ಈಗ 'ಸತ್ಯಾನಂದ' ಚಿತ್ರೀಕರಣ ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಗತ್‌ಸಿಂಗ್ ಸೇನೆ ಬೆದರಿಕೆ ಒಡ್ಡಿದೆ ಎಂದು ಮದನ್ ಆರೋಪಿಸಿದ್ದಾರೆ.
'ಸತ್ಯಾನಂದ' ಚಿತ್ರವನ್ನು ನಿಲ್ಲಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕೇಂದ್ರ ವಾರ್ತಾ ಹಾಗೂ ಪ್ರಚಾರ ಇಲಾಖೆಗೂ ವಿಹಿಂಪ ಪತ್ರ ಬರೆದಿದೆ. ನಮ್ಮ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪೂರ್ಣವಾಗಿಲ್ಲ. ಅಷ್ಟರಲ್ಲಾಗಲೆ ಸತ್ಯಾನಂದ ಚಿತ್ರಕ್ಕೆ ತಪ್ಪು ಪ್ರಚಾರ ನೀಡಲಾಗುತ್ತಿದೆ. ನಿತ್ಯಾನಂದ ಬೆಂಬಲಿಗರು ತಮಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದಿದ್ದಾರೆ ಮದನ್. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











