ಅರ್ಧ ‘ಖುಷಿ’, ಇನ್ನರ್ಧ ಸ್ವಪ್ನ !
*ರಾಜು ಮಹತಿ
‘ಖುಷಿಯಾಗಿದೆ ಹಿತವಾಗಿದೆ’ ಎಂದು ನಿರ್ದೇಶಕ ನಿರ್ಮಾಪಕರಾಗಲೀ ಅಥವಾ ನಾಯಕ ನಾಯಕಿಯಾಗಲೀ ಹಾಡುತ್ತಿಲ್ಲ . ಹಾಗೆಂದು ಖುಷಿಯಾಗಿಲ್ಲ ಅಂತ ಅರ್ಥವಲ್ಲ . ಅದು ಅರ್ಧ ಖುಷಿ. ಇನ್ನರ್ಧ ವಿಷಾದ.
ಇದು ‘ಖುಷಿ’ ತಂಡದ ತೊಂಬತ್ತರ ಹೊಸಿತಿಲಲ್ಲಿನ ಕಥೆ !
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿನ ‘ಸಾಗರ್’ ಎನ್ನುವ ಸಾಗರದಂಥ ಚಿತ್ರಮಂದಿರದಲ್ಲಿ ಹುಡುಗು ತುಡುಗುಗಳೆಲ್ಲ ಸೇರಿಕೊಂಡು ನಿರ್ಮಿಸಿದ ಚಿತ್ರವೊಂದು ನೂರು ದಿನ ಓಡೋದು ತಮಾಷೆಯ ಮಾತಾ ? ಅಂತದೊಂದು ನೂರರ ಖುಷಿಯ ಸಂಭ್ರಮದಲ್ಲಿದ್ದ ‘ಖುಷಿ’ ತಂಡ ಈಗ ಪೆಚ್ಚಾಗಿದೆ. ವಿಷಯ ಇಷ್ಟೇ- ‘ಖುಷಿ’ ಎತ್ತಂಗಡಿಯಾಗಿದೆ.
ಗಾಂಧಿನಗರದಲ್ಲಿ ಥಿಯೇಟರ್‌ಗಾಗಿ ಪೋಟಿ ಪೈಪೋಟಿ ನಡೆಯುತ್ತಿರುವುದು ಸರಿಯಷ್ಟೇ. ಆ ಪೈಪೋಟಿಯ ಬಿಸಿ ‘ಖುಷಿ’ಗೂ ಮುಟ್ಟಿದೆ. ಮುನಿರತ್ನರಂತಹ ಖದರು ಮನುಷ್ಯನೋ, ಕುಮಾರಸ್ವಾಮಿಯಂಥ ರಾಜಕಾರಣಿ ನಿರ್ಮಾಪಕರೊ ಆಗಿದ್ದರೆ ‘ಖುಷಿ’ ಸಾಗರದಲ್ಲೇ ಉಳಿಯುತ್ತಿತ್ತು . ಆದರೆ ನಿರ್ಮಾಪಕಿ ಟೈಟಲ್‌ನಲ್ಲಿ ಕಾಣಿಸಿಕೊಂಡಿರುವ ಜಯಮ್ಮ ಎನ್ನುವ ಹೆಣ್ಣುಮಗಳಿಗೆ ಗಾಂಧಿನಗರದ ಸಂದಿಗೊಂದಿಗಳೆಲ್ಲಿ ಗೊತ್ತು ? ನಿರ್ದೇಶಕ ಪ್ರಕಾಶ್ ಇನ್ನೂ ಹುಡುಗು ಹುಡುಗು! ಆ ಕಾರಣದಿಂದಾಗಿ ಖುಷಿ ಸಾಗರದಿಂದ ಎತ್ತಂಗಡಿಯಾಗಿದೆ. ಬಂದು ಬಿದ್ದಿರೋದು, ಸ್ವಪ್ನ ಎನ್ನುವ ಗೂಡಂಗಡಿಗೆ, ತಿಗಣೆಗಳ ಬೀಡಿಗೆ.
ಎಲ್ಲವೂ ‘ಅಣ್ಣಾವ್ರು’ ಮಹಿಮೆ! ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡ ಅಂಬರೀಷ್ ಅಭಿನಯಿಸಿದ ಚಿತ್ರ ಎಂದಮೇಲೆ ಸಾಗರವಾದರೂ ಅಷ್ಟೇ, ಸಂತೋಷವಾದರೂ ಅಷ್ಟೇ- ಚಿತ್ರಮಂದಿರ ಬಿಟ್ಟುಕೊಡಲೇಬೇಕು. ಹಾಗಾಗಿ, ಖಷಿ ಸಾಗರದಿಂದ ಸ್ವಪ್ನಕ್ಕೆ ಎತ್ತಂಗಡಿಯಾಗಿದೆ. ಸಂತೋಷ್ ಥಿಯೇಟರ್‌ನಲ್ಲಿ ಉಪ್ಪಿಯ ರಕ್ತಕಣ್ಣೀರು ನಡೆಯುತ್ತಿರುವುದರಿಂದ, ಆ ಚಿತ್ರ ನೂರು ತುಂಬಿದ ಕೂಡಲೇ- ಕಣ್ಣೀರ ಜಾಗಕ್ಕೆ ಉಪ್ಪಿಯ ‘ಗೋಕರ್ಣ’ ಬುಕ್ಕಾಗಿರುವುದರಿಂದ, ‘ಅಣ್ಣಾವ್ರು’ ಖುಷಿಗೆ ಬರೆ ಹಾಕಿದ್ದಾರೆ. ಹೊಸಬರಲ್ಲವಾ, ಸಹಿಸಿಕೊಳ್ಳುತ್ತಾರೆ ಬಿಡಿ!
‘ಖುಷಿ’ಗೆ ಆಗಲೇ ಹನ್ನೆರಡು ವಾರ ತುಂಬಿದೆ. ಇನ್ನೆರಡು ವಾರ ತುಂಬಿದರೆ ಬರೋಬ್ಬರಿ ನೂರು. ಸ್ವಪ್ನ ಆದರೂ ಪರವಾಗಿಲ್ಲ ; ನೂರು ತುಂಬುತ್ತದಲ್ಲ - ಆ ಖುಷಿ ದೊಡ್ಡದು. ಆದರೆ, ‘ಅಣ್ಣಾವ್ರು’ ರಾಜಕೀಯ ಇಲ್ಲದೆ ಹೋಗಿದ್ದರೆ ಆ ‘ಖುಷಿ’ ಇನ್ನಷ್ಟು ದೊಡ್ಡದಾಗುತ್ತಿತ್ತು , ಅಲ್ಲವೇ?
ಅಂದಹಾಗೆ, ಅಂಬಿ ಅಭಿನಯದ ‘ಅಣ್ಣಾವ್ರು’ ಚಿತ್ರಕ್ಕೆ ಅಭಿಮಾನಿಗಳ ಪ್ರಾರಂಭದ ಉತ್ಸಾಹ ಚೆನ್ನಾಗಿಯೇ ಇದ್ದಂತಿದೆ. ದರ್ಶನ್ ಕೂಡ ಇರುವುದರಿಂದ ಓಪನಿಂಗ್‌ಗೆ ಮೋಸವಿಲ್ಲ . ಈ ಉತ್ಸಾಹದ ತೀವ್ರತೆ ಎಷ್ಟು ದಿನ ಉಳಿಯುತ್ತದೆ ಎನ್ನುವುದರ ಮೇಲೆ ಚಿತ್ರದ ಯಶಸ್ಸು ನಿರ್ಣಯವಾಗುತ್ತದೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











