»   » ಇದು ಆಷಾಢಭೂತಿ ಆಯ್ಕೆ ಸಮಿತಿ : ಕಾಸರವಳ್ಳಿ

ಇದು ಆಷಾಢಭೂತಿ ಆಯ್ಕೆ ಸಮಿತಿ : ಕಾಸರವಳ್ಳಿ

Subscribe to Filmibeat Kannada

'ನನ್ನ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿತ್ತು ಅನ್ನುವ ಕಾರಣ ಹೇಳಿ ರಾಜ್ಯ ಪ್ರಶಸ್ತಿ ಕೊಟ್ಟಿರುವುದು ಆಯ್ಕೆ ಸಮಿತಿಯ ಆಷಾಢಭೂತಿತನವನ್ನು ತೋರುತ್ತದೆ" ಗಿರೀಶ್‌ ಕಾಸರವಳ್ಳಿ ಮೆಲುದನಿಯಲ್ಲೇ ತರಾಟೆಗೆ ತೆಗೆದುಕೊಳ್ಳುವ ಮೂಡ್‌ನಲ್ಲಿದ್ದರು.

ಇತ್ತೀಚೆಗೆ ಬೆಂಗಳೂರಿನ ಸಿಟಿ ಇನ್ಸ್‌ಟಿಟ್ಯೂಟ್‌ನಲ್ಲಿ ಕರೆದಿದ್ದ ಪತ್ರಿಕಾ ಸಂದರ್ಶನದಲ್ಲಿ ಕಾಸರವಳ್ಳಿ ಕುದಿಯುತ್ತಿದ್ದರು. ಹಿರೀಕ ವಾದಿರಾಜ್‌ ಅಂಥವರು ಆಯ್ಕೆ ಸಮಿತಿಯಲ್ಲಿದ್ದುಕೊಂಡು ಈ ರೀತಿಯ ಹೇಳಿಕೆ ಕೊಟ್ಟಿದ್ದು ತರವಲ್ಲ ಎಂದು ನೇರವಾಗಿ ಹೇಳಿದ ಕಾಸರವಳ್ಳಿ, 'ಒಬ್ಬ ಪಿಎಚ್‌.ಡಿ. ಮಾಡಿದಾತನಿಗೆ, ಆ ಮಾನದಂಡದ ಮೇಲೆ ಪಿಯೂಸಿ ಸರ್ಟಿಫಿಕೇಟ್‌ ಕೊಟ್ಟಹಾಗಿದೆ ನಮ್ಮ ಆಯ್ಕೆ ಸಮಿತಿ ಕೊಟ್ಟಿರುವ ಸಮಜಾಯಿಷಿ" ಎಂದು ಕಿಡಿ ಕಾರಿದರು.

ರಾಜ್ಯ ಪ್ರಶಸ್ತಿಯ ಪಟ್ಟಿಯಲ್ಲೇ ಕಾಣದಂಥ ಸಿನಿಮಾಗಳು ರಾಷ್ಟ್ರ ಪ್ರಶಸ್ತಿ ಪಡೆದಿರುವ ಉದಾಹರಣೆಯಿದೆ. ರಾಷ್ಟ್ರ ಪ್ರಶಸ್ತಿ ಪಡೆಯದ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇ? 'ದ್ವೀಪ"ಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವ ಏಕೈಕ ಕಾರಣಕ್ಕೆ ರಾಜ್ಯ ಪ್ರಶಸ್ತಿಯನ್ನೂ ಕೊಡಬೇಕು ಅಂತೇನೂ ಇರಲಿಲ್ಲ. ಆ ರೀತಿ ಹೇಳಿಕೆ ಕೊಟ್ಟು, ಸಮಿತಿ ತನ್ನ ಗೋಸುಂಬೆತನವನ್ನು ತೋರಿದೆ. ಸಮಿತಿಯ ಈ ಧೋರಣೆಯಿಂದ ಅದರ ಆಯ್ಕೆಯ ಮೇಲೆ ಜನಕ್ಕೆ ನಂಬಿಕೆಯೇ ಹೊರಟು ಹೋಗುವಂತಾಗಿದೆ...ಕಾಸರವಳ್ಳಿ ಕುದಿಯುವ ಬಿಂದು ಏರುತ್ತಿದ್ದಂತೆ, ಪಕ್ಕದಲ್ಲಿ ಕೂತಿದ್ದ ಸೌಂದರ್ಯ ಕೂಡ ಅವರ ಮಾತಿಗೆ ಸ್ಪಂದಿಸುತ್ತಿದ್ದರು. ಸಿನಿಮಾದಲ್ಲಿನ ಮೌಲ್ಯಗಳು ಮತ್ತು ಅದರ ಸಂದೇಶವನ್ನು ಪರಿಗಣಿಸಿ ಪ್ರಶಸ್ತಿ ಕೊಡಬೇಕೇ ಹೊರತು, ಬೇರಾವುದೋ ಮಾನದಂಡ ಇಟ್ಟುಕೊಳ್ಳುವುದು ಸರಿಯಲ್ಲ ಅನ್ನುವುದು ಸೌಂದರ್ಯ ವಾದ.


ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada