»   » ಐಶ್ವರ್ಯ ರೈಗೆ ಹೀಗಾಗಬಾರದಿತ್ತು...

ಐಶ್ವರ್ಯ ರೈಗೆ ಹೀಗಾಗಬಾರದಿತ್ತು...

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ದೇವದಾಸ’ ಗೆದ್ದರೂ ಐಶ್ವರ್ಯ ರೈ ಹಾಕಿಕೊಂಡು ಸಿನಿಮಾ ಮಾಡಹೊರಟ ನಿರ್ಮಾಪಕರೆಲ್ಲಾ ಆಕೆಯನ್ನು ಬದಲಿಸಲು ಹೊರಟಿದ್ದಾರೆ. ಇದಕ್ಕೆ ಕಾರಣ- ಸಲ್ಮಾನ್‌ ಖಾನ್‌ ಎಂಬ ದೇವದಾಸ !

ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿದರೂ ಸಲ್ಮಾನನ ರಂಪಾಟ ಮುಗಿದಿಲ್ಲ. ಐಶ್ವರ್ಯ ಈತನನ್ನು ಪ್ರೀತಿಸುತ್ತಾಳೋ, ದ್ವೇಷಿಸುತ್ತಾಳೋ ಗೊತ್ತಿಲ್ಲ. ಐಶ್ವರ್ಯ ಶೂಟಿಂಗಿದ್ದೆಡೆಗೆಲ್ಲಾ ಸಲ್ಮಾನ್‌ ಹಾಜರಾಗುತ್ತಾನೆ. ಐಶ್ವರ್ಯ ಅಳುತ್ತಾಳೆ, ಗೋಗರೆಯುತ್ತಾಳೆ. ದಯವಿಟ್ಟು ಹೋಗಪ್ಪಾ ಅಂತ ಅಲವತ್ತುಕೊಳ್ಳುತ್ತಾಳೆ. ಯಾವುದೂ ಸಲ್ಮಾನ್‌ ಜಗ್ಗಲ್ಲ. ಕೊನೆಗೆ ಈಕೆಯೇ ಆತನ ಜೊತೆಗೆ ಹೊರಟು ಹೋಗುತ್ತಾಳೆ ! ಆಮೇಲೆ.. ಗೊತ್ತಿಲ್ಲ.

ಇಂಥಾ ಕಿರಿಕ್ಕುಗಳೇ ಬೇಡ ಅಂತ ಈಗಾಗಲೇ ಹೆಸರಾಂತ ನಿರ್ದೇಶಕರಾದ ಸುಭಾಷ್‌ ಘಾಯ್‌, ಸೂರಜ್‌ ಬಾರ್ಜಾತ್ಯ ಯಾವುದೇ ಕಾರಣಕ್ಕೂ ಐಶ್ವರ್ಯಾಳನ್ನು ನಾಯಕಿಯಾಗಿ ತೆಗೆದುಕೊಳ್ಳದಿರಲು ತೀರ್ಮಾನಿಸಿದ್ದಾರೆ. ‘ದೇವದಾಸ್‌’ ನಲ್ಲಿನ ಚೆಂದದ ಅಭಿನಯದ ಮೂಲಕ ಸುದ್ದಿಯಾದದ್ದೇ ತಡ, ಐಶ್ವರ್ಯಾಗೆ ಮರುಹುಟ್ಟು ಸಿಕ್ಕಿತು ಎಂಬಷ್ಟು ಆಫರುಗಳು ಬಂದವು.

ಅಜೀಜ್‌ ಮಿರ್ಜಾ ಎಂಬ ನಿರ್ದೇಶಕ ಶಾರುಖ್‌ ಮತ್ತು ಐಶ್ವರ್ಯ ಜೋಡಿಯಲ್ಲಿ ಹೊಸ ಸಿನಿಮಾ ಶೂಟಿಂಗ್‌ ನಡೆಸಿದ್ದರು. ಅಲ್ಲಿಗೆ ದಿಢೀರನೆ ಬಂದ ಸಲ್ಮಾನ್‌ ಐಶ್ವರ್ಯಾ ಮುಂದೆ ಮತ್ತದೇ ದೇವದಾಸನ ಪೋಸಲ್ಲಿ ನಿಂತ. ಕೈಗೆ ಸಿಕ್ಕಿದ್ದನ್ನೆಲ್ಲಾ ಚಚ್ಚಿದ. ಶರ್ಟನ್ನು ಬಿಚ್ಚಿ ತನ್ನ ಅಂಗ ಸೌಷ್ಟವ ತೋರತೊಡಗಿದ. ಮಿರ್ಜಾ ಸುಸ್ತಾಗಿ ಹೋದರು. ಶಾರುಖ್‌ ಮುಖದಲ್ಲೂ ಬೆವರಿತ್ತು. ಈಗ ಮಿರ್ಜಾ, ಐಶ್ವರ್ಯ ಸಹವಾಸವೇ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಐಶ್‌ ಜಾಗಕ್ಕೆ ರಾಣಿ ಮುಖರ್ಜಿ ಬರುವ ನಿರೀಕ್ಷೆಯಿದೆ. ಈ ಕಹಿ ಘಟನೆಯಿಂದ ಐಶ್ವರ್ಯ ಅಳು ಇನ್ನೂ ಮುಗಿದೇ ಇಲ್ಲ, ಅಷ್ಟೊತ್ತಿಗೇ ಇನ್ನೊಂದು ರಿಜೆಕ್ಟೆಡ್‌ ಸುದ್ದಿ ಈಕೆಯ ಫೋನಿಗೆ ತಲುಪಿದೆ. ನಟ ಅತುಲ್‌ ಅಗ್ನಿಹೋತ್ರಿ ನಿರ್ದೇಶಿಸುತ್ತಿರುವ ಮೊದಲ ಚಿತ್ರ ದಿಲ್‌ ನೆ ಜಿಸೆ ಅಪ್ನಾ ಕಹಾ ಚಿತ್ರಕ್ಕೆ ಐಶ್ವರ್ಯ ಗೊತ್ತಾಗಿದ್ದಳು. ಈಕೆ ಇರುವೆಡೆಗೆ ಸಲ್ಮಾನ್‌ ಬಂದೇ ಬರುತ್ತಾನೆ ಅನ್ನುವ ಕಾರಣಕ್ಕೆ, ಐಶ್ವರ್ಯಾಳನ್ನು ತೆಗೆದು ಹಾಕಿ, ಕರಿಷ್ಮಾಳನ್ನು ಬುಕ್‌ ಮಾಡಿದ್ದಾರೆ ಅತುಲ್‌.ಐಶ್‌ ಕೆರಿಯರ್ರಿಗೇ ಕೊಡಲಿ ಇಡುತ್ತಿರುವ ಸಲ್ಮಾನ್‌, ಅದನ್ನೇ ತನ್ನ ವಿಕ್ರಮ ಎಂಬಂತೆ ಗಹಗಹಿಸಿ ನಗುತ್ತಿದ್ದಾನಂತೆ !

Post Your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada