»   » ಗೋವಾದಿಂದ ಸರೋಜಾ ದೇವಿ ಹಠಾತ್ ವಾಪಸ್

ಗೋವಾದಿಂದ ಸರೋಜಾ ದೇವಿ ಹಠಾತ್ ವಾಪಸ್

Subscribe to Filmibeat Kannada
actress b saroja devi
ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಿಂದ ಹಿರಿಯ ನಟಿ ಬಿ.ಸರೋಜಾ ದೇವಿ ಹಠಾತ್ ವಾಪಾಸ್ಸಾಗಿದ್ದಾರೆ. ಚಲನ ಚಿತ್ರೊತ್ಸವದಲ್ಲಿ ಅವರಿಗೆ ಒದಗಿಸಿರುವ ವ್ಯವಸ್ಥೆಗಳು ಸರಿ ಇಲ್ಲ ಎಂಬುದು ಅವರ ಮುನಿಸಿಗೆ ಕಾರಣವಾಗಿದೆ.

ಆದರೆ ಈ ಸುದ್ದಿಯನ್ನು ಸರೋಜಾ ದೇವಿ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಮಗೆ ಬಿಡುವಿಲ್ಲದ ಕಾರಣ ಬೆಂಗಳೂರಿಗೆ ಮರಳಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. 'ನಾನು ಶನಿವಾರ ಉದ್ಘಾಟನಾ ಸಮಾರಂಭಕ್ಕೆ ಬಂದೆ. ರಾತ್ರಿ ಹೋಟೆಲ್ ನಲ್ಲಿ ಇಳಿದುಕೊಂಡಿದ್ದೆ. 26ನೇ ತಾರೀಖಿನ ವರೆಗೆ ಇರುವಂತೆ ಸೂಚಿಸಿದರು. ಆದರೆ ಅಷ್ಟು ದಿನ ಇರಲು ಸಾಧ್ಯವಿಲ್ಲ ಎಂದು ಇಂದೇ ವಾಪಸ್ಸಾದೆ' ಎಂದು ಹೇಳಿರುವುದಾಗಿ 'ಪ್ರಜಾವಾಣಿ' ಪತ್ರಿಕೆ ಪ್ರಕಟಿಸಿದೆ.

ಆದರೆ, ಪಂಚತಾರಾ ಹೋಟೆಲ್ ನಲ್ಲಿ ಸರೋಜಾದೇವಿ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ವ್ಯವಸ್ಥೆಗಳು ಸರಿಇಲ್ಲದ ಕಾರಣಕ್ಕೆ ಅವರು ಬೇಸರಗೊಂಡು ಬೆಂಗಳೂರಿಗೆ ವಾಪಸ್ಸಾದರು ಎನ್ನುತ್ತಾರೆ ಆಯೋಜಕರು. ತಮ್ಮ ಕಿವಿಗೂ ಈ ವಿಚಾರ ಬಿದ್ದಿರುವುದಾಗಿ ಚಿತ್ರೋತ್ಸವ ನಿರ್ದೇಶನಾಲಯದ ನಿರ್ದೇಶಕ ಎಸ್.ಎಂ.ಖಾನ್ ಅವರು ಸ್ಪಷ್ಟಪಡಿಸಿದ್ದಾರೆ.

ಇಲ್ಲಿನವರ ವರ್ತನೆಯಲ್ಲಿ ಆರ್ಯರು, ದ್ರಾವಿಡರು ಎಂಬ ಭೇದ ಭಾವ ಇದೆ. ಇದು ತಮ್ಮ ಗಮನಕ್ಕೂ ಬಂದಿರುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಹೇಳುತ್ತಾರೆ. ಚಲನಚಿತ್ರೋತ್ಸವಕ್ಕೆ ಅತಿಥಿಗಳಾಗಿ ಕರೆದಿರುವ ಎಲ್ಲರಿಗೂ ವಿಮಾನದ ಟಿಕೆಟ್, ಉಳಿದುಕೊಳ್ಳಲು ಸ್ಥಳ ಹಾಗೂ ಚಿತ್ರಗಳನ್ನು ನೋಡಲು ಟಿಕೆಟ್ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಹೀಗಿದ್ದೂ ಸರೋಜಾ ದೇವಿ ಮಾತ್ರ ಒಂದೇ ದಿನದಲ್ಲಿ ಹಿಂದಿರುಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಚಲನ ಚಿತ್ರೋತ್ಸವದಲ್ಲಿ ಸರೋಜಾ ದೇವಿ ಅವರ'ಬಬ್ರುವಾಹನ' ಸೇರಿದಂತೆ ಮೂರು ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada