ಇದು ಚಿತ್ರೋದ್ಯಮದ ಹೋರಾಟವಲ್ಲ, ನಾಡ ಹಿತ ಕಾಯುವ ಸಮರ
ಬೆಂಗಳೂರು : ಆಂದೋಲನ,ಚಳವಳಿ ಹಾಗೂ ಹೋರಾಟಗಳ ಕಾವು ಕುಗ್ಗುತ್ತಿದೆ ಎನ್ನುವಾಗಲೇ ಗೋಕಾಕ್ ಮಾದರಿಯಲ್ಲಿ ಕನ್ನಡ ಚಿತ್ರೋದ್ಯಮ ಸಮರಕ್ಕೆ ಸಜ್ಜಾಗಿದೆ. ಪರಭಾಷಾ ಚಿತ್ರಗಳ ವಿರುದ್ಧದ ಚಿತ್ರೋದ್ಯಮದ ಹೋರಾಟ, ನಾಡು-ನುಡಿಯ ಹಿತ ಕಾಯುವ ಸಮರವಾಗಿ ಪರಿವರ್ತಿತವಾಗುತ್ತಿದೆ.
ದಿನೇದಿನೇ ಮತ್ತಷ್ಟು ಬಲ ಪಡೆಯುತ್ತಿರುವ ಆಂದೋಲನದ ಗಂಭೀರತೆಯನ್ನು ಸರಕಾರ ಅರ್ಥ ಮಾಡಿಕೊಂಡಿದೆ. ಹೋರಾಟದ ಹಾದಿ ಕೈಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ನ.25 ರಂದು ರಾಜ್‌ಕುಮಾರ್ ನೇತೃತ್ವದ ಪ್ರತಿಭಟನೆಯನ್ನು ಕೈಬಿಡುವಂತೆ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತೆ ಕೋರಿದ್ದಾರೆ.
ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆಯಾದಾಗ, ರೈತರು ಆತ್ಮಹತ್ಯೆ ಮಾಡಿಕೊಂಡಾಗ, ವಿದ್ಯಾರ್ಥಿ-ಯುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದಾಗ, ಕಾರ್ಮಿಕರು ಬೀದಿ ಪಾಲಾದಾಗ ಕನ್ನಡ ಚಿತ್ರೋದ್ಯಮ ಸ್ಪಂದಿಸಬೇಕು. ಕನ್ನಡ ಚಿತ್ರಗಳನ್ನು ನೋಡುವವರು ರೈತರು, ಕಾರ್ಮಿಕರು, ಮತ್ತು ದಲಿತರು ಎನ್ನುವಾಗ ಚಿತ್ರೋದ್ಯಮ ಅವರ ಸಮಸ್ಯೆಗಳತ್ತ ಗಮನಹರಿಸಬೇಕು ಎನ್ನುವ ವಿವಿಧ ಸಂಘಟನೆಗಳು ನಾಡು-ನುಡಿಗಾಗಿ ಒಂದೇ ವೇದಿಕೆಯಡಿ ಸೇರುತ್ತಿವೆ.
ಮಂಗಳವಾರ(ನ.23) ನಡೆದ ಚಳವಳಿಯ ಪೂರ್ವ ಸಿದ್ಧತಾ ಸಭೆಯ ತೀರ್ಮಾನಗಳು ಹೀಗಿವೆ;
- ಮಹಾಜನ್ ವರದಿ, ಸರೋಜಿನಿ ಮಹಿಷಿ ವರದಿ ಸೇರಿದಂತೆ ಕನ್ನಡ ಪರ ಶಾಸನಗಳ ಜಾರಿಗೆ ತರಬೇಕು.
- ಬಹುರಾಷ್ಟ್ರೀಯ ಸಂಸ್ಥೆಗಳು ಹಾಗೂ ರೈಲ್ವೆ ಇಲಾಖೆಯಲ್ಲಿ ಕಡ್ಡಾಯವಾಗಿ ಕನ್ನಡಗರಿಗೆ ಉದ್ಯೋಗ ಒದಗಿಸ ಬೇಕು.
- ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಬೇಕು.
- ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆಯಲ್ಲೂ ನ್ಯಾಯ ದೊರೆಯಬೇಕು.
- ಆಂಗ್ಲ ಮಾಧ್ಯಮ ಶಾಲೆಗಳನ್ನು ರದ್ದುಪಡಿಸ ಬೇಕು.
ನ.25 ರಂದು ಚಿತ್ರೋದ್ಯಮದ ಬಂದ್ ಇದ್ದರೂ ಸಹಾ, ನಗರದ ಆರು ಚಿತ್ರಮಂದಿರಗಳಲ್ಲಿ ಎಂದಿನಂತೆಯೇ ಹಿಂದಿ ಚಿತ್ರ ವೀರ್‌ಝರಾ ಪ್ರದರ್ಶನಗೊಳ್ಳಲಿದೆ ಎಂದು ಪ್ರದರ್ಶಕರ ವಲಯ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications