»   » ನ.25ರಿಂದ ಗೋಕಾಕ್‌ ಭಾಗ-2 ; ರಾಜ್‌-ವಿಷ್ಣು ನೇತೃತ್ವದಲ್ಲಿ ಚಳವಳಿ

ನ.25ರಿಂದ ಗೋಕಾಕ್‌ ಭಾಗ-2 ; ರಾಜ್‌-ವಿಷ್ಣು ನೇತೃತ್ವದಲ್ಲಿ ಚಳವಳಿ

Posted By:
Subscribe to Filmibeat Kannada

ಬೆಂಗಳೂರು : ಚಿತ್ರೋದ್ಯಮದ ಬಿಕ್ಕಟ್ಟು ಈಗ ತೀವ್ರ ಸ್ವರೂಪವನ್ನು ಪಡೆದಿದೆ. ನವೆಂಬರ್‌25 ರಿಂದ ಡಾ.ರಾಜ್‌ಕುಮಾರ್‌ ನೇತೃತ್ವದಲ್ಲಿ ಅನಿರ್ದಿಷ್ಟ ಕಾಲ ಧರಣಿ ಹಾಗೂ ಬಂದ್‌ ನಡೆಸಲು ಚಿತ್ರೋದ್ಯಮ ಮುಂದಾಗಿದೆ.

ನ. 25ರಂದು ವಿಧಾನಸೌಧದ ಆವರಣದಲ್ಲಿರುವ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಬಳಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಚಿತ್ರೋದ್ಯಮದ ಸಂಪೂರ್ಣ ಚಟುವಟಿಕೆಗಳು ಅಂದಿನಿಂದ ಸ್ಥಗಿತಗೊಳ್ಳಲಿದೆ. ಇದೇ ವೇಳೆಯಲ್ಲಿ ಮೂರು ವಾರಗಳ ಒಪ್ಪಂದ ಉಲ್ಲಂಘಿಸಿ ಕನ್ನಡೇತರ ಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುವುದು. ರಾಜ್‌ ಸೇರಿದಂತೆ ಎಲ್ಲ ನಟರೂ ಬಂಧನಕ್ಕೆ ಸಿದ್ಧರಾಗಿದ್ದಾರೆ ಎಂದು ಕನ್ನಡ ಚಿತ್ರೋದ್ಯಮ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ನಟ ಅಶೋಕ್‌ ತಿಳಿಸಿದ್ದಾರೆ.

ಚಿತ್ರೋದ್ಯಮ ತನ್ನ ಹೋರಾಟದಲ್ಲಿ ಕಾವೇರಿ ಸಮಸ್ಯೆ, ಕನ್ನಡ ಅನುಷ್ಠಾನ ಮತ್ತಿತರ ನಾಡು ನುಡಿಗೆ ಪೂರಕವಾಗಿರುವ ವಿಚಾರಗಳನ್ನು ಸಹಾ ಕೈಗೆತ್ತಿಗೊಂಡಿದೆ. ಸಾಹಿತಿಗಳು, ಕಲಾವಿದರು, ಕರುನಾಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ರೈತ ಸಂಘ ಮತ್ತಿತರ ಸಂಘಟನೆಗಳು ಪ್ರತಿಭಟನೆಯನ್ನು ಬೆಂಬಲಿಸಿವೆ.

ಪರಭಾಷಾ ಚಿತ್ರಗಳ ಬಿಡುಗಡೆಗೆ ವಿಧಿಸಿರುವ ಮೂರು ವಾರಗಳ ನಿರ್ಬಂಧವನ್ನು ಕಾನೂನಾಗಿ ಪರಿವರ್ತಿಸಬೇಕು. ಸದ್ಯದ ಒಪ್ಪಂದವನ್ನು ಗಾಳಿಗೆ ತೂರಿ ಹೊಸ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಪರವಾನಗಿಯನ್ನು ರದ್ದುಪಡಿಸಬೇಕು. ಪರಭಾಷಾ ಚಿತ್ರಗಳ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಡಲು ನಿರ್ಧರಿಸಲಾಗಿದೆ.

ಈ ಸಂಬಂಧ ನಡೆದ ಚಿತ್ರೋದ್ಯಮದ ಸಭೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌, ವಿಷ್ಣುವರ್ಧನ್‌, ಮುಖ್ಯಮಂತ್ರಿ ಚಂದ್ರು, ಅಶೋಕ್‌, ಎಸ್‌. ವಿ.ರಾಜೇಂದ್ರ ಸಿಂಗ್‌ ಬಾಬು, ನಾಗಾಭರಣ, ಬಸಂತ್‌ ಕುಮಾರ್‌ ಪಾಟೀಲ್‌, ಅಂಬರೀಷ್‌, ರವಿಚಂದ್ರನ್‌ ಮತ್ತಿತರರು ಪಾಲ್ಗೊಂಡಿದ್ದರು.

ನಮ್ಮ ದಾರಿ ನಮ್ಮದು : ಪ್ರತಿರೋಧಕ್ಕೆ ಸೊಪ್ಪು ಹಾಕದ ಪ್ರದರ್ಶಕರು ವೀರ್‌ಝಾರಾ ಬೆನ್ನಲ್ಲಿಯೇ ಹಿಂದಿಯ ಹಲ್‌ ಚಲ್‌ ಹಾಗೂ ತಮಿಳಿನ ಮನ್ಮಥನ್‌ ಚಿತ್ರವನ್ನು ನಗರದ ವಿವಿಧ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಸಜ್ಜಾಗಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada