ಕನ್ನಡಿಗರು ಅಂದ್ರೆ ನಾಯಿಗಳಾ? ಸಿಂಗಂ ಚಿತ್ರದಲ್ಲಿ ಅಪಮಾನ
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇಂದು (ಜು.22) ತೆರೆಕಂಡಿರುವ ಹಿಂದಿಯ 'ಸಿಂಗಂ' ಚಿತ್ರದಲ್ಲಿ ಕನ್ನಡಿಗರಿಗೆ ಭಾರಿ ಅವಮಾನ ಮಾಡಲಾಗಿದೆ. ಈ ಚಿತ್ರದ ಡೈಲಾಗ್‌ನಲ್ಲಿ ಕನ್ನಡಿಗರನ್ನು ನಾಯಿಗಳು ಎಂದು ಹೀಯಾಳಿಸುವ ಡೈಲಾಗ್ ಇದ್ದು, ಕೆಚ್ಚೆದೆಯ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಪ್ರಯತ್ನ ಮಾಡಲಾಗಿದೆ.
ಅಜಯ್ ದೇವಗನ್ ಹಾಗೂ ಪ್ರಕಾಶ್ ರೈ ನಡುವೆ ನಡೆಯುವ ಚಿತ್ರದಲ್ಲಿನ ಡೈಲಾಗ್ ಹೀಗಿದೆ. ಪ್ರಕಾಶ್ ರೈ: ಕರ್ನಾ ಟಕದಿಂದ ಸಾವಿರ ಜನ ಕರೆದುಕೊಂಡು ಬರುತ್ತೇನೆ; ಅಜಯ್ ದೇವಗನ್: ನಾನು 10 ಸಾವಿರ ಜನ ಕರೆದುಕೊಂಡು ಬರ್ತೀನಿ. ನನ್ನ ಹಿಂದೆ ಇಡೀ ಜಿಲ್ಲೆಯುಎ ಇದೆ. ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುತ್ತಾನೆ.
ಈಗ ಈ ಡೈಲಾಗ್ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಮೂಲಕ ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ರಾಜ್ಯದಾದ್ಯಂತ ಚಿತ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಹುಬ್ಬಳ್ಳಿಯ ಅಪ್ಸರ ಚಿತ್ರಮಂದಿರದ ಮುಂದೆ ಕರವೇ ಕಾರ್ಯಕರ್ತರು ಧರಣಿ ನಡೆಸಿ ಚಿತ್ರದ ಪೋಸ್ಟರ್‌ಗಳನ್ನು ಹರಿದು ಪ್ರತಿಭಟಿಸಿದರು. ರಾಜ್ಯದಾದ್ಯಂತ 'ಸಿಂಗಂ' ಚಿತ್ರ ಒಟ್ಟು 27 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, ಚಿತ್ರದ ಸಂಭಾಷಣೆಯ ಬಗ್ಗೆ ಅಪಾರ್ಥ ಬೇಡ. ಚಿತ್ರದಲ್ಲಿ ಇರುವುದು ಎಲ್ಲ ಪಾತ್ರಗಳು ಮರಾಠಿ ಪಾತ್ರಗಳು ಎಂದಿದ್ದಾರೆ. ಆದರೆ ಕರವೇ ಮಾತ್ರ ಪ್ರಕಾಶ್ ರೈ ವಿರುದ್ಧ ತಿರುಗಿ ಬಿದ್ದಿದೆ. ಅವರು ಈ ರೀತಿಯ ಪಾತ್ರ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತವಾಗಿದೆ.
ಕರವೇ ನಾರಾಯಣಗೌಡ ಪ್ರತಿಕ್ರಿಯೆ: ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆಯುವವರೆಗೂ ಚಿತ್ರದ ಬಿಡುಗಡೆ ಅವಕಾಶ ಮಾಡಿಕೊಡುವುದಿಲ್ಲ. ಸಂಜೆ ಚಿತ್ರದ ನಿರ್ಮಾಪಕರು ಚಿತ್ರವನ್ನು ತೋರಿಸಲು ಹೇಳಿದ್ದಾರೆ. ಇಂದು ಸಂಜೆಯವರೆಗೂ ಆ ಚಿತ್ರದ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಒಂದು ವೇಳೆ ಚಿತ್ರ ಪ್ರದರ್ಶನ ಮಾಡಿದರೆ ಮುಂದಿನ ಬೆಳವಣಿಗೆಗಳಿಗೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ. ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ : ಚಿತ್ರಗಳಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಬಿಡಲಿ. ಸಿಂಗಂ ಚಿತ್ರದಲ್ಲಿ ಕನ್ನಡಿಗರನ್ನು ಅವಮಾನ ಮಾಡಲಾಗಿದೆ. ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಬೀದರ್‌ನ ಸಪ್ನಾ ಚಿತ್ರಮಂದಿರ ಸೇರಿದಂತೆ ರಾಜ್ಯದಾದ್ಯಂತ ಸಿಂಗಂ ತೆರೆಕಂಡಿರುವ ಚಿತ್ರಮಂದಿರಗಳ ಮೇಲೂ ಕರವೇ ದಾಳಿ ನಡೆಸಿದ್ದು, ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿ ಪ್ರತಿಭಟಿಸಿದೆ. ಒಟ್ಟಿನಲ್ಲಿ 'ಸಿಂಗಂ' ಚಿತ್ರದ ವಿರುದ್ಧ ಪ್ರತಿಭಟನೆಯ ಕಾವು ಬುಗಿಲೆದ್ದಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











