For Quick Alerts
  ALLOW NOTIFICATIONS  
  For Daily Alerts

  ‘ನಿನಗಾಗಿ’ಯ ನವ ನಾಯಕಿ ರಾಧಿಕ ಪಾಣಿಗ್ರಹಣ ಪ್ರಸಂಗ

  By Staff
  |

  ಹೆಸರು ರಾಧಿಕ. ಪ್ರತಿಭೆ- ನಿರ್ದೇಶಕರು ಹೇಳುವಷ್ಟು ಕನಿಷ್ಠ ಬಟ್ಟೆಯನ್ನು ಯಾವುದೇ ಮುಜುಗರವಿಲ್ಲದೆ ತೊಡುವುದು. ಪ್ರಶ್ನೆಗಳನ್ನು ಮುಂದಿಟ್ಟರೆ- ಮೊದಲೇ ರಿಹರ್ಸಲ್‌ ಮಾಡಿಕೊಂಡಂತೆ, ಥೇಟ್‌ ಸಿನಿಮಾ ಶೈಲಿಯಲ್ಲಿ ಎರಡೋ ಮೂರೋ ಮಾತು. ಮುಗ್ಧ ಮುಖದಲ್ಲಿ ಇದೀಗ ಸಂದಿಗ್ಧ ಭಾವ. ಕಾರಣ- ಈಕೆಯ ಕುರಿತು ಕೋರ್ಟು ಸರ್ಚ್‌ ವಾರೆಂಟ್‌ ಹೊರಡಿಸಿದೆ. ಅಂದಹಾಗೆ, ರಾಧಿಕ ಇನ್ನೂ ತೆರೆ ಕಾಣದ ನಾಲ್ಕು ಚಿತ್ರಗಳ ನಾಯಕಿ.

  ಸರ್ಚ್‌ ವಾರೆಂಟ್‌ ಯಾಕೆ?
  ರಾಧಿಕ ಮಂಗಳೂರಿನ ಹುಡುಗಿ. ರತನ್‌ಕುಮಾರ್‌ ಎಂಬಾತನ ಫೈನಾನ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ರತನ್‌ ಹಾಗೂ ರಾಧಿಕ ಒಬ್ಬರನ್ನೊಬ್ಬರು ಇಷ್ಟಪಟ್ಟು, ಕಟೀಲಿನಲ್ಲಿ ಮದುವೆ ಮಾಡಿಕೊಂಡರು. ರಾಧಿಕಾಳನ್ನು ಕಂಡರೆ ಅತ್ತೆಗೆ ಪ್ರೀತಿ. ಸಿನಿಮಾದಲ್ಲಿ ನಟಿಸುವೆಯಾ ಅಂತ ಕೇಳಿದರು. ರಾಧಿಕ ಒಪ್ಪಿದರು. ಗಂಡನ ಸಹಕಾರವೂ ಇತ್ತು. ಈಕೆಯ ಫೋಟೋಗಳನ್ನು ವಿಜಯಚಿತ್ರ ಆಫೀಸಿಗೆ ಕಳಿಸಿಕೊಟ್ಟರು. ಅತ್ತೆಯ ಕಾಂಟಾಕ್ಟ್ಸ್‌ ಮೇಲೆ ‘ನೀಲ ಮೇಘ ಶ್ಯಾಮ’ ಚಿತ್ರದಲ್ಲಿ ರಾಧಿಕಾಗೆ ಚಾನ್ಸ್‌ ಸಿಕ್ಕಿತು. ಲೋಕೇಶ್‌ ಮಗ ಸೃಜನ್‌ ಇದರ ನಾಯಕ.

  ಆ ಸಿನಿಮಾ ಅಭಿನಯಕ್ಕೆ ರಾಧಿಕಾಗೆ ಸಿಕ್ಕ ಸಂಭಾವನೆ ಕೇವಲ 10 ಸಾವಿರ ರುಪಾಯಿ. ಆಮೇಲೆ ರಾಮೋಜಿ ರಾವ್‌ ಬಳಗದ ‘ನಿನಗಾಗಿ’ ಎಂಬ ರೀಮೇಕ್‌ ಚಿತ್ರಕ್ಕೆ ಈಕೆಯನ್ನೇ ನಾಯಕಿಯಾಗಿ ಆರಿಸಿಕೊಂಡರು. ಈಗ ರಾಧಿಕ ಸಂಭಾವನೆ 90 ಸಾವಿರ ರುಪಾಯಿ. ‘ನಿನಗಾಗಿ’ ಮೂಲಕ ವಿಜಯ ರಾಘವೇಂದ್ರ ಕೂಡ ನಾಯಕನಾಗಿ ಬಡ್ತಿ ಪಡೆದರು. ಈತನ ನಾಯಕತ್ವದ ‘ಪ್ರೇಮ ಖೈದಿ’ ಹಾಗೂ ‘ರೋಮಿಯೋ ಜ್ಯೂಲಿಯಟ್‌’ಗೂ ರಾಧಿಕ ನಾಯಕಿ.

  ರಾಧಿಕ ಇನ್ನೂ ಇಪ್ಪತ್ತರ ಹುಡುಗಿ. ಮುದ್ದು ಮುದ್ದು ಮುಗ್ಧೆ ಎಂದು ನಂಬಿದ್ದ ಸ್ಯಾಂಡಲ್‌ವುಡ್‌ ಮಂದಿ, ಈಕೆಗೆ ಮದುವೆಯಾಗಿಬಿಟ್ಟಿದೆ, ಗಂಡ ಇವಳಿಗಾಗಿ ಹುಡುಕುತ್ತಿದ್ದಾನೆ ಎಂಬ ಸುದ್ದಿ ಕೇಳಿ ಬೇಸ್ತು ಬಿದ್ದರು. ಯಾಕೆಂದರೆ, ರಾಧಿಕ ತನ್ನ ಮದುವೆಯನ್ನು ಗುಟ್ಟಾಗಿಟ್ಟಿದ್ದರು. ಹೆಂಡತಿಗಾಗಿ ಹುಡುಕಿ ಹುಡುಕಿ ಸಾಕಾದ ರತನ್‌ ಕೋರ್ಟಿನ ಮೊರೆ ಹೊಕ್ಕಿದ್ದಾರೆ. ಈಗ ಸರ್ಚ್‌ ವಾರೆಂಟ್‌ ಹೊರಬಿದ್ದಿದೆ.

  ರಾಧಿಕ ಗಂಡನನ್ನು ಬಿಟ್ಟದ್ದು ಯಾಕೆ?
  ಸಿನಿಮಾದಲ್ಲಿ ಮಗಳಿಗೆ ಚಾನ್ಸ್‌ ಸಿಕ್ಕಿದ್ದನ್ನು ಕೇಳಿ ಬೀಗಿದ್ದು ರಾಧಿಕಾಳ ಅಪ್ಪ ದೇವರಾಜ್‌ ಶೆಟ್ಟಿ ಮತ್ತು ಅಮ್ಮ ಸುರೇಖ. ಮಗಳ ಯಶಸ್ಸನ್ನು ಕೇಳಿ, ಸಂತೋಷ ಪಟ್ಟುಕೊಂಡು ಸುಮ್ಮನಾಗಿದ್ದರೆ ಪರಿಸ್ಥಿತಿ ಪ್ರಕೋಪಕ್ಕೆ ತಿರುಗುತ್ತಿರಲಿಲ್ಲ. ಮಗಳ ಯಶಸ್ಸಿನಲ್ಲಿ ತಂದೆ-ತಾಯಿ ಪಾಲು ಬಯಸಿದರು. ಮಗಳ ಸಂಭಾವನೆ 90 ಸಾವಿರಕ್ಕೇರಿದ್ದು ಗೊತ್ತಾಗಿದ್ದೇ ತಡ, ಗಂಡನ ಮನೆಯಿಂದ ಮಗಳನ್ನು ಹೊರಗೆ ತಂದು, ಸ್ಯಾಂಡಲ್‌ವುಡ್‌ ಓಣಿಗಳಲ್ಲಿ ಆಕೆಯ ಜೊತೆಯಲ್ಲೇ ಸದಾ ಓಡಾಡತೊಡಗಿದ್ದಾರೆ ದೇವರಾಜ್‌ ಶೆಟ್ಟಿ. ಅವರದು ಬೆಟ್ಟದಷ್ಟು ಸಾಲವಿದೆಯಂತೆ. ಮಗಳು ಮಾಡುವ ದುಡ್ಡೆಲ್ಲಾ ತಮಗೇ ಉಳಿಯಲೆಂಬುದು ಅವರ ಉಮೇದಿ ಎನ್ನುತ್ತಾರೆ ರತನ್‌.

  ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬರುತ್ತೇವೆ ಎಂದು ಹೇಳಿ, ರಾಧಿಕಾಳನ್ನು ಆಕೆಯ ಅಪ್ಪ- ಅಮ್ಮ ಕರೆದೊಯ್ದರು. ಆಮೇಲೆ ಆಕೆ ನಾಪತ್ತೆ. ನನ್ನ ಸೊಸೆ ಸಿನಿಮಾದಲ್ಲಿ ನಟಿಸಿ, ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲೆಂದು ನಾನೇ ಆಕೆಯನ್ನು ಸಿನಿಮಾಗೆ ಸೇರಿಸಿದೆ. ಈಗ ನೋಡಿದರೆ, ಹೀಗೆ ಮಾಡಿದ್ದಾಳೆ ಎಂದು ರಾಧಿಕಾಳ ಅತ್ತೆ ಬೇಸರದಿಂದ ಹೇಳುತ್ತಿದ್ದಾರೆ.

  ಮೊನ್ನೆ ರೋಮಿಯೋ ಜ್ಯೂಲಿಯಟ್‌ ಚಿತ್ರದ ಮುಹೂರ್ತದಲ್ಲಿ ರಾಧಿಕ ನಿಗಿನಿಗಿಸುತ್ತಿದ್ದರು. ಆಕೆಯನ್ನು ಸರ್ಚ್‌ ಮಾಡುವ ಅಗತ್ಯವೇ ಇಲ್ಲ ಎಂಬಷ್ಟು ಆರಾಮ. ಏನಿದೆಲ್ಲ ಎಂದು ಕೇಳಿದರೆ, ‘ವಾರೆಂಟ್‌ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲದಕ್ಕೂ ನನ್ನಲ್ಲಿ ಉತ್ತರವಿದೆ. ಸದ್ಯದಲ್ಲೇ ಮಾಧ್ಯಮಗಳಿಗೆ ಹೇಳುತ್ತೇನೆ. ಅಲ್ಲಿಯವರೆಗೂ ನೋ ಕಾಮೆಂಟ್ಸ್‌’ ಅಂದರು.

  ರಾಧಿಕ ಪ್ರಕರಣ ಕೇಳಿ ಅನೇಕರು ಹೇಳುತ್ತಿರುವ ಮಾತು- Money makes many things !

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X