»   » ತಮಿಳಿನತ್ತ ಗುಳೆ ಹೊರಟ ಓಂ ಪ್ರಕಾಶ್ ರಾವ್

ತಮಿಳಿನತ್ತ ಗುಳೆ ಹೊರಟ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದ ಯಶಸ್ವಿ ನಿರ್ದೇಶಕ ಓಂ ಪ್ರಕಾಶ್ ರಾವ್ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ತಮಿಳಿನ ಸುಪ್ರೀಮ್ ಸ್ಟಾರ್ ಶರತ್ ಕುಮಾರ್ ನಾಯಕ ನಟನಾಗಿ ನಟಿಸಲಿರುವ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಲಿದ್ದಾರೆ. ಶಂಕರೇಗೌಡ ಹಾಗೂ ಶಂಕರ ರೆಡ್ಡಿ ನಿರ್ಮಿಸುತ್ತಿರುವ ಚಿತ್ರ ನವೆಂಬರ್ ತಿಂಗಳಲ್ಲಿ ಸೆಟ್ಟೇರಲಿದೆ.

ನಿರ್ಮಾಪಕರೊಂದಿಗೆ ಚೆನ್ನೈಗೆ ಹೋಗಿ ಜು.14ರಂದು ಶರತ್ ಕುಮಾರ್ ಹುಟ್ಟುಹಬ್ಬದ ದಿನ ಮುಂಗಡ ಹಣ ಕೊಟ್ಟು ಬಂದಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಈ ಮಹತ್ವದ ವಿಷಯವನ್ನು ಓಂ ಪ್ರಕಾಶ್ ರಾವ್ ಮಾಧ್ಯಮದವರಿಗೆ ತಿಳಿಸಿದರು. ಕಥಾವಸ್ತುವನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಒಂದೇ ಒಂದು ಸಾಲಿನಲ್ಲಿ ಚಿತ್ರಕಥೆಯನ್ನು ಶರತ್ ಕುಮಾರ್‌‍ಗೆ ತಿಳಿಸಿ ಒಪ್ಪಿಸಿದ್ದೇವೆ. ಚಿತ್ರಕಥೆ, ಸಂಭಾಷಣೆ ಮುಗಿದ ನಂತರ ಇತರ ತಾರಾಬಳಗದ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು ಓಂ ಪ್ರಕಾಶ್. ಈ ಬಗ್ಗೆ ಶರತ್ ಕುಮಾರ್ ಬಳಿ ಮಾತನಾಡಿದ್ದೇವೆ ಯಾವುದೇ ಸಮಸ್ಯೆಗಳಿಲ್ಲ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಆದರೆ ಈ ಚಿತ್ರದ ಪೋಷಕ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಕನ್ನಡ ಚಿತ್ರೋದ್ಯಮ ಸುವರ್ಣಯುಗದಲ್ಲಿದೆ. ಕನ್ನಡ ಚಿತ್ರೋದ್ಯಮದಲ್ಲಿ ಕಡಿಮೆ ಬಂಡವಾಳ ಹೂಡಿ ಉತ್ತಮ ಚಿತ್ರಗಳನ್ನು ನಿರ್ಮಿಸಿ ಹೆಚ್ಚುಹೆಚ್ಚು ದುಡ್ಡು ಬಾಚುತ್ತಿರುವ ಈ ಪರ್ವಕಾಲದಲ್ಲಿ ಇವರ್ಯಾಕೆ ಅತ್ತ ಗುಳೆ ಹೊರಟರೋ ಆ ಭಗವಂತನೇ ಬಲ್ಲ!

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada