»   » ‘ಟಾಟಾ ಹೇಳೋಣ ಅನ್ನಿಸಿದೆ..’

‘ಟಾಟಾ ಹೇಳೋಣ ಅನ್ನಿಸಿದೆ..’

Posted By:
Subscribe to Filmibeat Kannada

*ಶಂಕರ

ಸುದೀಪ್‌ ರಿಟೈರಾಗ್ತಾರಾ?
‘ಕೈಲಿ ಇರುವ 6 ಚಿತ್ರಗಳನ್ನು ಮುಗಿಸಿ ಕೊಟ್ಟರೆ ಸಾಕು. ಈ ಸಿನಿಮಾ ಸಹವಾಸವೇ ಬೇಡ ಅನ್ನಿಸಿಬಿಟ್ಟಿದೆ’ ಅಂತ ಮೊನ್ನೆ ಹಾಸನದಲ್ಲಿ ಖುದ್ದು ಸುದೀಪ್‌ ಘೋಷಿಸಿದರು.

ಅವರ ಮಾತುಗಳಲ್ಲಿ ಹತಾಶೆ ಮಡುಗಟ್ಟಿತ್ತು. ಪಕ್ಕದಲ್ಲಿ ಇನ್ನೊಬ್ಬ ಉದಯೋನ್ಮುಖ ನಾಯಕ ದರ್ಶನ್‌ ತೂಗುದೀಪ ಇದ್ದರು. ವೇದಿಕೆಯಲ್ಲಿದ್ದ ಒಂದು ಕುರ್ಚಿಯ ಮೇಲೆ ನೀಗ್ರೋ ಜಾನಿ ಕೂತಿದ್ದರು. ಅವರಿಗೆ ಸಮಾರಂಭದ ಸಂಭ್ರಮ ತುಂಬಿಕೊಳ್ಳಲು ಕಂಗಳಲ್ಲಿ ಕಾಂತಿಯಿಲ್ಲ.

ಆ ಕಾರ್ಯಕ್ರಮ ನಡೆದಿದ್ದು ನೀಗ್ರೋ ಜಾನಿ ಚಿಕಿತ್ಸೆಗೆ ದುಡ್ಡು ಎತ್ತೋಕೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಒಂದು ಲಕ್ಷ ಚಿಲ್ಲರೆ ರುಪಾಯಿ ಜಾನಿಗೆ ಸಂದಿದ್ದು ಅವರಲ್ಲಿ ಸಮಾಧಾನದ ನಿಟ್ಟುಸಿರಿಡಲು ಕಾರಣವಾಯಿತು. ಜಾನಿ ಮೂತ್ರಕೋಶ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದರ ಚಿಕಿತ್ಸೆಗಾಗಿ ಅವರು ಪರಿ ಪಾಟಲು ಪಡುತ್ತಿರುವುದನ್ನು ನೋಡಲಾರದೆ ಸುದೀಪ್‌ ಹಾಗೂ ದರ್ಶನ್‌ ತಮಗರಿವಿಲ್ಲದಂತೆಯೇ ತಮ್ಮಿಬ್ಬರ ನಡುವೆ ಉಂಟಾದ ಗೋಡೆಯ ಒಡೆದು ಒಂದು ಒಳ್ಳೆಯ ಕೆಲಸಕ್ಕೆ ಕೈಜೋಡಿಸಿದ್ದರು.

ಫ್ಯಾಷ್‌ಬ್ಯಾಕ್‌
ಸುದೀಪ್‌ರ ‘ನಂದಿ’ ರಿಲೀಸ್‌ ಆದಾಗ ‘ಕರಿಯ’ ಥಿಯೇಟರಿಂದ ಎತ್ತಂಗಡಿಯಾದ ಸಂದರ್ಭ ಅದು. ‘ಕರಿಯ’ ಚೆನ್ನಾಗಿ ಓಡುತ್ತಿತ್ತು . ಹಾಗಿದ್ದೂ ಥಿಯೇಟರ್‌ ಗಿಟ್ಟಿಸುವುದರಲ್ಲಿ ಲಾಬಿ ಜೋರಾಗಿರುವುದರಿಂದ ‘ನಂದಿ’ಗೆ ಜಾಗ ಸಿಕ್ಕಿತು. ನಂದಿ ಚಿತ್ರದ ನಾಯಕ ಸುದೀಪ್‌. ‘ಕರಿಯ’ದಲ್ಲಿ ದರ್ಶನ್‌ ಮಿಂಚುತ್ತಿದ್ದರು. ಹೀಗಾಗಿ ಏಕಾಏಕಿ ದುಡ್ಡು ಮಾಡುತ್ತಿರುವ ತಮ್ಮ ಚಿತ್ರ ಎತ್ತಂಗಡಿಯಾಗಿದ್ದಕ್ಕೆ ದರ್ಶನ್‌ ಕುಪಿತರಾದರು. ಕೋಪದಲ್ಲಿ ಸುದೀಪ್‌ ಸೇರಿದಂತೆ ಅನೇಕರಿಗೆ ನಿಂತಲ್ಲೇ ಶಾಪ ಹಾಕಿದರು. ಟ್ಯಾಬ್ಲ್ಯಾಯ್ಡುಗಳಲ್ಲಿ ದರ್ಶನ್‌ ಶಾಪ ರಾರಾಜಿಸಿತು. ಸುದೀಪ್‌ಗೂ ಕೋಪ ಬಂತು. ದರ್ಶನ್‌ಗೆ ಫೋನಾಯಿಸಿದರು. ಇಬ್ಬರೂ ಪರಸ್ಪರ ಮಾತಾಡಿಕೊಂಡರು. ವಾಸ್ತವ ಏನು ಅಂತ ಗೊತ್ತಾಯಿತು. ಕೋಪದಲ್ಲಿ ಎರಡು ಮಾತಾಡಿರಬಹುದು. ಅದನ್ನ ಬರೆದು ಸುದ್ದಿ ಮಾಡೋರನ್ನ ಏನು ಮಾಡೋದು ಅಂತಲೇ ದರ್ಶನ್‌ ಹೇಳಿದರು.

ಇಷ್ಟೆಲ್ಲಾ ಆದ ನಂತರ ದರ್ಶನ್‌ ಹಾಗೂ ಸುದೀಪ್‌ ಒಂದೇ ವೇದಿಕೆಗೆ ಬಂದು, ನಡೆದದ್ದನ್ನು ಹಾಸನದ ಮಹಾ ಜನತೆ ಮುಂದೆ ಮಂಡಿಸಿದರು. ಸುದೀಪ್‌ ಹಾಡಿಗೆ ದರ್ಶನ್‌ ಹೆಜ್ಜೆ ಹಾಕಿದರು. ಸುದೀಪ್‌ ಹಾಡಿದ್ದಷ್ಟೇ ಅಲ್ಲದೆ, ಬಾಯಿತುಂಬಾ ದರ್ಶನ್‌ರನ್ನು ಹೊಗಳಿದರು.

ನಂಗೆ ಸಾಕಾಗಿ ಹೋಗಿದೆ : ಸುದ್ದಿಗಾರರ ಬಗ್ಗೆ ಸುದೀಪ್‌ಗೆ ನಖಶಿಖಾಂತ ಕೋಪವಿದೆ. ಇದನ್ನು ಅವರ ಮಾತಲ್ಲೇ ಕೇಳಿ- ‘ಕತೆ ಹೇಳಿ ಅಂತಾರೆ. ಡಿಫರೆಂಟಾಗಿದೆ ಅಂದರೆ, ಎಲ್ಲಾ ಸಿನಿಮಾಗೂ ಹೀಗೇ ಅಂತೀರಿ ಅಂತಾರೆ. ಇವರ ಹತ್ತಿರ ಏನು ಮಾತಾಡಿದರೂ ತಪ್ಪಾಗುತ್ತೆ. ನನಗಂತೂ ಸಾಕಾಗಿ ಹೋಗಿದೆ. ನನ್ನ ಬೆರಳಿಗೆ ಮೇಜರ್‌ ಆಪರೇಷನ್‌ ಆಗಬೇಕು. ನಾನು ಅನುಭವಿಸುತ್ತಿರುವ ಸಂಕಟ ನನಗೇ ಗೊತ್ತು. ಹಾಗಿದ್ದೂ ನಿರ್ಮಾಪಕರಿಗೆ ಲಾಸಾಗಬಾರದು ಅಂತ ನೋವಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಕೈಲಿರುವ ಚಿತ್ರಗಳನ್ನು ಮುಗಿಸಿ ಕೊಟ್ಟು ಸಿನಿಮಾ ಸಹವಾಸಾನೇ ಬಿಟ್ಟುಬಿಡೋಣ ಅಂದುಕೊಂಡಿದ್ದೀನಿ.’

ಇನ್ನೂ ಒಂದು : ಸುದೀಪ್‌ಗೆ ಇತ್ತೀಚೆಗೆ ಕೊಲೆ ಬೆದರಿಕೆಯ ಫೋನ್‌ ಕರೆಗಳು ಹೆಚ್ಚಾಗಿ ಬರತೊಡಗಿವೆ.

ಈ ಘಟನಾವಳಿಗಳನ್ನು ಗಮನಿಸಿದರೆ ಸ್ಯಾಂಡಲ್‌ವುಡ್‌ ಕೂಡ ಬಾಲಿವುಡ್‌ ಹಾದಿಯಲ್ಲೇ ಸಾಗುತ್ತಿದೆ ಅನಿಸುತ್ತೆ. ನೀವೇನಂತೀರಿ?

ಸುದೀಪ್‌ ಸಂಚಯ
ಸುಲಗ್ನಾ ಸಾವಧಾನ, ನಡೆಯಿತು ಸುದೀಪನ ಕಲ್ಯಾಣ
ಸುದೀಪನ ಅಂತರಂಗದಲ್ಲಿ ನಂದದ ಸಿನಿಮಾ ದೀಪ

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada