»   » ‘ಕಾಸರವಳ್ಳಿಯವರನ್ನು ತಪ್ಪು ತಿಳಿಯುವುದಿಲ್ಲ ;ಅವರು ದೊಡ್ಡವರು’

‘ಕಾಸರವಳ್ಳಿಯವರನ್ನು ತಪ್ಪು ತಿಳಿಯುವುದಿಲ್ಲ ;ಅವರು ದೊಡ್ಡವರು’

Subscribe to Filmibeat Kannada

* ಗಣೇಶ್‌ ಕಾಸರಗೋಡು

ಹಿರಿಯ ನಿರ್ದೇಶಕ, ನಟ, ನಿರ್ಮಾಪಕ ವಾದಿರಾಜ್‌ ತಮ್ಮ ಹಾಗೂ ಗಿರೀಶ್‌ ಕಾಸರವಳ್ಳಿ ನಡುವಿನ ಸಂಪರ್ಕದ ಕೊರತೆ ಬಗ್ಗೆ ಮನವರಿಕೆ ಮಾಡಿದ್ದಾರೆ.

‘ಗಿರೀಶ್‌ ಕಾಸರವಳ್ಳಿಯವರು ನನ್ನ ಬಗ್ಗೆ ಏನೇ ಹೇಳಿದರೂ ನಾನು ಅವರ ಮೇಲಿಟ್ಟಿರುವ ಗೌರವ ಕಮ್ಮಿಯಾಗುವುದಿಲ್ಲ . ಅವರೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ನಿರ್ದೇಶಕ. ಅವರು ಕನ್ನಡದವರು ಎನ್ನುವುದು ಕರ್ನಾಟಕದ ಹೆಮ್ಮೆಯಾದರೆ, ನನ್ನ ಸಹೋದ್ಯೋಗಿಯಾಗಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆ . ನಾನು ಅವರ ಅಭಿಮಾನಿ. ಶುಭಾಕಾಂಕ್ಷಿ ..’ ಎಂದಿದ್ದಾರೆ ವಾದಿರಾಜ್‌.

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳು ರಾಜ್ಯಪ್ರಶಸ್ತಿಗಾಗಿ ಸ್ಪರ್ಧಿಸಬಾರದೆನ್ನುವ ಅರ್ಥದಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ತಳ್ಳಿಹಾಕಿದ ವಾದಿರಾಜ್‌, ನಾನು ಆ ಅರ್ಥದಲ್ಲಿ ಹೇಳಿಲ್ಲ . ಸ್ವರ್ಣಕಮಲದಂಥ ಪ್ರಶಸ್ತಿ ಪಡೆದ ಚಿತ್ರಕ್ಕೆ ಅದರದ್ದೇ ಆದ ಗೌರವ, ವರ್ಚಸ್ಸು ಇರುತ್ತದೆ. ಅದೇ ಚಿತ್ರ ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಿದರೆ ಆ ಗೌರವ, ವರ್ಚಸ್ಸು ಕಮ್ಮಿಯಾಗುತ್ತದೆ’ ಎನ್ನುವುದು ನನ್ನ ಕಾಳಜಿ.

ಈ ಬಗ್ಗೆ ‘ಯಾರೋ ಮೂರನೇ ವ್ಯಕ್ತಿ ಕಡ್ಡಿ ಆಡಿಸಿರುವುದರಿಂದ ಆದ ಅನಾಹುತವಿದು. ಆ ವ್ಯಕ್ತಿ ಯಾರೆಂದು ನನಗೆ ಗೊತ್ತು . ಸಮಯ ಬಂದಾಗ ಬಹಿರಂಗಪಡಿಸುವೆ..’ ಎಂದು ವಾದಿರಾಜ್‌ ಈ ವರದಿಗಾರನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಗಿರೀಶ್‌ ಕಾಸರವಳ್ಳಿ ನಿರ್ದೇಶಿಸಿದ ‘ದ್ವೀಪ’ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು . ಈ ಚಿತ್ರವನ್ನು ನಿರ್ಮಾಪಕರು ರಾಜ್ಯ ಪ್ರಶಸ್ತಿಗಾಗಿ ಕಳುಹಿಸಿದ್ದರು. ಆಯ್ಕೆ ಸಮಿತಿ ಪ್ರಶಸ್ತಿ ಪ್ರಕಟಿಸಿದ ನಂತರ ಮುಖ್ಯಮಂತ್ರಿಯವರಿಗೆ ನಾನು ಬರೆದ ಪತ್ರವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿಲ್ಲ . ಇದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ.

ಗಿರೀಶ್‌ ಕಾಸರವಳ್ಳಿ ತಮಗೆ ಬಗ್ಗೆ ಪ್ರತಿಕ್ರಿಯಿಸಿರುವ ಪರಿಯ ಬಗ್ಗೆ ನನಗೆ ನೋವಾಗಿದೆ. ಆದರೆ ನಾನು ಕಾಸರವಳ್ಳಿಯವರನ್ನು ಖಂಡಿತಾ ತಪ್ಪು ತಿಳಿಯುವುದಿಲ್ಲ . ಯಾರಿಗೇ ಆದರೂ ಆ ಸಮಯದಲ್ಲಿ ನೋವಾಗುವುದು ಸಹಜ..

ಹಾಗೆ ನೋಡಿದರೆ ವಾದಿರಾಜ್‌ ಈ ವಿವಾದ ಎದ್ದಾಗಲೇ ಗಿರೀಶ್‌ ಕಾಸರವಳ್ಳಿಯವರಿಗೆ ಫೋನ್‌ ಮಾಡಿ ವಿವರ ತಿಳಿಸಲು ಪ್ರಯತ್ನಿಸಿದ್ದರಂತೆ. ಆದರೆ ಟೆಲಿಫೋನ್‌ನಲ್ಲಿ ಲಭ್ಯವಿಲ್ಲದುದರಿಂದ ಇದು ಸಾಧ್ಯವಾಗಲಿಲ್ಲವಂತೆ.

ವಾದಿರಾಜ್‌ ಸರ್ಕಾರಕ್ಕೆ ಬರೆದ ಪತ್ರದ ಆಯ್ದ ಭಾಗ ಇಲ್ಲಿದೆ :

ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರಗಳು ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಬಾರದು. ಏಕೆಂದರೆ ಒಂದು ವೇಳೆ ಆ ಚಿತ್ರಗಳು ಯಾವುದಾದರೂ ಕಾರಣದಿಂದ ಪ್ರಶಸ್ತಿ ಪಡೆಯದಿದ್ದಲ್ಲಿ ರಾಷ್ಟ್ರ ಪ್ರಶಸ್ತಿಗೆ ಅವಮರ್ಯಾದೆ ಮಾಡಿದಂತಾಗುತ್ತದೆ. ಅಲ್ಲದೆ ಅವುಗಳಿಗೆ ಪ್ರಶಸ್ತಿ ಕೊಟ್ಟರೆ ಇನ್ನಿತರ ಒಳ್ಳೆಯ ಚಿತ್ರಗಳು ಅವಕ್ಕಿಂತ ಚೆನ್ನಾಗಿದ್ದರೆ ಪ್ರಶಸ್ತಿ ಪಡೆದುಕೊಳ್ಳುವ ಅವಕಾಶದಿಂದ ವಂಚಿತವಾಗುತ್ತವೆ.

ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳಿಗೆ ನಮ್ಮ ಘನ ಸರ್ಕಾರದವರು ಕೈತುಂಬಾ ಧನರಾಶಿಯನ್ನಿತ್ತರೂ ಅದಕ್ಕೊಂದು ಹೆಸರಿಲ್ಲದ್ದರಿಂದ ಅದರ ಮಾನ್ಯತೆ ಕಳೆದುಕೊಳ್ಳುತ್ತದೆ. ಆದ್ದರಿಂದ ಸ್ವರ್ಣಕಮಲ ಪಡೆದ ಚಿತ್ರಕ್ಕೆ ಆರ್‌.ನಾಗೇಂದ್ರರಾವ್‌ ಪ್ರಶಸ್ತಿ ಎಂದು ಹೆಸರಿಡಬೇಕು. ಕನ್ನಡ ಚಿತ್ರರಂಗಕ್ಕೆ ಮೊದಲ ಪದಕ ಗಳಿಸಿಕೊಟ್ಟವರು ಆರ್‌ಎನ್‌ಆರ್‌ ಅವರು. ಆದ್ದರಿಂದ ಅವರ ಹೆಸರನ್ನಿಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ....

(ವಿಜಯ ಕರ್ನಾಟಕ)

ಪೂರಕ ಓದಿಗೆ-
ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada