ಸುಪ್ರೀಂ ಗಿಪ್ರೀಂ ಎಲ್ಲಾ ನಡೆಯಲ್ಲ; ರೆಬಲ್ ಸ್ಟಾರ್ ಅಂಬರೀಷ್
'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಯಾವ ತಪ್ಪುಮಾಡಿಲ್ಲ. ಅವರ ಮುಂದಿನ ಚಿತ್ರಗಳಲ್ಲಿ ಯಾವ ಕಲಾವಿದರು ನಟಿಸಬಾರದು ಎಂಬ ನಿರ್ಧಾರ ಕೈಗೊಳ್ಳಲು ಕಲಾವಿದರ ಸಂಘಕ್ಕೆ ಯಾವ ಅಧಿಕಾರವೂ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯೇ ಸುಪ್ರೀಂ ಎಂದು ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹೇಳಿರುವುದು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರ ಪಿತ್ತ ಕೆರಳಿಸಿದೆ.
"ಸುಪ್ರೀಂ ಗಿಪ್ರೀಂ ಎಲ್ಲಾ ನಡೆಯಲ್ಲಾ. ಚಲನಚಿತ್ರೋದ್ಯಮ ಒಂದೇ ಕುಟುಂಬ ಇದ್ದಂತೆ ಎಂದು ಮೈಸೂರಿನಲ್ಲಿ ಅಂಬರೀಷ್ ಸೋಮವಾರ (ಮಾ.21) ಗುಡುಗಿದರು. ರಮ್ಯಾ ಕಿರಿಕ್ ಆದರೆ ನಿರ್ಮಾಪಕರು ಪದೇ ಪದೇ ಯಾಕೆ ಆಕೆಯ ಕಾಲ್ ಶೀಟ್ ಕೇಳುತ್ತಾರೆ ಎಂದು ಅಂಬಿ ಪ್ರಶ್ನಿಸಿದ್ದಾರೆ. ಈ ಮೂಲಕ ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರಿಗೂ ತಿರುಗೇಟು ನೀಡಿದರು.
ಅಂಬರೀಷ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿದ್ದ ಬಸಂತ್ ಕುಮಾರ್ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ."ಅಂಬರೀಷ್ ಅವರಿಗೆ ತಿರುಗೇಟು ನೀಡುವ ಉದ್ದೇಶ ನನ್ನದಲ್ಲ. ಅವರಷ್ಟು ದೊಡ್ಡವನು ನಾನಲ್ಲ. ಅಂಬರೀಷ್ ಅವರಿಗೆ ಪಕ್ಕದಲ್ಲಿ ಯಾರೋ ದಾರಿ ತಪ್ಪಿಸಿರಬೇಕು. ಅವರು ಈ ರೀತಿ ಪ್ರತಿಕ್ರಿಯಿಸುವವರೇ ಅಲ್ಲ" ಎಂದಿದ್ದಾರೆ.
ನಾನು ಹೇಳಿದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಸುಪ್ರೀಂ ಎಂದು. ಅದರ ನಿರ್ಣಯಕ್ಕೆ ಎಲ್ಲರೂ ತಲೆಬಾಗಲೇ ಬೇಕು ಎಂದು. ಅದನ್ನು ಅಂಬರೀಷ್ ಅವರು ತಪ್ಪಾಗಿ ಅರ್ಥೈಸಿದ್ದಾರೆ. ಮಂಗಳವಾರ (ಮಾ.22) ನಡೆಯುವ ಸಭೆಯಲ್ಲಿ ರಮ್ಯಾ ವಿವಾದ ಬಗೆಹರಿಯಲಿದೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಬಸಂತ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











