»   » ನಿರ್ಮಾಪಕರಿಗೆ ಸ್ವಿಟ್ಜರ್‌ಲೆಂಡ್‌ ನೀರು ಕುಡಿಸಿದ ಸಾಕ್ಷಿ!

ನಿರ್ಮಾಪಕರಿಗೆ ಸ್ವಿಟ್ಜರ್‌ಲೆಂಡ್‌ ನೀರು ಕುಡಿಸಿದ ಸಾಕ್ಷಿ!

Posted By:
Subscribe to Filmibeat Kannada


‘ಸೈನಿಕ’, ‘ಗಲಾಟೆ ಅಳಿಯಂದ್ರು’, ‘ತಂದೆಗೆ ತಕ್ಕ ಮಗ’, ಚಿತ್ರದ ನಿರ್ಮಾಪಕರೂ ಸಾಕ್ಷಿಯಿಂದ ಕಿರುಕುಳ ಅನುಭವಿಸಿದ್ದು ಜಗಜ್ಜಾಹೀರಾಗಿತ್ತು. ಇದೀಗ ಆ ಸಾಲು ಮುಂದುವರೆದಿದೆ.

ಜೋಗಿ, ಅಮೃತಧಾರೆ, ನೆನಪಿರಲಿ, ರಾಮ-ಶಾಮ-ಭಾಮ, ಮೈ ಆಟೋಗ್ರಾಫ್‌, ಆಕಾಶ್‌ ಸಾಲೋಸಾಲು ಉತ್ತಮ ಚಿತ್ರಗಳು, ನಂತರ ಜಯಮಾಲಾ ಅಯ್ಯಪ್ಪನ ಪಾದ ಸ್ಪರ್ಶ , ಮಾಸ್ತಿ-ಶಾಸ್ತಿ ಸಾಲೋಸಾಲು ಕಿರಿಕಿರಿಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಿ ನಿಂತಿದೆ. ಈ ಕಿರಿಕಿರಿಗೆ ಮತ್ತೊಂದು ಸೇರ್ಪಡೆ ಸಾಕ್ಷಾತ್‌ ಸಾಕ್ಷಿ.

ಸಾಕ್ಷಿ ಶಿವಾನಂದ್‌. ಕಿರಿಕ್ಕುಗಳಿಗೆ ಅನ್ವರ್ಥಕನಾಮ. ನಾಮ ಹಾಕಿ ನಿರ್ಮಾಪಕರನ್ನು ನಿರ್ಮಾಮ ಮಾಡುವುದರಲ್ಲಿ ನಿಸ್ಸೀಮ. ಸೌಂದರ್ಯದ ಗಣಿಯಲ್ಲಿ ಗಣಿಗಾರಿಕೆ ಮಾಡಿ ಹೆಕ್ಕಿ ತೆಗೆದರೆ ಮೂರುಕಾಸಿನ ಪ್ರತಿಭೆ ಹೊರಡುವುದಿಲ್ಲ ಎಂಬುದು ಗೊತ್ತಿದ್ದೂ ಗುಣಿ ತೋಡಿಕೊಳ್ಳುತ್ತಲೇ ಇರುತ್ತಾರೆ ನಿರ್ಮಾಪಕರು. ಅಂಥ ನಿರ್ಮಾಪಕರಿಗೆ ಮತ್ತೊಂದು ಸೇರ್ಪಡೆ ಚೆನ್ನಗಂಗಪ್ಪ.

‘ಸೈನಿಕ’, ‘ಗಲಾಟೆ ಅಳಿಯಂದ್ರು’, ‘ತಂದೆಗೆ ತಕ್ಕ ಮಗ’ ನಿರ್ಮಾಪಕರಿಂದ ಒಂದೇ ಒಂದು ಸಲಹೆ ಪಡೆದಿದ್ದರೆ ‘ಸೌಂದರ್ಯ’ ಚಿತ್ರದ ನಿರ್ಮಾಪಕ ಉದ್ಧಾರವಾಗಿ ಹೋಗುತ್ತಿದ್ದರು. ಈಗ ಗಡ್ಡಕ್ಕೆ ಬೆಂಕಿ ಹತ್ತಿಯಾಗಿದೆ, ಬಾವಿ ತೋಡಬೇಕೆಂದರೆ ಅನಾಮತ್ತು 30 ಲಕ್ಷ ಬಾವಿಯ ತಳ ಸೇರಿಯಾಗಿದೆ. ನಿರ್ಮಾಪಕರಿಗೆ ಸಾಕ್ಷಿ ನೀರು ಕುಡಿಸಿಯಾಗಿದೆ.

ಈಗ ನಿರ್ಮಾಪಕ ಚೆನ್ನಗಂಗಪ್ಪ ಕೆರಳಿ ನಿಂತಿದ್ದಾರೆ. ಬ್ಲ್ಯಾಕ್‌ಮೇಲ್‌ ಸೇರಿದಂತೆ ಆರು ದೂರುಗಳನ್ನು ಪೊಲೀಸರಿಗೆ ನೀಡಲು ಮುಂದಾಗಿದ್ದಾರೆ.

ಆಕೆಯಿಂದ ಮಾನಸಿಕ ಕಿರಿಕಿರಿ ಮಾತ್ರವಲ್ಲದೇ, 30ಲಕ್ಷ ರೂ. ನಷ್ಟವಾಗಿದೆ ಎನ್ನುವ ಚೆನ್ನಗಂಗಪ್ಪ, ಸಾಕ್ಷಿ ಶಿವಾನಂದ್‌ ನಿಮಿಷಕ್ಕೊಂದು ಮಾತನಾಡುತ್ತ, ಚಿತ್ರೀಕರಣಕ್ಕೆ ತೊಂದರೆ ನೀಡಿದ್ದಾರೆ. ಆಕೆಯ ವಂಚನೆ ಬಗ್ಗೆ ನನ್ನಲ್ಲಿ ದಾಖಲೆಗಳಿವೆ ಎಂದಿದ್ದಾರೆ.

ಏನಿದು ಸಾಕ್ಷಿ ವಿವಾದ?:

ಸಾಕ್ಷಿ ಶಿವಾನಂದ್‌ ‘ಸೌಂದರ್ಯ’ ಚಿತ್ರದ ಹಾಡುಗಳ ಶೂಟಿಂಗಿಗಾಗಿ ಸ್ವಿಟ್ಜರ್‌ಲೆಂಡ್‌ಗೆ ತಾಯಿ, ತಂಗಿ ಸಮೇತಬರಬೇಕಿತ್ತು. ವಿಮಾನಯಾನದ ಟಿಕೆಟ್‌ ತೆಗೆಸಿದ ನಂತರ, ‘ಅಮೆರಿಕಾದಲ್ಲಿ ನನ್ನ ತಂಗಿಯ ನೃತ್ಯ ಕಾರ್ಯಕ್ರಮವಿದೆ.. ಹೀಗಾಗಿ ಸ್ವಿಟ್ಜರ್‌ಲೆಂಡ್‌ಗೆ ಬರಲು ಕಷ್ಟವಾಗುತ್ತಿದೆ’ ಎಂದು ಹೊಸ ರಾಗ ತೆಗೆದರು.

ಸಾಕ್ಷಿ ಅಸಹಕಾರದಿಂದ ಎರಡು ದಿನದ ಶೂಟಿಂಗ್‌ ವ್ಯರ್ಥವಾಗಿತ್ತು. ಹಾಗೂ ಹೀಗೂ ಒಪ್ಪಿಸಿ ಸ್ವಿಜರ್‌ಲೆಂಡ್‌ಗೆ ಕರೆಸಿಕೊಳ್ಳಲಾಯಿತು. ಎರಡು ದಿನ ಶೂಟಿಂಗ್‌ನಲ್ಲಿ ಪಾಲ್ಗೊಂಡು, ಆನಂತರ ಅನಾರೋಗ್ಯದ ನೆಪ ಹೇಳಿ ಶೂಟಿಂಗಿಗೆ ಕೈ ಕೊಟ್ಟರು. ಇದಲ್ಲದೆ ಹಣಕೊಡದಿದ್ದರೆ ನಟಿಸುವುದಿಲ್ಲ ಎಂದು ಬೆದರಿಕೆ ಹಾಕಿದರು. ಸಾಕ್ಷಿ ನಡವಳಿಕೆಯಿಂದ 30 ಲಕ್ಷ ರೂಪಾಯಿ ನಷ್ಟವಾಗಿದೆ ಎಂಬುದು ಚೆನ್ನಗಂಗಪ್ಪ ಅವರ ಆರೋಪ.

ಒಂದು ವೇಳೆ ‘ಸೌಂದರ್ಯ’ ಕ್ಲಿಕ್ಕಾದರೆ, ಮತ್ತೊಬ್ಬ ನಿರ್ಮಾಪಕ ಈ ಸೌಂದರ್ಯವತಿಯ ಕಾಲ್‌ಶೀಟ್‌ಗಾಗಿ ಕಾದು ನಿಂತಿರುತ್ತಾನೆ. ಕ್ಲಿಕ್ಕಾಗದೆ ಇದ್ದರೂ! ಏಕೆಂದರೆ ಇಲ್ಲಿ ಏನಿದ್ದರೂ ಸೌಂದರ್ಯಕ್ಕೆ ಮಾತ್ರ ಮಣೆ. ಇನ್ನೂ ಏನೇನು ಕಿರಿಕಿರಿಗಳಿಗೆ ಕನ್ನಡ ಚಿತ್ರರಂಗ ಸಾಕ್ಷಿಯಾಗಲಿದೆಯೋ?

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada