For Quick Alerts
  ALLOW NOTIFICATIONS  
  For Daily Alerts

  ನಿಷೇಧ ಯಾರಿಂದಲೂ ಸಾಧ್ಯವಿಲ್ಲ : ತಲ್ಲಂ ವಿಶೇಷ ಸಂದರ್ಶನ

  By Staff
  |
  • ಕಿರಣ್‌ ಕೊನಾಕಿ
  ಕನ್ನಡೇತರ ಚಿತ್ರಗಳ ಪ್ರದರ್ಶನಕ್ಕೆ ಕಾಲಮಿತಿ ಗೊತ್ತುಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಗೌರವಾಧ್ಯಕ್ಷ ತಲ್ಲಂ ನಂಜುಂಡಶೆಟ್ಟಿ ದಟ್ಸ್‌ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

  ವರನಟ ಡಾ.ರಾಜ್‌ಕುಮಾರ್‌ ನೇತೃತ್ವದಲ್ಲಿ ನ.25ರಂದು ಕನ್ನಡ ಚಿತ್ರೋದ್ಯಮ ನಡೆಸಿದ ಬೃಹತ್‌ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕನ್ನಡ ಹಾಗೂ ಕನ್ನಡೇತರ ಚಿತ್ರಗಳ ನಡುವಣ ಸಂಘರ್ಷ ತಾರಕಕ್ಕೇರಿದೆ. ಪರಭಾಷಾ ಚಿತ್ರಗಳ ಬಿಡುಗಡೆಗೆ ಕಾಲಮಿತಿ ಗೊತ್ತುಪಡಿಸದಿದ್ದಲ್ಲಿ ನ.29ರಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್‌ ನೇತೃತ್ವದ ಚಿತ್ರೋದ್ಯಮ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನೂತನ ಕನ್ನಡೇತರ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ಪ್ರತಿಭಟನಾಕಾರರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದರ್ಶಕರ ನಿಲುವನ್ನು ತಿಳಿಯುವ ಉದ್ದೇಶದಿಂದ ದಟ್ಸ್‌ಕನ್ನಡ ತಲ್ಲಂ ಹಿರಿಯ ನಂಜುಂಡಶೆಟ್ಟಿಯವರನ್ನು ಮಾತನಾಡಿಸಿತು. ತಲ್ಲಂ ಹಿರಿಯ ಪ್ರದರ್ಶಕರೂ ಹೌದು. ಮಾತುಕತೆಯ ಮುಖ್ಯಾಂಶಗಳು ಇಲ್ಲಿವೆ :

