ನಟಿ ಪೂಜಾಗಾಂಧಿ ನೆತ್ತಿ ಮೇಲೆ ಬಹಿಷ್ಕಾರ ತೂಗು ಕತ್ತಿ
ನಟಿ ರಮ್ಯಾಗೆ ಒಂದು ವರ್ಷ ಬಹಿಷ್ಕಾರ ಹಾಕಿದ ಫಿಲಂ ಚೇಂಬರ್ ನಟಿ ಪೂಜಾಗಾಂಧಿ ಅವರ ಮೇಲೂ ಕ್ರಮ ಕೈಗೊಳ್ಳಲು ಮುಂದಾಗಿದೆ. 'ನೀ ಇಲ್ಲದೆ' ನಿರ್ದೇಶಕ ಶಿವ ಗಣಪತಿ ಅವರನ್ನು ಬೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪೂಜಾಗಾಂಧಿ ಅವರಿಗೂ ಆರು ತಿಂಗಳು ಬಹಿಷ್ಕಾರ ಹಾಕುವುದಾಗಿ ನಿರ್ಮಾಪಕರ ಸಂಘ ಎಚ್ಚರಿಸಿದೆ.
'ನೀ ಇಲ್ಲದೆ' ಚಿತ್ರದ ಬಾಕಿ ಸಂಭಾವನೆ ರು.4 ಲಕ್ಷ ಕೊಟ್ಟಿಲ್ಲ ಎಂದು ಕಲಾವಿದರ ಸಂಘಕ್ಕೆ ದೂರು ನೀಡಿದ್ದರು ಪೂಜಾಗಾಂಧಿ. ಹಾಗೆಯೇ ಎ ಗಣೇಶ್ ಚಿತ್ರದಲ್ಲಿ ನಟಿಸಬಾರದು ಎಂದು ಹೇಳಿಕೆ ಕೊಟ್ಟಿದ್ದರು. ಇದು ತಪ್ಪು ಎಂದಿರುವ ನಿರ್ಮಾಪಕರ ಸಂಘ, ಪೂಜಾಗಾಂಧಿ ನಿರ್ಮಾಪಕರ ಬಳಿ ಕ್ಷಮೆ ಕೋರಬೇಕು ಎಂದು ಫರ್ಮಾನು ಹೊರಡಿಸಿದೆ.
ಒಂದು ವೇಳೆ ಪೂಜಾಗಾಂಧಿ ಅವರು ನಿರ್ಮಾಪಕ ಎ ಗಣೇಶ್ ಅವರನ್ನು ಕ್ಷಮೆ ಕೇಳಲಿಲ್ಲ ಎಂದರೆ ಅವರಿಗೂ ಆರು ತಿಂಗಳು ಬಹಿಷ್ಕಾರ ಹಾಕುವುದಾಗಿ ಸಂಘ ಎಚ್ಚರಿಕೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾಗಾಂಧಿ, ಬಾಕಿ ಹಣ ಕೇಳುವುದು ತಪ್ಪೇ? ನನಗೆ ಕಲಾವಿದರ ಸಂಘದ ಬೆಂಬಲ ಇದೆ. ಅವರು ಏನು ಹೇಳುತ್ತಾರೋ ಅದರ ಪ್ರಕಾರ ಮುಂದಿನ ಹೆಜ್ಜೆ ಇಡುತ್ತೇನೆ ಎಂದಿದ್ದಾರೆ.
ಏತನ್ಮಧ್ಯೆ 'ನೀ ಇಲ್ಲದೆ' ಚಿತ್ರ ಮಾರ್ಚ್ 25ರಂದು ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೆ ಎಲ್ಲಿ ತೊಂದರೆಯಾಗುತ್ತದೋ, ಚಿತ್ರ ಬಿಡುಗಡೆಯನ್ನು ತಡೆಯದಂತೆ ನಿರ್ದೇಶಕ ಶಿವ ಗಣಪತಿ ಹೈಕೋರ್ಟ್‌ನಿಂದ ಕೇವಿಯಟ್ ತಂದಿದ್ದಾರೆ. ಪೂಜಾಗಾಂಧಿ ಜೊತೆ ಸವಾರಿ ಖ್ಯಾತಿಯ ರಘು ಮುಖರ್ಜಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications