»   » ಸಿನಿಮಾಗಳ ಲೈಂಗಿಕ ಅಡನಾಡಿತನ !

ಸಿನಿಮಾಗಳ ಲೈಂಗಿಕ ಅಡನಾಡಿತನ !

By Staff
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  • ಜಲಪತಿ ಜಿ.
  ಸೆಕ್ಸು ಸದಾ ಬಿಕರಿಯಾಗುವ ಸರಕು. ಇಂಥದೊಂದು ಧ್ಯೇಯವಾಕ್ಯ ಚಲನಚಿತ್ರ ಲೋಕದಲ್ಲಿ ಕಾಲಮಾನಕ್ಕೆ ತಕ್ಕಂತೆ, ಮಾಂಸಲ ದೇಹಗಳಿಗೆ ತಕ್ಕಂತೆ ಹೊಸ ಆಯಾಮ ಪಡೆದುಕೊಳ್ಳುತ್ತಾ ಬಂದು, ಇವತ್ತು ‘ಬೂಮ್‌’ ಎಂಬ ಹಿಂದಿ ಚಿತ್ರದ ಮೂಲಕ ‘ಲೈಂಗಿಕ ಅಡನಾಡಿತನ’ ತೋರುವ ಮಟ್ಟ ಮುಟ್ಟಿದೆ.

  ಬಿಪಾಶ ಬಸು ಎಂಬ ಬಿಚ್ಚಮ್ಮನನ್ನು ಏಕಾಏಕಿ ಸ್ಟಾರಿಣಿಯಾಗಿಸಿದ, ಯಥೋಚಿತ ಮಾಂಸ ದರ್ಶನ ಮಾಡಿಸಿದ ‘ರಾಝ್‌’ ಎಂಬ ಹಿಂದಿ ಚಿತ್ರದ ನಂತರ ಬಹುತೇಕ ನಿರ್ಮಾಪಕರು ಪಠಿಸುತ್ತಿರುವುದು ಆಧುನಿಕ ಸಂಸ್ಕೃತಿಯ ನೆವದ ಲೈಂಗಿಕ ತಿಕ್ಕಲುತನದ ಮಂತ್ರವನ್ನು. ಹಾಗೆ ನೋಡಿದರೆ ‘ಬೂಮ್‌’ನಲ್ಲಿ ಅಮಿತಾಬ್‌ ಬಚ್ಚನ್‌ರಂಥ ಪಕ್ವ ನಟ ಇದ್ದಾರೆ. ಹಳೇ ಸುಂದರಿ ಜೀನತ್‌ ಅಮಾನ್‌ ಇದ್ದಾರೆ. ಚಿತ್ರದಲ್ಲಿ ಪ್ರಣಯದಾಟ, ಹಸಿ ದೇಹ ಪ್ರದರ್ಶನ, ಕಾಮ ಕೇಳಿ ಎಂಥದ್ದೂ ಇಲ್ಲ. ಆದರೆ ಲೈಂಗಿಕ ತಿಕ್ಕಲುತನದ ಅಬ್ಬರವಿದೆ. ಆಧುನಿಕ ಸಂಸ್ಕೃತಿಯ ಬಿಂಬವನ್ನು ಯಥಾವತ್ತಾಗಿ ತೋರುತ್ತಿದ್ದೇವೆ ಎಂಬುದು ಆಧುನಿಕ ಚಿಂತಕ-ನಿರ್ಮಾಪಕರ ಅರ್ಧ ಸತ್ಯ. ಇದನ್ನು ಬೂಮ್‌ನಂಥಾ ಚಿತ್ರಗಳ ಮೂಲಕ ಅವರು ಹೇಳುವ ಪರಿಯಲ್ಲಿ ವಿಕೃತ ಕಾಮ ಕೃತಿ ಅನಾವರಣಗೊಳ್ಳುತ್ತೆ. ಅರ್ಧ ಸತ್ಯ ಸಂಪ್ರದಾಯಸ್ಥರ ಮನ ಕೆಣಕುತ್ತೆ, ಹದಿಹರೆಯದವರ ಕುದಿ ಹೃದಯಗಳಿಗೆ ಕಿಚ್ಚು ಹಚ್ಚುತ್ತೆ, ಮಾಂಸ ದರ್ಶನ ಮಾಡಿದ ಕೃತಾರ್ಥತೆಯಲ್ಲಿ ಪಡ್ಡೆಗಳೂ ಲೈಂಗಿಕ ಅಡನಾಡಿತನವನ್ನು ತಮ್ಮದಾಗಿಸಿಕೊಳ್ಳುತ್ತವೆ !

  ‘ಬಾಂಬೆ ಬಾಯ್ಸ್‌’ ಎಂಬ ತನ್ನ ಚೊಚ್ಚಲ ಚಿತ್ರದಲ್ಲಿ ಇಳಿ ವಯಸ್ಸಿನ ಹೊಸ್ತಿಲಲ್ಲಿರುವ ನಾಜಿರುದ್ದೀನ್‌ ಶಾ ಕೈಲಿ ಮಾಡೆಲ್‌ ಒಬ್ಬಳ ತುಟಿಗೆ ಮುತ್ತು ಕೊಡಿಸಿ ಪ್ರವರ್ಧಮಾನಕ್ಕೆ ಬಂದ ಕೈಝಾದ್‌ ಗುಸ್ತಾದ್‌ನ ಮನೋ ವಿಕೃತಿಯ ಇನ್ನೊಂದು ಚಿತ್ರ ‘ಬೂಮ್‌’.

  ಮಾಧ್ಯಮಗಳು ಮತ್ತು ಹೆಸರಾಂತ ವಿಮರ್ಶಕರು ಅನ್ನಿಸಿಕೊಂಡವರು ಗುಸ್ತಾದ್‌ ಚಿತ್ರಗಳನ್ನು ಅದ್ಭುತ ಕಲಾಕೃತಿ ಎಂಬಂತೆ ಬಣ್ಣಿಸುತ್ತಾರೆ. ‘ಹೈದರಾಬಾದ್‌ ಬ್ಲೂಸ್‌’ ಚಿತ್ರದ ನಂತರ ಬರುತ್ತಿರುವ ಇಂಥಾ ವಿಮರ್ಶೆಗಳು ಎಷ್ಟೋ ಪ್ರೇಕ್ಷಕರಿಗೆ ಜೀರ್ಣಿಸಿಕೊಳ್ಳಲಾಗದಂತಿವೆ. ಹಾಗಂತ ಗುಸ್ತಾದ್‌ ಒಬ್ಬರ ಮನಸ್ಸು ಮಾತ್ರ ಚಿತ್ರರಂಗದಲ್ಲಿ ವಿಕೃತಗೊಂಡಿದೆ ಅಂತ ಅಲ್ಲ. ಅತ್ತಿತ್ತ ನೋಡಿದರೆ ಹತ್ತು ಹಲವು ಅಧುನಿಕ ಕಾಮುಕ ಮನಸ್ಸುಗಳು ಕಂಡಾವು.

  ಎರಡು ನಮೂನೆಗಳು ಇದೋ ಇಲ್ಲಿವೆ...

  • ಅದ್ಧೂರಿ ನಿರ್ದೇಶಕ ಶಂಕರ್‌ ತೆಗೆದಿರುವ ತಮಿಳು ಚಿತ್ರ ‘ಬಾಯ್ಸ್‌’ನಲ್ಲಿ ಪಡ್ಡೆ ಹುಡುಗರು ಆಂಟಿಯರ ಪೃಷ್ಠಗಳನ್ನು ಮುಟ್ಟುತ್ತಾರೆ. ಖಚಾಖಚಿ ತುಂಬಿರುವ ಅಂಗಡಿ ಮಳಿಗೆಗಳಿಗೆ ಹುಡುಗಿಯರ ಮೈ ಉಜ್ಜಲೆಂದೇ ಹೋಗುತ್ತಾರೆ. ಒಬ್ಬ ಹುಡುಗ ಒಂದು ಹುಡುಗೀನಾ ಕೇಳ್ತಾನೆ- ‘ಕಾಮದ ತೆವಲನ್ನು ನೀನು ಹೇಗೆ ನಿಗ್ರಹಿಸುತ್ತೀಯ?’ ಅದಕ್ಕವಳು ಹೇಳುತ್ತಾಳೆ- ‘ಕಾಲು ಮೇಲೆ ಕಾಲು ಹಾಕಿ ಬಿಗಿಯಾಗಿ ಕೂತ್ಕೋತೀನಿ’. ‘ಬಾಯ್ಸ್‌’ ಚಿತ್ರದುದ್ದಕ್ಕೂ ಇಂಥಾ ಅಸಂಖ್ಯ ಅಸಂಗತಗಳಿವೆ.
  • ‘ಅಮ್ಮಾಯ್ಲು ಅಬ್ಬಾಯ್ಲು’ ಎಂಬ ತೆಲುಗು ಚಿತ್ರ. ರವಿ ಬಾಬು ಎಂಬಾತ ಇದರ ನಿರ್ದೇಶಕ. ಹಸ್ತ ಮೈಥುನ ಮಾಡಿಕೊಳ್ಳಲು ಹುಡುಗರು ಶೌಚಾಲಯಕ್ಕೆ ಹೋಗುವುದನ್ನು ಈತ ಚಿತ್ರದಲ್ಲಿ ನಿಸೂರಾಗಿ ಹೇಳುತ್ತಾನೆ.
  ಕೈಝಾದ್‌ ಗುಸ್ತಾದ್‌ ಹಾಗೂ ರವಿ ಬಾಬು- ಇಬ್ಬರೂ ಅಮೆರಿಕೆಯ ಸಿನಿಮಾ ಶಾಲೆಯಲ್ಲಿ ಕಲಿತು ಬಂದಿರುವ ಬುದ್ಧಿವಂತರು. ಬೂಮ್‌ ಚಿತ್ರ ನಿರ್ಮಿಸಿರುವುದು ಜಾಕಿ ಶ್ರಾಫ್‌ ಹೆಂಡತಿ ಅಯೇಷಾ ಶ್ರಾಫ್‌. ಒಬ್ಬ ಹೆಂಗಸಾಗಿ ತನ್ನ ಚಿತ್ರದ ಅಪದ್ಧಗಳನ್ನು ಈಕೆ ಅದು ಹೇಗೆ ಒಪ್ಪಿಕೊಂಡಳೋ? ಇನ್ನು ಶಂಕರ್‌ ನಿರ್ಮಾಣದ ‘ಬಾಯ್ಸ್‌’ ಚಿತ್ರದ ಕಥೆ ಬರೆದಿರುವಾಕೆ ಸುಜಾತಾ. ಒಳ್ಳೆಯ ಸಣ್ಣ ಕತೆಗಾರ್ತಿ ಹಾಗೂ ಉತ್ತಮ ಸಂಭಾಷಣಗಾರ್ತಿ ಅಂತ ಹೆಸರು ಪಡೆದಿರುವ ಈಕೆ ಕೂಡ ಒಬ್ಬ ಹೆಂಗಸು !

  ಈ ಚಿತ್ರೋದ್ಯಮದ ನೆರಳೇ ಹಾಗಿದೆ. ಇಲ್ಲುಳಿಯಲು ಸೃಜನಶೀಲತೆಗೆ ಅಶ್ಲೀಲತೆಯ ಒಗ್ಗರಣೆ ಹಾಕಿಕೊಳ್ಳಲೇಬೇಕು. ದೇವರನಾಮ ಬರೆಯುವಾತ ಕ್ಯಾಬರೆ ಗೀತೆ ಬರೆಯಬೇಕು. ದೇಶಭಕ್ತನ ಭಾಷಣದ ಸಂಭಾಷಣೆ ಬರೆಯುವ ಆಸಾಮಿ ಸೊಂಟದ ಕೆಳಗಿನ ಸಾಲುಗಳನ್ನೂ ಬರೆಯಬೇಕು. ಚುಂಬನ, ವಸ್ತ್ರಾಪಹರಣವಷ್ಟೇ ಇವತ್ತಿನ ಚಿತ್ರಗಳ ಸೆಕ್ಸು ಸರಕಾಗಿ ಉಳಿದಿಲ್ಲ. ಮಾಂಸದ ವಿಕೃತ ದರ್ಶನ, ಶೌಚಾಲಯ ಚರ್ಚೆ- ಮೊದಲಾದ ಜೀವನದ ನೈಜ ಘಟನೆಗಳನ್ನು ಚಿತ್ರವಾಗಿಸುವ ಪರಿಪಾಠ ವ್ಯಾಪಕವಾಗುತ್ತಿದೆ. ಮೊನ್ನೆ ಕನ್ನಡದ ಅಂಕಲ್‌ ಲೋಕನಾಥ್‌ ಫ್ರೆಂಡ್ಸ್‌ ಚಿತ್ರವನ್ನು ನೋಡಿ ನೊಂದುಕೊಂಡಿದ್ದು ಇದೇ ಕಾರಣಕ್ಕೆ. ಜಗ್ಗೇಶ್‌ ಚಿತ್ರದ ಕೈಸನ್ನೆಗಳನ್ನು ನೋಡಿದವರು ಅಕ್ಕ ಪಕ್ಕ ಇರುವವರನ್ನು ನೋಡಲಾರದೆ ಕೂತುಕೊಳ್ಳುವುದೂ ಇದೇ ಕಾರಣಕ್ಕೆ. ಇಷ್ಟಕ್ಕೂ ಜೀವನದ ತೀರಾ ಖಾಸಗಿ ವಿಚಾರಗಳನ್ನು ಹಾಗೂ ಮನೋ ವಿಕೃತಿಯನ್ನು ತೋರಿಸುವುದೇ ಸಿನಿಮಾ ಮಂದಿಯ ಬಂಡವಾಳವಾಗಬೇಕೆ ?

  ನಿಮಗೇನನ್ನಿಸುತ್ತೆ ಬರೆಯಿರಿ.


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more