ರಮ್ಯಾ ಬಗ್ಗೆ ಕವಿತಾ ಲಂಕೇಶ್ ಹೇಳೋದೇ ಬೇರೆ
ಕವಿತಾ ಲಂಕೇಶ್ ನಿರ್ದೇಶಿಸುತ್ತಿರುವ 'ಕ್ರೇಜಿ ಲೋಕ' ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಐಟಂ ನಂಬರ್ ಮಾಡ್ತಾರಂತೆ ಎಂಬ ಸುದ್ದಿ ಬಂದದ್ದೇ ತಡ ರಮ್ಯಾ ಗರಮಾ ಗರಮ್ ಆಗಿ ಕವಿತಾ ಮೇಲೆ ಹರಿಹಾಯ್ದಿದ್ದರು. ಈಗ ರಮ್ಯಾರನ್ನು ಸಮಾಧಾನ ಮಾಡಲು ಕವಿತಾ ಲಂಕೇಶ್ ಮುಂದಾಗಿದ್ದಾರೆ.
ರಮ್ಯಾರನ್ನು ತಾವು ಯಾವುದೇ ಕಾರಣಕ್ಕೂ ಐಟಂ ನಂಬರ್‌ನಲ್ಲಿ ಬಳಸಿಕೊಳ್ಳಲ್ಲ. ಆ ರೀತಿಯ ಪದಗಳನ್ನೇ ತಾನು ವಿರೋಧಿಸುತ್ತೇನೆ. ರಮ್ಯಾರನ್ನು ಹಾಗೆಲ್ಲಾ ಅಸಭ್ಯವಾಗಿ ತೋರಿಸುವುದಿಲ್ಲ. ಇಷ್ಟು ಭರವಸೆ ನೀಡಿದ ಮೇಲೂ ಅವರು ಕುಣಿಯಲ್ಲ ಎಂದರೆ ಬೇರೆ ಯೋಚಿಸಬೇಕಾಗುತ್ತದೆ ಎಂದಿದ್ದಾರೆ.
ಇಷ್ಟಕ್ಕೂ ತಾವು 'ಕ್ರೇಜಿ ಲೋಕ' ಚಿತ್ರದಲ್ಲಿ ರಮ್ಯಾ ಐಟಂ ಡಾನ್ಸ್ ಮಾಡುತ್ತಾರೆ ಎಂದು ಹೇಳಿಯೇ ಇಲ್ಲ. ಆಕೆ ವಿಶೇಷ ಹಾಡಿನಲ್ಲಿ ಕುಣಿಯಲಿದ್ದಾರೆ ಎಂದಿದ್ದೆ. ಅದನ್ನೇ ತಪ್ಪಾಗಿ ಗ್ರಹಿಸಿ ಐಟಂ ಡಾನ್ಸ್ ಎಂದು ಪ್ರಚಾರ ಮಾಡಲಾಗಿದೆ. ಈ ಹಾಡಿಗೆ ರಮ್ಯಾಗೆ ಮ್ಯಾಚ್ ಆಗ್ತಾರೆ. ರಮ್ಯಾರನ್ನು ತಾವು ಐಟಂ ಹಾಡಿನಲ್ಲಿ ತೋರಿಸುವ ನಿರ್ದೇಶಕಿ ಅಲ್ಲ ಎಂದಿದ್ದಾರೆ ಕವಿತಾ.
'ಕ್ರೇಜಿ ಲೋಕ' ಚಿತ್ರ ಹಾಸ್ಯ ಪ್ರಧಾನ ಚಿತ್ರ. ತಮ್ಮ ಚಿತ್ರಗಳಲ್ಲಿ ಐಟಂ ಹಾಡು ಇರಲ್ಲ. ಈ ಹಿಂದೆ 'ಪ್ರೀತಿ ಪ್ರೇಮ ಪ್ರಣಯ' ಚಿತ್ರದಲ್ಲೂ "ಕಬ್ಬಿನ ಜಲ್ಲೆ" ಹಾಡನ್ನು ಐಟಂ ಹಾಡು ಎಂದು ಬಿಂಬಿಸಲಾಗಿತ್ತು. ಆದರೆ ಚಿತ್ರ ಬಿಡುಗಡೆ ಆದ ಮೇಲೆ ಸತ್ಯ ಗೊತ್ತಾಯಿತು. ಈಗಲೂ ಅಷ್ಟೆ ಮುಂದೆಯೂ ಅಷ್ಟೆ ತಾವು ಐಟಂ ಹಾಡನ್ನು ಮಾಡುವುದಿಲ್ಲ ಎಂದು ಕವಿತಾ ಖಂಡತುಂಡವಾಗಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











