»   » ಮಾದೇಶನಿಗೆ ಸೆನ್ಸಾರ್ ಮಂಡಳಿಯ ಮಂಗಳಾರತಿ

ಮಾದೇಶನಿಗೆ ಸೆನ್ಸಾರ್ ಮಂಡಳಿಯ ಮಂಗಳಾರತಿ

Subscribe to Filmibeat Kannada

ಶಿವರಾಜ್ ಕುಮಾರ್ ನಟನೆಯ ಹೊಚ್ಚ ಹೊಸ ಚಿತ್ರ 'ಮಾದೇಶ'ನಿಗೆ ಸೆನ್ಸಾರ್ ಮಂಡಳಿ ಯಾವುದೇ ಪ್ರಮಾಣ ಪತ್ರ(ಯು,ಎ,ಯು/ಎ,ಎಸ್) ನೀಡದಿರಲು ನಿರ್ಧರಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ಕೇಂದ್ರ ಸರ್ಕಾರ ನೀಡುವ ಸಿನಿಮಾ ಸೆನ್ಸಾರ್ ಮಾರ್ಗಸೂಚಿಯ ಪ್ರಕಾರ ಮಾದೇಶ ಚಿತ್ರಕ್ಕೆ ಯಾವುದೇ ಸರ್ಟಿಫಿಕೇಟ್ ನೀಡಲು ಸಾಧ್ಯವಿಲ್ಲ ಎಂಬುದು ಸೆನ್ಸಾರ್ ಮಂಡಳಿ ಅಧ್ಯಕ್ಷ ಎ.ಚಂದ್ರಶೇಖರ್ ಅವರ ವಾದ.

''ಚಿತ್ರದಲ್ಲಿ ಬಾಲಕನೊಬ್ಬ ಭೀಕರವಾಗಿ ಕೊಲೆ ಮಾಡಿ ಖುದ್ದು ಪೊಲೀಸ್ ಠಾಣೆಗೆ ಬಂದು ಕೊಲೆಯಾದವನ ರಕ್ತದಲ್ಲಿ ಸಹಿ ಮಾಡುತ್ತಾನೆ. ಮಾರಕಾಸ್ತ್ರಗಳಿಂದ ಕೈಗಳನ್ನು ಕೊಚ್ಚಿ ಹಾಕುವ ಸನ್ನಿವೇಶ ಹಾಗೂ ನೆಲಕ್ಕುರುಳಿದ ಕೈಗಳು ವಿಲವಿಲ ಎಂದು ಒದ್ದಾಡುವ ದೃಶ್ಯ ಚಿತ್ರದಲ್ಲಿದೆ. ಪೊಲೀಸ್ ಮತ್ತು ನ್ಯಾಯಾಧೀಶರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ. ಚಿತ್ರದಲ್ಲಿ 20ಕ್ಕೂ ಹೆಚ್ಚು ಕೊಲೆಗಳು ನಡೆಯುತ್ತವೆ. ಇನ್ನು ಏನೇನೋ ದೃಶ್ಯಗಳು, ಅವ್ಯಾಚ್ಯ ಶಬ್ದಗಳು,ಆಕ್ಷೇಪಾರ್ಹ ಸನ್ನಿವೇಶಗಳು ಚಿತ್ರದಲ್ಲಿ ಹೇರಳವಾಗಿವೆ. ಚಿತ್ರ ಕೊನೆಗೆ ಕೆಟ್ಟ ಸಂದೇಶ ನೀಡುತ್ತದೆ'' ಎಂದು ಚಂದ್ರಶೇಖರ್ ಪ್ರಮಾಣ ಪತ್ರ ಯಾಕೆ ನೀಡಲಾಗುತ್ತಿಲ್ಲ ಎಂಬ ಬಗ್ಗೆ ಕಾರಣಗಳನ್ನು ನೀಡುತ್ತಾರೆ.

ಈ ಬಗ್ಗೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಸೆನ್ಸಾರ್ ಮಂಡಳಿಯನ್ನು ಪ್ರಮಾಣ ಪತ್ರ ಯಾಕೆ ನೀಡುತ್ತಿಲ್ಲ ಎಂದು ಗಟ್ಟಿಯಾಗಿ ಪ್ರಶ್ನಿಸಿದ್ದಾರೆ. ದಯವಿಟ್ಟು ಪ್ರಮಾಣ ಪತ್ರ ನೀಡಿ ಎಂದು ಸೆನ್ಸಾರ್ ಮಂಡಳಿ ಬಳಿ ಶಿವರಾಜ್ ಕುಮಾರ್ ಸಹ ಮನವಿಮಾಡಿಕೊಂಡಿದ್ದಾರೆ.ಆದರೆ ಸೆನ್ಸಾರ್ ಮಂಡಳಿ ಅಧ್ಯಕ್ಷರು ಪ್ರಮಾಣ ಪತ್ರ ನೀಡುವಲ್ಲಿ ಇರುವ ತೊಡಕುಗಳ ಬಗ್ಗೆ ವಿವರಿಸಿ ಮೌನಕ್ಕೆ ಶರಣಾಗಿದ್ದಾರೆ.

ಪ್ರಮಾಣ ಪತ್ರ ಸಿಗದ ಕಾರಣ 'ಮಾದೇಶ' ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾನೆ. ಈಗ ಮಾದೇಶನಿಗೆ ಉಳಿದಿರುವ ದಾರಿಗಳೆಂದರೆ, ಸೆನ್ಸಾರ್ ಮಂಡಳಿಯ ಪರಿಶೀಲನಾ ಮಂಡಳಿಗೆ ಒಪ್ಪಿಸಿ ಪ್ರಮಾಣ ಪತ್ರ ಪಡೆಯುವುದು. ಅದು ವಿಫಲವಾದರೆ,ಮಾದೇಶ ಚಿತ್ರವನ್ನು ಪರಿಷ್ಕರಿಸಿ ಸೆನ್ಸಾರ್ ಮಂಡಳಿ ಮುಂದಿಡುವುದು. ಅದಕ್ಕೂ ಸೆನ್ಸಾರ್ ಮಂಡಳಿ ಸೊಪ್ಪುಹಾಕಲಿಲ್ಲ ಎಂದರೆ ದೆಹಲಿಯಲ್ಲಿನ ಸೆನ್ಸಾರ್ ಮಂಡಳಿ ಬಳಿಗೆ ಕೊಂಡೊಯ್ಯುವುದು. ಇಲ್ಲೆಲ್ಲೂ ನ್ಯಾಯ ಸಿಗದೇ ಹೋದರೆ ಅಂತಿಮವಾಗಿ ನ್ಯಾಯಾಲಯದ ಮೆಟ್ಟಿಲೇರುವುದೊಂದೇ ಪರಿಹಾರ.

ನಿರ್ದೇಶಕ ರವಿಶ್ರೀವತ್ಸ ಅವರ'ಡೆಡ್ಲಿ ಸೋಮ'ಹಾಗೂ 'ರಾಜೀವ್' ಚಿತ್ರಗಳಲ್ಲಿ ಹಿಂಸೆ,ಕ್ರೌರ್ಯ ಮಿತಿಮೀರಿದ ಕಾರಣ ಈ ಹಿಂದೆ ಸೆನ್ಸಾರ್ ಮಂಡಳಿ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಮನೆಮಂದಿಯಲ್ಲಾ ಕೂತು ನೋಡುವ ಚಿತ್ರವಲ್ಲ ಎಂಬ ಕಾರಣಕ್ಕೆ 'ಗಂಡ ಹೆಂಡತಿ' ಚಿತ್ರಕ್ಕೆ ಹಲವಾರು ಕಡೆ ಕತ್ತರಿ ಪ್ರಯೋಗ ಮಾಡಿತ್ತು. ಈಗ ಮಾದೇಶ ಚಿತ್ರ ಕತ್ತರಿ ಪ್ರಯೋಗಕ್ಕೂ ಅರ್ಹವಲ್ಲ ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯಪಟ್ಟಿದೆ. ಈ ಕುರಿತು ರವಿ ಶ್ರೀವತ್ಸ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada