»   » ಕನ್ನಡ ಚಿತ್ರೋದ್ಯಮ ಸಮರಕ್ಕೆ ಕುಮಾರ್‌ಸ್ವಾಮಿ, ಅಂಬರೀಷ್‌ ಅತೃಪ್ತಿ

ಕನ್ನಡ ಚಿತ್ರೋದ್ಯಮ ಸಮರಕ್ಕೆ ಕುಮಾರ್‌ಸ್ವಾಮಿ, ಅಂಬರೀಷ್‌ ಅತೃಪ್ತಿ

Posted By:
Subscribe to Filmibeat Kannada

ಬೆಂಗಳೂರು: ನಟ ರಾಜ್‌ಕುಮಾರ್‌ ನೇತೃತ್ವದಲ್ಲಿ ಕನ್ನಡ ಚಿತ್ರೋದ್ಯಮ, ವಿವಿಧ ಸಂಘಟನೆಗಳೊಂದಿಗೆ ಪರಭಾಷಾ ಚಿತ್ರಗಳ ವಿರುದ್ಧದ ಹೋರಾಟಕ್ಕೆ ಸಜ್ಜಾಗಿದೆ. ಇತ್ತ ನಿರ್ಮಾಪಕ ಹಾಗೂ ಜೆಡಿಎಸ್‌ ಕಾರ್ಯಾಧ್ಯಕ್ಷ ಹೆಚ್‌.ಡಿ. ಕುಮಾರ್‌ಸ್ವಾಮಿಯವರ ಅತೃಪ್ತಿ ಪ್ರಕಟವಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ(ನ.24) ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಕುಮಾರ್‌ಸ್ವಾಮಿ, ಚಿತ್ರೋದ್ಯಮ ಗುರುವಾರ ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಹೀಗಾಗಿ ಪ್ರತಿಭಟನೆಯನ್ನು ಬೆಂಬಲಿಸುತ್ತಿಲ್ಲ. ದಬ್ಬಾಳಿಕೆ ಅಥವಾ ಕಾನೂನು ಹೇರಿ ಭಾಷೆ ಬೆಳೆಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಗೆ ಮೂರು ವಾರಗಳ ನಿರ್ಬಂಧ ವಿಧಿಸುವುದು ಅನಗತ್ಯ. ಹೀಗಾಗಿ ಪ್ರತಿಭಟನೆಯೂ ಅನಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷನೆಂದು ಘೋಷಿಸಿಕೊಂಡು ಕುಮಾರ್‌ಸ್ವಾಮಿ, ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನಕ್ಕೆ ಶಕ್ತಿತುಂಬಿದ್ದರು. ಕನ್ನಡ ಪರ ಪ್ರತಿಭಟನೆಗಳು ಕಾವೇರಿದ ತಕ್ಷಣ ಸುಮ್ಮನಾಗಿದ್ದರು. ‘ನನಗೂ ಪ್ರದರ್ಶಕರ ಸಂಘಟನೆಗೂ ಸಂಬಂಧವಿಲ್ಲ... ನಾನು ಅಧ್ಯಕ್ಷನೂ ಅಲ್ಲ’ ಎಂದು ಕುಮಾರ್‌ಸ್ವಾಮಿ ಕೈತೊಳೆದುಕೊಂಡಿದ್ದರು.

ಅಂಬಿ ಅಭಿಮತ: ಕೆಲವರನ್ನು ಹೊರತು ಪಡಿಸಿ ಪ್ರದರ್ಶಕರು ಮೂರು ವಾರಗಳ ನಿರ್ಬಂಧಕ್ಕೆ ಒಪ್ಪಿದ್ದಾರೆ. ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳುವ ಸಾಧ್ಯತೆಗಳಿದ್ದವು. ರಾಜ್‌ಕುಮಾರ್‌ ನೇತೃತ್ವದ ಪ್ರತಿಭಟನೆ ಅಗತ್ಯವಿರಲಿಲ್ಲ ಎನ್ನುವುದು ನಟ ಹಾಗೂ ಸಂಸದ ಅಂಬರೀಷ್‌ ಅನಿಸಿಕೆ

ಪಾಪ ರಾಜ್‌ ಕುಮಾರ್‌ಗೆ ವಯಸ್ಸಾಗಿದೆ. ಅವರಿಗೆ ತೊಂದರೆ ಕೊಡಬಾರದು. ಪ್ರಜಾಪ್ರತಿನಿಧಿಯಾಗಿ ಚಿತ್ರೋದ್ಯಮದ ಹೋರಾಟದಲ್ಲಿ ಭಾಗವಹಿಸುವುದು ಚೆನ್ನಾಗಿರದ ಕಾರಣ, ನನ್ನ ಪರವಾಗಿ ನಟ ವಿಷ್ಣುವರ್ಧನ್‌ ಪಾಲ್ಗೊಳ್ಳುತ್ತಿದ್ದಾರೆ ಎಂದು ಅಂಬರೀಷ್‌ ತಿಳಿಸಿದ್ದಾರೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada