ರಮ್ಯಾಗಾಗಿ ಚಿತ್ರ ನಿರ್ಮಾಣಕ್ಕೂ ರೆಡಿ: ರೆಬಲ್ ಸ್ಟಾರ್
ನಟಿ ರಮ್ಯಾ ವಿವಾದ ಈಗ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮಾತುಕತೆಗೆ ಚಿತ್ರ ನಿರ್ಮಾಪಕರನ್ನು ತಮ್ಮ ಮನೆಗೆ ಆಹ್ವಾನಿಸಿದಾಗ 'ದಂಡಂ ದಶಗುಣಂ' ನಿರ್ಮಾಪಕ ಎ ಗಣೇಶ್ ಅವರಿಂದ ಸಕಾರಾತ್ಮಕ ಉತ್ತರ ಬಂದಿರಲಿಲ್ಲ. ಈ ಬಗ್ಗೆಯೂ ಅಂಬಿ ಬೇಸರ ವ್ಯಕ್ತಪಡಿಸಿದ್ದು, ಕನ್ನಡ ಚಿತ್ರರಂಗದ ಹಿರಿಯಣ್ಣನ ಮಾತಿಗೆ ಬೆಲೆ ಕೊಡದಿರುವ ಬಗ್ಗೆ ಅವರು ಕೊಂಚ ಸಿಟ್ಟಾಗಿದ್ದಾರೆ.
ಒಟ್ಟಾರೆಯಾಗಿ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಸ್ನೇಹದ ಗೆರೆ ಮಸುಕಾಗುತ್ತಿದೆ. ಪ್ರಕರಣಕ್ಕೆ ಸುಖಾಂತ್ಯ ಹಾಡಲು ಅಂಬಿ ನಿರ್ಮಾಪಕರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಮಂಗಳವಾರ (ಮಾ.22) ರಾತ್ರಿ 8.30ರವರೆಗೆ ಕಾದರೂ ಯಾವುದೇ ನಿರ್ಮಾಪಕರು ಬರಲಿಲ್ಲ.
ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರನ್ನು ನಿರ್ಮಾಪಕರು ಪ್ರೀತಿಯಿಂದ ನೋಡಿಕೊಳ್ಳಬೇಕೆ ಹೊರತು ದರ್ಪ ದೌರ್ಜನ್ಯ ತೋರಿದರೆ ಯಾರು ಬಗ್ಗುವುದಿಲ್ಲ ಎಂದು ಕಲಾವಿದರು ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಮ್ಯಾ ಚಿತ್ರವನ್ನು ಅಂಬಿ ತಾವೇ ನಿರ್ಮಿಸುವ ಮಾತುಗಳು ಜೆ ಪಿ ನಗರದ ಮನೆಯಿಂದ ಕೇಳಿಬಂದಿವೆ.
ತಮ್ಮ ಮಾತಿಗೆ ಕ್ಯಾರೆ ಎನ್ನದ ನಿರ್ಮಾಪಕರಿಗೆ ಬುದ್ಧಿ ಕಲಿಸಲು ರೆಬಲ್ ಸ್ಟಾರ್ ಮುಂದಾಗಿದ್ದು ತಾವೇ ಚಿತ್ರ ನಿರ್ಮಿಸುವ ಸಾಧ್ಯತೆಗಳು ಇವೆ. ಅಂದಹಾಗೆ ರಮ್ಯಾ ಜೊತೆ ನಿರ್ಮಾಪಕರು ಒಂದು ವರ್ಷ ಕಾಲ ಯಾವುದೇ ಒಪ್ಪಂದ ಮಾಡಿಕೊಳ್ಳುವಂತಿಲ್ಲ. ಆದರೆ ಈ ಸುದ್ದಿ ಕಲಾವಿದರಿಗೆ ಅನ್ವಯಿಸುವುದಿಲ್ಲವಲ್ಲ. ಹಾಗಾಗಿ ಅಂಬರೀಷ್ ಅವರೇ ಚಿತ್ರ ನಿರ್ಮಾಣಕ್ಕೆ ಕೈಹಾಕಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.


Click it and Unblock the Notifications











