»   » ರಾಂಗ್‌ ಹೆಜ್ಜೆಗಳ ಇಡದಿರಲು ಹುಟ್ಟಿದೆ ನಿರ್ಮಾಪಕರ ರೈಟ್‌ ಸಂಘ ?

ರಾಂಗ್‌ ಹೆಜ್ಜೆಗಳ ಇಡದಿರಲು ಹುಟ್ಟಿದೆ ನಿರ್ಮಾಪಕರ ರೈಟ್‌ ಸಂಘ ?

Subscribe to Filmibeat Kannada

*ಅಮೆಜಾನ್‌

ಸ್ಯಾಂಡಲ್‌ವುಡ್‌ ನಿರ್ಮಾಪಕರ ಒಗ್ಗಟ್ಟಿಗೆ ಕೊಡಲಿ ಪೆಟ್ಟು ಬಿದ್ದಿದೆಯಾ?
ಇಂಥಾದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಗಾಂಧಿನಗರದ ಗಲ್ಲಿಗಳಲ್ಲಿ ಓಡಾಡಿದರೆ ಖರೆ ಉತ್ತರ ಸಿಗೋದಿಲ್ಲವಾದರೂ ನಿರ್ಮಾಪಕರ ಸಂಘದಲ್ಲಿ ಅಸಮಾಧಾನದ ಗೆರೆ ಸಣ್ಣಗೆ ಇಣುಕುತ್ತದೆ. ಇದರ ನಡುವೆಯೇ ಕೇಳಿ ಬರುತ್ತಿರುವುದು ಹೊಸತೊಂದು ನಿರ್ಮಾಪಕರ ಸಂಘ ಹುಟ್ಟಿಕೊಂಡಿರುವ ವಿಷಯ. ನಂಬಲರ್ಹ ಮೂಲಗಳ ಪ್ರಕಾರ ಇದು ತಪ್ಪು ಹೆಜ್ಜೆಗಳನ್ನಿಡದ ಪರ್ಯಾಯ ಸಂಘ, ರೈಟ್‌! ಅಂದಹಾಗೆ, ಸಂಘದ ಈ ಹೆಸರಿನ ಕ್ರೆಡಿಟ್ಟು ರವಿಚಂದ್ರನ್‌ ಅವರಿಗೆ ಸಲ್ಲುತ್ತದೆ. ಸಂಘದ ನಾಯಕಿ ಪಾರ್ವತಮ್ಮ ರಾಜ್‌ಕುಮಾರ್‌!

ಯಾಕೆ ಹುಟ್ಟಿತು ಹೊಸ ಸಂಘ?
ಹಿಂದೊಮ್ಮೆ ನಿರ್ಮಾಪಕರ ಸಂಘದ ಬಗ್ಗೆ ಅಸಮಾಧಾನ ಧೋರಣೆ ತಳೆದು ಕೆಲವು ಸದಸ್ಯರು ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಬಸಂತ ಕುಮಾರ್‌ ಪಾಟೀಲ್‌ ಹೇಗೋ ಅದನ್ನು ಪ್ಯಾಚ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮೊನ್ನೆ, ನೆನೆಗುದಿಗೆ ಬಿದ್ದಿರುವ ತಮ್ಮ ಬೇಡಿಕೆಗಳಿಗೆ ಸ್ಪಂದಿಸಲೇಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕೂತಾಗಲೂ, ನಿರ್ಮಾಪಕರಲ್ಲೇ ಭಿನ್ನಾಭಿಪ್ರಾಯಗಳು ತಲೆದೋರಿದ ವರದಿಗಳು ಹೊರಬಿದ್ದವು. ಈ ಧರಣಿ ಕೆಲವರಿಗೆ ಸೊಗಸು, ಇನ್ನು ಕೆಲವರಿಗೆ ಇರುಸು ಮುರುಸು. ಇನ್ನೊಂದೆಡೆ ಒಂಟಿಯಾಗಿ ಚಕ್ಕಳ ಮಕ್ಕಳ ಹಾಕಿ ಕುಳಿತ ಧನರಾಜ್‌ ಉಪ್ಪಿ ಕಾಲ್‌ಶೀಟ್‌ಗೆ ಒತ್ತಾಯಿಸುತ್ತಿದ್ದರು.

ನಿರ್ಮಾಪಕರಲ್ಲೇ ಇಬ್ಬಣವಾಗುವ ಆತಂಕ ಕಳೆದ ಕೆಲವರು ವಾರಗಳಿಂದಲೂ ಇದ್ದಿದ್ದೇ. ಆದರೆ ಹಾಗಾಗಿಲ್ಲ ಅನ್ನುತ್ತಲೇ ಹೊಸದೊಂದು ಸಂಘ ಹುಟ್ಟಿಕೊಂಡಿರುವ ಸುದ್ದಿಯಾಗಿದೆ. ನಿರ್ಮಾಪಕರ ಸಂಘದ ಚಟುವಟಿಕೆಗಳಲ್ಲೂ ನಾವು ಭಾಗವಹಿಸುತ್ತೇವೆ, ಆದರೆ ರೈಟ್‌ ದಾರಿಯಲ್ಲಿ ಎನ್ನುತ್ತಿದೆಯಂತೆ ಹೊಸ ಸಂಘದ ನಿರ್ಮಾಪಕ ವೃಂದ.

ಹಬ್ಬಿರುವ ಸುದ್ದಿಯ ಜಾಡಿನ ವಾಸನೆ ಹಿಡಿದರೆ ಗೊತ್ತಾಗೋದು...

ರೈಟ್‌ ಸಂಘ ಹುಟ್ಟಿದ್ದು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಆಫೀಸಾದ ವಜ್ರೇಶ್ವರಿ ಕಂಬೈನ್ಸ್‌ನಲ್ಲಿ. ರವಿಚಂದ್ರನ್‌, ಕೆ.ಮಂಜು, ರಾಕ್‌ಲೈನ್‌ ವೆಂಕಟೇಶ್‌, ಸಾ.ರಾ.ಗೋವಿಂದು, ರಾಮು, ಉಪೇಂದ್ರ, ರಾಜೇಂದ್ರಸಿಂಗ್‌ ಬಾಬು, ವಿಜಯಲಕ್ಷ್ಮಿ, ಮುನಿರತ್ನ ಹಾಗೂ ಹೊಸ ನಿರ್ಮಾಪಕ ಎ.ಬಾಲಚಂದ್ರ ಇವರೆಲ್ಲರ ಹಾಜರಿಯಲ್ಲಿ. ಪಾರ್ವತಮ್ಮ ರಾಜ್‌ಕುಮಾರ್‌ ಹೊಸ ಸಂಘ ಹುಟ್ಟು ಹಾಕುವ ಸಭೆಯ ಚೇರ್‌ ಪರ್ಸನ್‌.

ರೈಟ್‌ ಸಂಘಕ್ಕೆ ಮೊದಲು ಕೇಳಿಬಂದ ಹೆಸರು ಡಾ। ರಾಜ್‌ಕುಮಾರ್‌ ಎಂಬುದು. ಕೆಲವರು ಇದೇ ಸರಿ ಅಂದದ್ದೂ ಉಂಟು. ಆದರೆ ರಾಘವೇಂದ್ರ ರಾಜ್‌ಕುಮಾರ್‌, ಅಪ್ಪಾಜಿ ಹೆಸರಿಟ್ಟರೆ ತಪ್ಪು ಕಲ್ಪನೆಗೆ ಅವಕಾಶವಾಗುವ ಸಾಧ್ಯತೆಯಿದೆ. ಹೀಗಾಗಿ ಇದು ರಾಂಗ್‌ ಆಗುತ್ತದೆ ಅಂತ ಎಚ್ಚರಿಸಿದ್ದೇ ತಡ ರವಿ ರೈಟ್‌ ಅಂತ ಸಲಹೆಯಿತ್ತರು. ನೆರೆದಿದ್ದ ನಿರ್ಮಾಪಕರೆಲ್ಲಾ ತಲಾ ಒಂದೊಂದು ಲಕ್ಷ ರುಪಾಯಿ ಇಟ್ಟು, ಸಂಘಕ್ಕೆ ನಿಧಿಯನ್ನೂ ಕಟ್ಟಲು ಮುಂದಾದರು. ರೈಟ್‌ ಸಂಘ ಹುಟ್ಟೇಬಿಟ್ಟಿತು.

ಈ ಸಭೆ ಶುಕ್ರವಾರ ನಡೆದಿದ್ದು, ಸಂಘ ಸ್ಥಾಪನೆಯ ಬಗ್ಗೆ ಅಧಿಕೃತ ವರದಿಗಳು ಹೊರಬಿದ್ದಿಲ್ಲ. ಸೋಮವಾರ (ಮೇ. 27) ಈ ಕುರಿತು ನಿರ್ಣಾಯಕ ಸಭೆ ನಡೆಯಲಿದೆ ಎನ್ನಲಾಗುತ್ತಿದೆ. ರೈಟ್‌ ಸಂಘ ಕುರಿತ ಸುದ್ದಿ ನಿಜವೇ ಅಂತ ಬಸಂತ್‌ ಕುಮಾರ್‌ ಪಾಟೀಲರನ್ನು ಕೇಳಿದರೆ, 'ನೋ, ರಾಂಗ್‌" ಅನ್ನುತ್ತಿದ್ದಾರೆ !

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada