»   » 'ಕುಸೇಲನ್‌' ರಜನಿಗೆ ಕರ್ನಾಟಕದಲ್ಲಿ ಸಂಕಟಕಾಲ!

'ಕುಸೇಲನ್‌' ರಜನಿಗೆ ಕರ್ನಾಟಕದಲ್ಲಿ ಸಂಕಟಕಾಲ!

Subscribe to Filmibeat Kannada

ಆಗಸ್ಟ್ 1ರಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮಹತ್ವಾಕಾಂಕ್ಷೆಯ ಚಿತ್ರ 'ಕುಸೇಲನ್' ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ಪಿರಮಿಡ್ ಸಾಯಿಮಿರಾ ಸಂಸ್ಥೆ ಮೀನಾಮೇಷ ಎಣಿಸುತ್ತಿದೆ. ಕಾರಣ ಕುಸೇಲನ್ ಚಿತ್ರ ಪ್ರದರ್ಶನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಡ್ಡಿಪಡಿಸಲಿದೆ ಎಂಬಭಯ. ಹಾಗಾಗಿ 'ಕುಸೇಲನ್' ಕರ್ನಾಟಕ ಚಿತ್ರ ವಿತರಕರಿಗೆ 1.50 ಕೋಟಿ ರು.ಗಳಷ್ಟು ನಷ್ಟ ತಂದೊಡ್ಡಲಿದೆ.

*ದಟ್ಸ್ ಕನ್ನಡ ವಿಶೇಷ ವರದಿ

ಹೊಗೇನಕಲ್ ಯೋಜನೆ ಬಗ್ಗೆ ಕರ್ನಾಟದ ನಿಲುವನ್ನು ಪ್ರತಿಭಟಿಸಿ ತಮಿಳು ಚಿತ್ರರಂಗ ಉಪವಾಸ ಸತ್ಯಾಗ್ರಹ ಆಚರಿಸಿತ್ತು. ತಮಿಳರ ಆರಾಧ್ಯ ನಟ ರಜನೀಕಾಂತ್ ಕನ್ನಡಿಗರ ವಿರುದ್ಧ ಕೆಂಡಾಮಂಡಲವಾಗಿದ್ದರು. ಹೊಗೇನಕಲ್ ಯೋಜನೆಯನ್ನು ರಾಜಕೀಯ ಮಾಡಬೇಡಿ ಎಂದು ತಮಿಳು ಚಿತ್ರರಂಗದ ಪರ ಪ್ರತಿಭಟೆನೆಯಲ್ಲಿ ಭಾಗವಹಿಸಿದ್ದರು.

''ನಮ್ಮ ಸ್ವಂತ ನೆಲದ ನೀರನನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ'' ಎಂದು ರಜನಿಕಾಂತ್ ಚೆನ್ನೈನಲ್ಲಿ ಡೈಲಾಗ್ ಹೊಡೆದು ತಮಿಳರ ಚಪ್ಪಾಳೆ ಗಿಟ್ಟಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಜನೀಕಾಂತ್ ಕನ್ನಡಿಗರ ಕ್ಷಮೆ ಯಾಚಿಸಬೇಕು. ಒಂದು ವೇಳೆ ಕ್ಷಮೆ ಯಾಚಿಸದಿದ್ದರೆ ಕರ್ನಾಟಕದಲ್ಲಿ ರಜನಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪಡಿಸುವುದಾಗಿ ಕರವೇ ತಿರುಗೇಟು ಕೊಟ್ಟಿತ್ತು. ಕರ್ನಾಟಕದಲ್ಲಿ ನನ್ನ ಚಿತ್ರಗಳು ಬಿಡುಗಡೆಯಾಗದಿದ್ದರೆ ನನಗೇನು ಸಮಸ್ಯೆಯಾಗುವುದಿಲ್ಲ ಎಂದಿದ್ದರು. ಇದೇ ವೇಳೆಯಲ್ಲಿ ಹೊಗೇನಕಲ್ ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.

''ಹೊಗೇನಕಲ್ ವಿವಾದದ ಸಮಯದಲ್ಲಿ ಕರವೇ ಕಾರ್ಯಕರ್ತರನ್ನು ರಜನೀಕಾಂತ್ ಅವಹೇಳನ ಮಾಡಿದ್ದರು. ಅಂದು ನಮಗಷ್ಟೇ ಮುಖಭಂಗವಾಗಲಿಲ್ಲ ಇಡೀ ರಾಜ್ಯಕ್ಕೆ ಅವಮಾನವಾಯಿತು. ರಜನೀಕಾಂತ್ ಭೇಷರತ್ ಕ್ಷಮೆಯಾಚಿಸಬೇಕು" ಎಂದು ಕರವೇ ಕಾರ್ಯದರ್ಶಿ ದೀಪಕ್ ಶೆಟ್ಟಿ ಆಗ್ರಹಿಸಿದ್ದಾರೆ. ಕರವೇ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಮುಂದೆ ಪ್ರತಿಭಟಿಸಿದ್ದರು.

ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೆ?
'ಇದು ತುಂಬ ಸರಳ. ಕುಸೇಲನ್ ಚಿತ್ರ ಬಿಡುಗಡೆಗೂ ಮುನ್ನ ರಜನೀಕಾಂತ್ ಕನ್ನಡಿಗರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ನಾವು ಚಿತ್ರ ಬಿಡುಗಡೆಗೆ ಅಡ್ಡಿ ಪಡಿಸುತ್ತೇವೆ. ಈ ಬಗ್ಗೆ ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಗೆ ಮುಚ್ಚಳಿಕೆ ಪತ್ರ ಸಲ್ಲಿಸಿದ್ದೇವೆ. ಅವರು ನಮ್ಮ ಬೇಡಿಕೆ ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದಾರೆ' ಎಂದು ದೀಪಕ್ ಹೇಳಿದರು. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಕುಸೇಲನ್ ಚಿತ್ರವನ್ನು ನಿಗದಿತ ಸಮಯದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಈ ವಿವಾದವನ್ನ್ನು ಬಗೆಹರಿಸುವುದಾಗಿ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷೆ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

''ಈ ಸಮಸ್ಯೆ ನನಗೆ ಸವಾಲಿದ್ದಂತೆ. ಕೇವಲ ಸ್ವಾರ್ಥಕ್ಕಾಗಿ ರಜನೀಕಾಂತ್‌ನಂತಹ ನಟ ಹೋರಾಟಕ್ಕಿಳಿಯುವುದು ನನಗಿಷ್ಟವಿಲ್ಲ. ಈ ಕುರಿತು ರಜನೀಕಾಂತ್‌ರ ಬಳಿ ಮಾತನಾಡಿದ್ದೇನೆ. ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು ಈ ಸಮಸ್ಯೆಯನ್ನು ಮತ್ತಷ್ಟು ಎಳೆಯುವುದು ನನಗಿಷ್ಟವಿಲ್ಲ ಎಂದಿದ್ದಾರೆ'' ಎಂದು ಜಯಮಾಲಾ ತಿಳಿಸಿದರು.

''ಇದರಿಂದ ಕನ್ನಡ ಮತ್ತು ತಮಿಳು ಚಿತ್ರೋದ್ಯಮದ ಕಲಾವಿದರಿಗೆ ಅಪಾರ ನಷ್ಟ ಉಂಟಾಗಲಿದೆ ಎಂದು ವಾಣಿಜ್ಯ ಮಂಡಲಿಯ ಉಪಾಧ್ಯಕ್ಷ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ. ಶಾಂತಿಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಈ ಬಗ್ಗೆ ರಜನೀಕಾಂತ್ ಪ್ರತಿಕ್ರಿಯಿಸದಿದ್ದರೆ ತಮಿಳು ಚಿತ್ರರಂಗ ಹಾಗೂ ಕರ್ನಾಟಕದ ಚಿತ್ರ ಪ್ರದರ್ಶಕರು ಮತ್ತು ವಿತರಕರು ಭಾರೀ ನಷ್ಟ ಅನುಭವಿಸುತ್ತಾರೆ. ಕುಸೇಲನ್‌ಗಾಗಿ ವಿತರಕರು ಹಾಗೂ ಪ್ರದರ್ಶಕರು ಜಾತಕ ಪಕ್ಷಿಗಳ ಹಾಗೆ ಕಾದುಕುಳಿತಿದ್ದಾರೆ. ರೀಲ್ ಬಾಕ್ಸ್‌ಗೆ ಈಗಾಗಲೇ ಅವರ ದುಡ್ಡು ಸಂದಾಯವಾಗಿದೆ. ಇದರ ಮಧ್ಯೆ ಕರವೇ ಹೋರಾಟಕ್ಕೆ ಮುಂದಾದರೆ ನಮಗೂ ನಷ್ಟ ತಪ್ಪಿದ್ದಲ್ಲ ಎಂದು ರಾಕ್‌ಲೈನ್ ಪ್ರತಿಕ್ರಿಯಿಸಿದರು.

ಏತನ್ಮಧ್ಯೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ತಮಿಳು ಚಿತ್ರ ನಿರ್ಮಾಪಕರ ಸಮಿತಿ ಕರ್ನಾಟಕದಲ್ಲಿ ಕುಸೇಲನ್ ಚಿತ್ರವನ್ನು ನಿಗದಿತ ಸಮಯಕ್ಕೆ ಬಿಡುಗಡೆಗೆ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ. ರಜನೀಕಾಂತ್ ಕನ್ನಡಿಗರ ಕ್ಷಮೆ ಯಾಚಿಸಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ರಜನಿ ಕ್ಷಮೆ ಯಾಚಿಸುತ್ತಾರಾ ಅಥವಾ ಇಲ್ಲವೆ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.

  • ಹೊಗೇನಕಲ್ ಯೋಜನೆ ಅನೂರ್ಜಿತ: ಈಶ್ವರಪ್ಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada