»   » ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!

ಮನೋಮೂರ್ತಿಗೆ ತೆಲುಗು ನಿರ್ಮಾಪಕರಿಂದ ಅಪಚಾರ!

Posted By:
Subscribe to Filmibeat Kannada

ಬೆಂಗಳೂರು, ಡಿ.21 : ಜಯಂತ ಕಾಯ್ಕಿಣಿ ಅವರಿಂದ ಮಧುರಮೂರ್ತಿ ಎಂದು ಕರೆಸಿಕೊಳ್ಳುವ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ವಿಚಾರದಲ್ಲಿ ಅಪಚಾರ ನಡೆದಿದೆ. ತೆಲುಗು ನಿರ್ಮಾಪಕರು ಈ ಅಪಚಾರವೆಸಗಿದ್ದು, ಸಂಗೀತ ಪ್ರೇಮಿಗಳು ಮನೋಮೂರ್ತಿ ಬೆಂಬಲಕ್ಕೆ ನಿಂತಿದ್ದಾರೆ.

ಮನೋಮೂರ್ತಿ ಸಂಗೀತ ನಿರ್ದೇಶನದ 4ಹಾಡುಗಳ ಟ್ಯೂನ್ ಗಳನ್ನು ಸದ್ದಿಲ್ಲದೇ ಕದಿಯಲಾಗಿದೆ. 'ಮುಂಗಾರು ಮಳೆ' ಚಿತ್ರವು ತೆಲುಗಿನಲ್ಲಿ 'ವಾನ'ಹೆಸರಿನಲ್ಲಿ ಸಿದ್ಧಗೊಂಡಿದೆ. ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಎಂ.ಎಸ್.ರಾಜು. ಈ ಚಿತ್ರದಲ್ಲಿ ಮನೋಮೂರ್ತಿ ಅವರ 4ಟ್ಯೂನ್ ಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಸಂಗೀತ ನಿರ್ದೇಶಕರ ಜಾಗದಲ್ಲಿ ಮೂರ್ತಿ ಅವರ ಹೆಸರಿಲ್ಲ.

ಹೊಸ ಹುಡುಗರಾದ ವಿನಯ್ ಮತ್ತು ಮಲ್ಲಿಕಾ ಚೋಪ್ರಾ ಈ ಚಿತ್ರದಲ್ಲಿದ್ದು, ಸಕಲೇಶಪುರದಲ್ಲಿ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ಕಮಲಾಕರ್ ಸಂಗೀತ ನಿರ್ದೇಶಕರೆಂದು ಆಡಿಯೋ ಮತ್ತು ಸಿಡಿ ಆಲ್ಪಮ್ಮಿನಲ್ಲಿ ಪ್ರಕಟಿಸಲಾಗಿದೆ. ಎಲ್ಲಿಯೂ ಸೌಜನ್ಯಕ್ಕೂ ಮನೋಮೂರ್ತಿ ಹೆಸರು ಪ್ರಕಟವಾಗಿಲ್ಲ. ಈ ಬೆಳವಣಿಗೆಯಿಂದ ಮನೋಮೂರ್ತಿ ಬೇಸರಗೊಂಡಿದ್ದು, ಕರ್ನಾಟಕ ವಾಣಿಜ್ಯ ಮಂಡಳಿಗೆ ದೂರು ನೀಡಲು ಯೋಚಿಸುತ್ತಿದ್ದಾರೆ.

ನನಗೆ ಹೆಚ್ಚುವರಿ ಸಂಭಾವನೆಯೇನು ಬೇಕಿಲ್ಲ. ನನ್ನ ಕೆಲಸಕ್ಕೆ ಬೇರೆಯವರ ಹೆಸರು ಹಾಕಿದರೆ ಹೇಗೆ? ಎನ್ನುವ ಮನೋಮೂರ್ತಿ, ಈ ವಿಚಾರವನ್ನು ನಿರ್ಮಾಪಕ ರಾಜು ಗಮನಕ್ಕೆ ತಂದಿದ್ದಾರೆ. ಮನೋಮೂರ್ತಿ ಟ್ಯೂನ್ ಗಳನ್ನು ಹೊಂದಿರುವ ಆ ನಾಲ್ಕು ಹಾಡುಗಳು, ತೆಲುಗಿನಲ್ಲಿ ಜನಪ್ರಿಯವಾಗಿವೆ ಎಂದು ಆಡಿಯೋ ಮಾರುಕಟ್ಟೆ ಹೇಳುತ್ತಿದೆ.

ಅಮೆರಿಕಾ ಅಮೆರಿಕಾ, ಅಮೃತಧಾರೆ, ಜೋಕ್ ಫಾಲ್ಸ್, ಪ್ರೀತಿ ಪ್ರೇಮ ಪ್ರಣಯ ಮತ್ತಿತರ ಚಿತ್ರಗಳಲ್ಲಿ ಸುಶ್ರಾವ್ಯ ಗೀತೆಗಳನ್ನು ಉಣಬಡಿಸಿದ ಮನೋಮೂರ್ತಿ ಅವರಿಗೆ ನ್ಯಾಯ ಸಿಗಲಿ. ಅವರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲೋಣ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada