»   » ‘ಲಂಕೇಶ್‌ ಪತ್ರಿಕೆ’ ವಿರುದ್ಧ ‘ಕಿಚ್ಚ’ನಾದ ಸುದೀಪ್‌

‘ಲಂಕೇಶ್‌ ಪತ್ರಿಕೆ’ ವಿರುದ್ಧ ‘ಕಿಚ್ಚ’ನಾದ ಸುದೀಪ್‌

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಸುದೀಪ್‌ ಗರಂ ಆಗಿದ್ದರು ; ಥೇಟ್‌ ‘ಕಿಚ್ಚ’ನ ಸ್ಟೈಲ್‌ನಲ್ಲಿ . ಸುದೀಪ್‌ ಹತಾಶರಾಗಿದ್ದರು; ಥೇಟ್‌ ‘ಹುಚ್ಚ’ನ ರೀತಿಯಲ್ಲಿ ! ಪ್ರತಿಯಾಂದು ಮಾತೂ ವ್ಯಂಗ್ಯ, ವಿಷಾದದಲ್ಲಿ ಅದ್ದಿದಂತಿತ್ತು . ಕೊನೆಗೆ ಮಾತು ಕೊನೆಯಾದದ್ದು - ‘ಸವಾಲಿಗೂ ಕವಾಲಿಗೂ ಸೈ’ ಅನ್ನುವಲ್ಲಿಗೆ !

ಅದು ಪ್ರವೀಣ್‌ ನಾಯಕ್‌ ನಿರ್ದೇಶನದ ‘ಮೀಸೆ ಚಿಗುರಿದಾಗ’ ಚಿತ್ರದ ಕೆಸೆಟ್‌ ಬಿಡುಗಡೆ ಸಮಾರಂಭ. ಕಾರ್ಯಕ್ರಮ ನಡೆದದ್ದು ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ .

ನಟ ಸುದೀಪ್‌ರ ನೋವು, ಹತಾಶೆ ಹಾಗೂ ಸವಾಲುಗಳಿಗೆ ಕಾರಣವಾದದ್ದು - ಲಂಕೇಶ್‌ ಪತ್ರಿಕೆ ಹಾಗೂ ಪತ್ರಿಕೆಯ ವ್ಯವಸ್ಥಾಪಕ ಇಂದ್ರಜಿತ್‌.

ಇಂದ್ರಜಿತ್‌ ಪತ್ರಕರ್ತ ಮಾತ್ರವಲ್ಲ , ಸಿನಿಮಾ ನಿರ್ದೇಶಕರೂ ಹೌದು. ಸುದೀಪ್‌ ಗೆಳೆಯ ಕೂಡ. ‘ಸುದೀಪ್‌ ಜೊತೆ ಆಟ ಆಡಿದ್ದು , ಪಾಠ ಓದಿದ್ದು’ ಮುಂತಾಗಿ ಇಂದ್ರಜಿತ್‌ ಈ ಮುನ್ನ ಲಂಕೇಶ್‌ ಪತ್ರಿಕೆಯಲ್ಲಿ ಬರೆದದ್ದುಂಟು. ಗೆಳೆಯನ ‘ಹುಚ್ಚ’ ಸಿನಿಮಾ ಸೂಪರ್‌ಹಿಟ್‌ ಆದಾಗ, ‘ಸ್ಯಾಂಡಲ್‌ವುಡ್‌ನಲ್ಲಿ ಹೊಸತಾರೆಯ ಉದಯ’ ಎನ್ನುವ ಅರ್ಥದಲ್ಲಿ ಇಂದ್ರಜಿತ್‌ ಬರೆದಿದ್ದರು. ಇಷ್ಟೇ ಅಲ್ಲದೆ, ಸುದೀಪ್‌ರ ವ್ಯಕ್ತಿತ್ವ ಹಾಗೂ ಸಿನಿಮಾ ನಾಯಕತ್ವದ ಕುರಿತು ಇಂದ್ರಜಿತ್‌ ಇತರರು ಅಸೂಯೆಪಡುವಂತೆ ಹೊಗಳಿ ಬರೆದಿದ್ದರು.

ಹೊಗಳಿ ಬರೆದ ಪತ್ರಿಕೆಯೇ ತೆಗಳಿಯೂ ಬರೆಯಿತು. ಸುದೀಪ್‌ ಸಿಟ್ಟಾದುದಕ್ಕೆ ಅದೇನೇ ಕಾರಣ.

ಲಂಕೇಶ್‌ ಪತ್ರಿಕೆಯಲ್ಲಿನ ವರದಿಗಳು ತಮಗೆ ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ನೋವು ತಂದಿವೆ ಎಂದು ಸುದೀಪ್‌ ಆಪಾದಿಸಿದರು. ಪತ್ರಿಕೆಯ ತಮ್ಮ ಕಾಲಂನಲ್ಲಿ ಇಂದ್ರಜಿತ್‌ ನನ್ನ ಬಗ್ಗೆ ವ್ಯಕ್ತಿಗತ ಟೀಕೆ ಮಾಡಿದ್ದಾರೆ. ಪತ್ರಿಕೆಯಲ್ಲಿ ನಿರಂತರವಾಗಿ ನನ್ನ ವಿರುದ್ಧ ಬರೆಯಲಾಗುತ್ತಿದೆ. ಇದರಿಂದ ನನ್ನ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಸುದೀಪ್‌ ಕೆಂಡಾಮಂಡಲವಾದರು.

ಲಂಕೇಶ್‌ ಪತ್ರಿಕೆ ನನ್ನ ಕುಟುಂಬದ ನೆಮ್ಮದಿ ಹಾಳು ಮಾಡಿದೆ. ಮದುವೆಗೆ ಮುಂಚೆಯೇ ನನ್ನ ಮನೆಯ ಸುತ್ತ ನನ್ನ ಹೆಂಡತಿ (ಪ್ರಿಯಾ) ಓಡಾಡುತ್ತಿದ್ದಳು ಎಂದೆಲ್ಲಾ ಪತ್ರಿಕೆ ಬರೆದಿದೆ. ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಟ್ಯಾಬ್ಲಾಯಿಡ್‌ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಸುದೀಪ್‌ ಆಪಾದಿಸಿದರು.

‘ಲಂಕೇಶ್‌ ಪತ್ರಿಕೆ’ ಚಿತ್ರಕ್ಕೆ ನಾನು ಕಾಲ್‌ಷೀಟ್‌ ನೀಡದೆ ಹೋದುದೇ ಇದಕ್ಕೆಲ್ಲಾ ಕಾರಣ. ಇಂದ್ರಜಿತ್‌ ತಮ್ಮ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ಸುದೀಪ್‌ ಹೇಳಿದರು.

‘ನಾನೇನು ಡಾನ್‌ ಅಲ್ಲ . ಆದರೆ ಇಂಥ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಸುದೀಪ್‌ ತಮ್ಮ ಟೀಕಾಕಾರರಿಗೆ ಎಚ್ಚರಿಕೆಯನ್ನೂ ನೀಡಿದರು.

ಪತ್ರಿಕೆಯಾಂದರ ವಿರುದ್ಧ ಯುವನಟನೊಬ್ಬ ಈ ಪಾಟಿ ತಿರುಗಿಬಿದ್ದುದು ಇದೇ ಮೊದಲೇನೊ !?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada