For Quick Alerts
  ALLOW NOTIFICATIONS  
  For Daily Alerts

  ಯಾವ ತ್ಯಾಗಕ್ಕೂ ಸಿದ್ಧ -ಡಾ.ರಾಜ್‌; ಜೈಲಿಗೆ ಹೋಗಲು ಸಿದ್ಧ -ವಿಷ್ಣು

  By Staff
  |

  ಬೆಂಗಳೂರು : ಕನ್ನಡ ಚಿತ್ರೋದ್ಯಮದಲ್ಲಿನ ಒಡಕುಗಳು, ಭಿನ್ನಾಭಿಪ್ರಾಯಗಳು ಪರಭಾಷಾ ಚಿತ್ರ ವಿರೋಧಿ ಸಮರದ ಹಿನ್ನೆಲೆಯಲ್ಲಿ ಬದಿಗೆ ಸರಿಯುತ್ತಿವೆ. ಸದಾಶಿವ ನಗರದಲ್ಲಿರುವ ರಾಜ್‌ ನಿವಾಸ ಈಗ ಸಮರದ ಸಮಾಲೋಚನಾ ಕೇಂದ್ರವಾಗಿ ಪರಿವರ್ತಿತವಾಗಿದೆ. ಚಿತ್ರೋದ್ಯಮದ ಪ್ರತಿಷ್ಠಿತರು ಒಂದೇ ವೇದಿಕೆಯಡಿ ಸೇರುತ್ತಿರುವುದರಿಂದ ಸಮರಕ್ಕೆ ಮತ್ತಷ್ಟು ಬಲ ಸಿಕ್ಕಿದೆ.

  ನ.25 ರಂದು ಪೂರ್ವ ನಿಗದಿಯಂತೆ ರಾಜ್ಯವ್ಯಾಪಿ ಪ್ರತಿಭಟನೆಗೆ ಚಿತ್ರೋದ್ಯಮ ಸಜ್ಜಾಗಿದೆ. ಅಂದು ವಿಧಾನ ಸೌಧದ ಮುಂಭಾಗದಲ್ಲಿ ಧರಣಿ ನಡೆಸಿ, ಬಿಕ್ಕಟ್ಟು ನಿವಾರಣೆಗಾಗಿ ಸರಕಾರಕ್ಕೆ ನಾಲ್ಕು ದಿನಗಳ ಗಡುವು ನೀಡಲು ನಿರ್ಧರಿಸಲಾಗಿದೆ. ಸಮಸ್ಯೆ ತಿಳಿಯಾಗದಿದ್ದರೆ, ನ.29 ರಿಂದ ಅನಿರ್ದಿಷ್ಟ ಕಾಲ ಚಳವಳಿ ಹಾಗೂ ಪರಭಾಷಾ ಚಿತ್ರಮಂದಿರಗಳ ಮೇಲೆ ದಾಳಿನಡೆಸುವ ಕ್ರಿಯಾ ಯೋಜನೆ ಸಿದ್ಧವಾಗಿದೆ.

  ಸಮರ ಘೋಷಣೆ : ಈ ವಿಚಾರದಲ್ಲಿ ನನ್ನ ತಿಳಿವಳಿಕೆ ಕಡಿಮೆ. ಆದರೆ ಎಲ್ಲರೂ ಒಂದೆಡೆ ಸೇರಿರುವುದನ್ನು ಗಮನಿಸಿದರೆ, ಚಿತ್ರರಂಗಕ್ಕೆ ಎದುರಾಗಿರುವ ಕಷ್ಟದ ಅರಿವಾಗುತ್ತದೆ. ನಾನು ಕನ್ನಡಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎನ್ನುವ ಮೂಲಕ ವರನಟ ಡಾ. ರಾಜ್‌ಕುಮಾರ್‌ ಸಮರವನ್ನು ಘೋಷಿಸಿದ್ದಾರೆ.

  ನಟ ವಿಷ್ಣುವರ್ಧನ್‌ ಚಳವಳಿಯತ್ತ ವಿಶೇಷ ಆಸಕ್ತಿವಹಿಸಿದ್ದು - ನಮ್ಮ ಬೆರಳೇ ನಮಗೆ ಚುಚ್ಚುತ್ತಿದೆ. ಭಾಷೆಗೆ ಮಹತ್ವನೀಡದಿದ್ದರೆ ನಾವು ಉಳಿಯುವುದಿಲ್ಲ. ಭಾವನೆಗಿಂತಲೂ ನಾವೇ ರೂಪಿಸಿದ ಕಾನೂನು ದೊಡ್ಡದಲ್ಲ. ರಾಜಣ್ಣ ಬಂದ ಮೇಲೆ ಹೋರಾಟಕ್ಕೆ ಶಕ್ತಿ ಬಂದಿದೆ. ಕನ್ನಡಕ್ಕಾಗಿ ಜೈಲು ಸೇರಲು ನಾನು ಸಿದ್ಧ ಎಂದು ಹೇಳಿದ್ದಾರೆ.

  ಧರ್ಮ ಸಂಕಟ : ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿಸಲು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಸೋಮವಾರ(ನ.22) ಕರೆದಿದ್ದ ಸಭೆ ವಿಫಲವಾಗಿದೆ. ಚಿತ್ರೋದ್ಯಮದ ಗಣ್ಯರು ಹಾಗೂ ಪ್ರದರ್ಶಕರ ವಲಯದ ಗೈರು ಹಾಜರಿಯಿಂದ , ಸಮಸ್ಯೆ ಮತ್ತಷ್ಟು ಕಾವು ಪಡೆದಿದೆ.

  ಸಂವಿಧಾನದ ಭೂತ ಒಂದು ಕಡೆಯಾದರೆ, ನಾಡು-ನುಡಿಯ ಕಾಳಜಿ ಸರಕಾರವನ್ನು ಕಾಡುತ್ತಿದೆ. ಮುಖ್ಯಮಂತ್ರಿಗಳು ಈಗ ಧರ್ಮ ಸಂಕಟದಲ್ಲಿ ಸಿಲುಕಿದ್ದಾರೆ.

  (ಇನ್ಫೋ ವಾರ್ತೆ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X