For Quick Alerts
  ALLOW NOTIFICATIONS  
  For Daily Alerts

  ಉಳಿವಿಗಾಗಿ ಹೋರಾಟ ; ಹರಿದು ಬಂದವು ಸಾವಿರಾರು ನದಿಗಳು!

  By Staff
  |
  • ದಟ್ಸ್‌ಕನ್ನಡ ಬ್ಯೂರೊ
  ಅಣ್ಣಾವ್ರು ಎಲ್ಲಿ ? ವಿಷ್ಣುವರ್ಧನ್‌ ಏಕೆ ಬಂದಿಲ್ಲ ?

  ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದ ನಡುವೆ ಈಪ್ರಶ್ನೆ ವಿನಿಮಯವಾಗುತ್ತಿರುವಂತೆಯೇ ವಿಷ್ಣುವರ್ಧನ್‌ ಪ್ರತ್ಯಕ್ಷರಾದರು. ಮುಗಿಲು ಮುಟ್ಟಿತು ಜಯಕಾರ. ಆವೇಳೆಗೆ ಬಸವೇಶ್ವರ ವೃತ್ತದಿಂದ ಶಾಸಕರ ಭವನದತ್ತ ಜನಸ್ತೋಮ ನಿಧಾನಗತಿಯಲ್ಲಿ ಸಾಗತೊಡಗಿತು. ಅಲ್ಲಿ ಜಯಘೋಷಗಳಿದ್ದವು. ಕನ್ನಡ ವಿರೋಧಿಗಳ ಕುರಿತು ಧಿಕ್ಕಾರಗಳಿದ್ದವು. ಸರ್ಕಾರದ ಕನ್ನಡ ವಿರೋಧಿ ನೀತಿಯ ಕುರಿತು ಸಿಟ್ಟಿನ ಮಾತುಗಳಿದ್ದವು. ಗುಂಪಿನ ನಡುನಡುವೆ ಕನ್ನಡಧ್ವಜ ಹಾರಾಡುತ್ತಿತ್ತು . ಅದು ಕನ್ನಡದ ಮುಂಜಾವು.

  ವಿಧಾನಸೌಧದ ಆಸುಪಾಸಿನ ಪರಿಸರ ಬುಧವಾರ ಸಂಜೆಯಿಂದಲೇ ಕನ್ನಡದ ಸಂಭ್ರಮವೊಂದಕ್ಕೆ ಸಿದ್ಧತೆ ಸಜ್ಜಾದಂತಿತ್ತು . ನ.25ರ ಗುರುವಾರದ ಬೆಳ್ಳಂಬೆಳಗೇ ಒಬ್ಬೊಬ್ಬರಾಗಿ ಬಂದು ಸೇರತೊಡಗಿದರು. ಎಂಟರ ವೇಳೆಗೆ ಗುಂಪಿಗೊಂದು ಕಳೆ ಬಂತು. ಒಂಬತ್ತರ ಹೊತ್ತಿಗೆ ಶಕ್ತಿಯೂ ಬಂತು. ಹತ್ತರ ವೇಳೆಗೆ ನಟನಟಿಯರು ಪ್ರತ್ಯಕ್ಷರಾಗತೊಡಗಿದಾಗ ಉತ್ಸಾಹವೂ ಜೊತೆಗೂಡಿ ರಣಕಹಳೆ ಮೊಳಗಿತು.

  ಶಿವರಾಜ್‌ಕುಮಾರ್‌, ಸುದೀಪ್‌, ಉಪೇಂದ್ರ, ದರ್ಶನ್‌, ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್‌, ಜೈಜಗದೀಶ್‌, ಜೋಸೈಮನ್‌, ಶಿವರಾಜ್‌ಕುಮಾರ್‌, ಜಗ್ಗೇಶ್‌, ಪುನೀತ್‌, ಶ್ರೀನಿವಾಸಮೂರ್ತಿ, ಧರ್ಮ, ದೇವರಾಜ್‌, ಸುಂದರರಾಜ್‌, ನವೀನ್‌ಕೃಷ್ಣ , ಉಪೇಂದ್ರ, ಶ್ರೀನಾಥ್‌, ಅಶೋಕ್‌.... ಕನ್ನಡ ಚಿತ್ರರಂಗವೇ ಅಲ್ಲಿತ್ತು . ಕಿರುತೆರೆ ತಾರೆಗಳೂ ಕೋರೈಸುತ್ತಿದ್ದರು.

  ಮಂಡ್ಯದಿಂದ ಬಂದವರಿದ್ದರು. ದೂರದ ದಾವಣಗೆರೆ, ಹುಬ್ಬಳ್ಳಿಗಳಿಂದ ಬಂದ ಅಭಿಮಾನಿಗಳೂ ಇದ್ದರು. ನಾಡಿನ ಮೂಲೆಮೂಲೆಗಳಿಂದ ಕನ್ನಡದ ಕೂಗಿಗೆ ದನಿಯಾಗಲು ಸ್ವಯಂಪ್ರೇರಣೆಯಿಂದ ಬಂದವರ ಸಂಖ್ಯೆ ದೊಡ್ಡದಾಗಿತ್ತು .

  ಬಸವೇಶ್ವರ ವೃತ್ತದಿಂದ ಶಾಸಕರ ಭವನದವರೆಗೆ ಕನ್ನಡದ ಮೆರವಣಿಗೆ ಹೊರಟಿತು. ನೋಡಬೇಕಿತ್ತು ಕನ್ನಡದ ಸಂಭ್ರಮವ. ಹೇಳಿಕೇಳಿ ಇದು ನವಂಬರ್‌, ಕನ್ನಡ ಮಾಸ ಬೇರೆ. ಗುಂಪು ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆಯ ಬಳಿಗೆ ಸಾಗಲು ಹೊರಟಾಗ ಎದುರಾದದ್ದು ಪೊಲೀಸರ ತಡೆ. ಹತ್ತು ಸಾವಿರಕ್ಕೂ ಹೆಚ್ಚು ಜನರ ಗುಂಪನ್ನು ಪೊಲೀಸ್‌ ಗೋಡೆ ಅಡ್ಡಗಟ್ಟಿತು. ಆಗ ಕೇಳಿಬಂದದ್ದು ಅದೇ ಪ್ರಶ್ನೆ- ರಾಜ್‌ಕುಮಾರ್‌ ಎಲ್ಲಿ ?

  ಅದೋ ರಾಜ್‌ಕುಮಾರ್‌ ಬಂದರು! ಅದೇ ನಗು, ಅಮಾಯಕ ಕಣ್ಣುಗಳು, ಅಡಿಗಡಿಗೂ ಜೋಡಿಯಾಗುತ್ತಿದ್ದ ಕೈಗಳು. ಈಚೆಗಷ್ಟೇ ಹೃದಯ ಚಿಕಿತ್ಸೆಗೆ ಗುರಿಯಾದ ಮಾಗಿದ ಜೀವವದು. ಸಹಸ್ರ ಸಹಸ್ರ ಕಂಠಗಳಲ್ಲಿ ‘ಅಣ್ಣಾವ್ರಿಗೆ ಜಯವಾಗಲಿ’ ಘೋಷಣೆ. ವರನಟ ರಾಜ್‌ಕುಮಾರ್‌ ಅವರನ್ನು ಕೂಡಿಕೊಂಡ ಕನ್ನಡದ ಮೆರವಣಿಗೆ ವಿಧಾನಸೌಧದ ಪಶ್ಚಿಮದ್ವಾರದತ್ತ ಹೊರಟಿತು.

  ನಮ್ಮ ಭಾಷೆ ಉಳಿಯಬೇಕು...

  ರಾಜ್‌ ಮಾತನಾಡಿದ್ದು ಕೆಲವೇ ಮಾತು. ನಾವು ಇತರ ಭಾಷೆಗಳಿಗೆ ವಿರುದ್ಧವಾಗಿಲ್ಲ . ಆದರೆ ನಮ್ಮ ಭಾಷೆ ಉಳಿಯಬೇಕು ಎಂದು ಭಾವವಶರಾಗಿ ರಾಜ್‌ ನುಡಿದರು. ಅಭಿಮಾನಿಗಳ ಉದ್ಘೋಷ ತಾರಕಕ್ಕೇರಿತು. ಈ ಪ್ರತಿಭಟನೆಯ ಮೂಲಕ ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ಸಾಬೀತುಪಡಿಸಿದ್ದೇವೆ ಎಂದೂ ರಾಜ್‌ ಹೇಳಿದರು.

  ನಮ್ಮದು ನ್ಯಾಯಕ್ಕಾಗಿ ಹೋರಾಟ ಎಂದು ಹೇಳಿದ ವಿಷ್ಣುವರ್ಧನ್‌, ಈ ಸಮಸ್ಯೆ ಮತ್ತೆ ತಲೆಯೆತ್ತದಂತೆ ಪರಿಹಾರ ಹುಡುಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

  ಆ ಹೊತ್ತಿಗೆ ಮುಖ್ಯಮಂತ್ರಿ ಧರ್ಮಸಿಂಗ್‌ ಪ್ರತ್ಯಕ್ಷರಾದರು, ಅವರೊಂದಿಗೆ ಡೆಪ್ಯುಟಿ ಸಿದ್ಧರಾಮಯ್ಯ. ಮಲ್ಲಿಕಾರ್ಜುನ ಖರ್ಗೆಯೂ ಜೊತೆಗಿದ್ದರು.

  ಕನ್ನಡ ಚಿತ್ರೋದ್ಯಮದ ಬೇಡಿಕೆಗಳ ಪಟ್ಟಿಯನ್ನು ವರನಟ ರಾಜ್‌ಕುಮಾರ್‌ರಿಂದ ಸ್ವೀಕರಿಸಿದ ಧರ್ಮಸಿಂಗ್‌ ಸಭೆಯನ್ನು ಉದ್ದೇಶಿಸಿ ಮಾತನಾಡಲು ತೊಡಗಿದರು. ಆದರೆ ಮಾತಿಗೆ ಅವಕಾಶವಾದರೂ ಎಲ್ಲಿ ? ಸರ್ಕಾರದ ಕನ್ನಡ ವಿರೋಧಿ ನೀತಿಯ ವಿರುದ್ಧ ಘೋಷಣೆಗಳು ಮೊಳಗಿದವು. ಮುಖ್ಯಮಂತ್ರಿಗಳು ಮಾತನಾಡುತ್ತ ನಿಂತಿದ್ದ ವ್ಯಾನ್‌ನೆಡೆಗೆ ಕೆಲವು ಪ್ರತಿಭಟನಾಕಾರರು ಚಪ್ಪಲಿಗಳನ್ನು ತೂರಿದರು. ಧರ್ಮಸಿಂಗ್‌ ದಂಗಾದರು.

  ಚಿತ್ರೋದ್ಯಮದ ಬೇಡಿಕೆಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸಿಂಗ್‌- ಕನ್ನಡದ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಚಿತ್ರೋದ್ಯಮದ ಬೇಡಿಕೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದರು.

  ಕನ್ನಡ ಚಿತ್ರೋದ್ಯಮದ ಪ್ರತಿಭಟನೆಗೆ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸಲಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ಕಾರ- ಕಾನೂನು ಪಾಲನೆಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.

  ಕರುನಾಡ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘದ ಉಭಯ ಬಣಗಳು, ಡಾ. ರಾಜ್‌ಕುಮಾರ್‌ ಅಭಿಮಾನಿಗಳಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾಹಿತಿಗಳು, ಚಿಂತಕರು, ಕನ್ನಡಪ್ರೇಮಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಅಂಗವಾಗಿ ಗುರುವಾರ ಕನ್ನಡ ಚಿತ್ರೋದ್ಯಮದ ಸಮಸ್ತ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

  ಕೊನೆಮಾತು : ನ.29ರ ಸೋಮವಾರದೊಳಗೆ ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟು ಬಗೆಹರಿಯುವ ಬಗ್ಗೆ ಮುಖ್ಯಮಂತ್ರಿ ಧರ್ಮಸಿಂಗ್‌ ಆಶಾಭಾವ ವ್ಯಕ್ತಪಡಿಸಿದ್ದಾರೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X