  • ಕನ್ನಡೇತರ ಚಿತ್ರಗಳ ಬಿಡುಗಡೆಗೆ ಕಾಲಮಿತಿ ಗೊತ್ತುಪಡಿಸುವ ವಿಷಯದ ಕುರಿತು ತಮ್ಮ ನಿಲುವೇನು?
  ಕನ್ನಡೇತರ ಚಿತ್ರಗಳ ಬಿಡುಗಡೆಗೆ ಕಾಲಮಿತಿಯ ನಿರ್ಬಂಧ ವಿಧಿಸುವ ನಿರ್ಮಾಪಕರ ಉದ್ದೇಶ ಸರಿಯಾದುದಲ್ಲ . ಈ ರೀತಿಯ ಆದೇಶವನ್ನು ಯಾವುದೇ ಸರ್ಕಾರ ಹೊರಡಿಸಲು ಸಾಧ್ಯವಿಲ್ಲ . ನಿರ್ಮಾಪಕರ ಬೇಡಿಕೆ ಸಾಂವಿಧಾನಿಕವಾಗಿ ಅಸಿಂಧುವಾದುದು. ಪರಭಾಷಾ ಚಿತ್ರಗಳನ್ನು ತಡೆಯುವುದರಿಂದ ಕನ್ನಡ ಚಿತ್ರಗಳಿಗೆ ಯಾವ ಉಪಯೋಗವೂ ಇಲ್ಲ . ಇದಕ್ಕೆ ಬದಲಾಗಿ ನಿರ್ಮಾಪಕರು ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಕೇಳಬೇಕು. ಉದಾಹರಣೆಗೆ, ಪ್ರಸ್ತುತ ಆಯ್ದ 20 ಚಿತ್ರಗಳಿಗೆ ಸರ್ಕಾರ ತಲಾ 20 ಲಕ್ಷರುಪಾಯಿಗಳ ಸಬ್ಸಿಡಿ ನೀಡುತ್ತಿದೆ. ಕನ್ನಡದಲ್ಲಿ ಪ್ರತಿ ವರ್ಷ ಸುಮಾರು 80-90 ಚಿತ್ರಗಳು ತಯಾರಾಗುತ್ತಿದ್ದು , ಎಲ್ಲ ಚಿತ್ರಗಳಿಗೂ ತಲಾ 5 ಲಕ್ಷ ರುಪಾಯಿಗಳ ಸಬ್ಸಿಸಿ ನೀಡಿದರೆ ನಿರ್ಮಾಪಕರಿಗೆ ಅನುಕೂಲವಾಗುತ್ತದೆ. ಅಂತೆಯೇ ಪ್ರದರ್ಶನ ತೆರಿಗೆಯ ಬಗ್ಗೆಯೂ ನಿರ್ಮಾಪಕರು ಯೋಚಿಸಬೇಕು. ಕೆಲವು ರಾಜ್ಯಗಳಲ್ಲಿ ಪ್ರದರ್ಶನ ತೆರಿಗೆ ಅತ್ಯಂತ ಕಡಿಮೆಯಿದೆ. ಇನ್ನು ಕೆಲವೆಡೆ ಪ್ರದರ್ಶನ ತೆರಿಗೆಯೇ ಇಲ್ಲ . ಪ್ರದರ್ಶನ ತೆರಿಗೆಯನ್ನು ಕಡಿಮೆ ಮಾಡುವಂತೆ ಅಥವಾ ರದ್ದು ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು ನಿರ್ಮಾಪಕರ ಹಿತಾಸಕ್ತಿಗೆ ಒಳ್ಳೆಯದು. ಮತ್ತೊಂದು ಮುಖ್ಯ ವಿಷಯ, ಬಂಡವಾಳದ್ದು . ನಿರ್ಮಾಪಕರು ಶೇ.120ರ ವಾರ್ಷಿಕ ಬಡ್ಡಿಯಂತೆ ಸಾಲ ತರುತ್ತಾರೆ. ಆದುದರಿಂದ ಸರ್ಕಾರ 10 ಕೋಟಿ ರುಪಾಯಿಗಳ ನಿಧಿ ಸ್ಥಾಪಿಸಿ, ರಾಜ್ಯ ಹಣಕಾಸು ನಿಗಮದ ಮೂಲಕ ನಿರ್ಮಾಪಕರಿಗೆ ಶೇ.12ರ ಬಡ್ಡಿಯಲ್ಲಿ ಸಾಲ ಕೊಡಬೇಕು. ಅಂದಹಾಗೆ, ಈ ವಿಷಯಗಳ ಬಗ್ಗೆ ನಾನು ಪಾರ್ವತಮ್ಮ ರಾಜ್‌ಕುಮಾರ್‌ ಅವರೊಂದಿಗೂ ಮಾತನಾಡಿದ್ದೇನೆ.
  • ಮೂರು ವಾರಗಳ ಒಪ್ಪಂದವನ್ನು ಕೆಲವು ಥಿಯೇಟರ್‌ಗಳು ಉಲ್ಲಂಘಿಸಿದ್ದು ತಪ್ಪು ಎನ್ನುವಿರಾ?
  ಇಲ್ಲ . ಖಂಡಿತಾ ಇಲ್ಲ . ಬಿಕ್ಕಟ್ಟನ್ನು ಬಗೆಪರಿಹರಿಸಲು ಉಪ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲಿ ನಿರ್ಮಾಪಕರು ಕನ್ನಡೇತರ ಚಿತ್ರಗಳ ಮೇಲೆ 7 ವಾರಗಳ ನಿರ್ಬಂಧದ ಕುರಿತು ಪಟ್ಟು ಹಿಡಿದಿದ್ದರು. ಈ ಪಟ್ಟನ್ನು ಪ್ರದರ್ಶಕರು ಒಪ್ಪಲು ಸಾಧ್ಯವೇ ಇರಲಿಲ್ಲ . ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಂಬರೀಷ್‌ 3 ವಾರಗಳ ನಿರ್ಬಂಧಕ್ಕೆ ನಿರ್ಮಾಪಕರ ಮನವೊಲಿಸಿದರು. ನಾವು (ಪ್ರದರ್ಶಕರು) ಈ ಒಪ್ಪಂದಕ್ಕೆ ತಾತ್ಕಾಲಿಕವಾಗಿ ಹಾಗೂ ಪ್ರಾಯೋಗಿಕವಾಗಿ ಒಪ್ಪಿಕೊಂಡಿದ್ದೆವು, ಅಷ್ಟೇ. ಇದೇ ಸಮಯದಲ್ಲಿ ‘ವೀರ್‌ ಝಾರಾ’ ಮುಂಬಯಿಯಲ್ಲಿ ತೆರೆಕಂಡಿತು. ಕೆಲವು ಪ್ರದರ್ಶಕರು ಒಪ್ಪಂದದ ವಿರುದ್ಧದ ಕಾನೂನು ರಕ್ಷಣೆ ಪಡೆದು ‘ವೀರ್‌ ಝಾರಾ’ ಚಿತ್ರ ಪ್ರದರ್ಶಿಸುತ್ತಿದ್ದಾರೆ. ನಾನು ಈ ಥಿಯೇಟರ್‌ ಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ. ಅವರೆಲ್ಲರೂ ಆರ್ಥಿಕ ಸಂಕಷ್ಟದಲ್ಲಿ ಕುತ್ತಿಗೆಮಟ್ಟ ಮುಳುಗಿದ್ದಾರೆ. ಥಿಯೇಟರ್‌ ಹರಾಜಿಗೆ ಬರುತ್ತಿರುವ ಕುರಿತ ನೋಟಿಸನ್ನು ತೋರಿಸಿ ಓರ್ವ ಮಾಲಿಕ ಗೋಳು ತೋಡಿಕೊಂಡ. ಇನ್ನೊಬ್ಬ ಮಾಲೀಕ ತನ್ನ ಸಾಲಗಳಿಗಾಗಿ ಥಿಯೇಟರ್‌ ಮಾರಲು ಮುಂದಾಗಿದ್ದಾನೆ. ಈಗ ಹೇಳಿ, ‘ವೀರ್‌ ಝಾರಾ’ ಪ್ರದರ್ಶಿಸುವಲ್ಲಿ ಏನು ತಪ್ಪು ? ಯಾರಿಗೂ ತೊಂದರೆಯಿಲ್ಲದ ಕೆಲಸದ ಬಗ್ಗೆ ಯಾರಾದರೂ ಯಾಕೆ ತಲೆ ಕೆಡಿಸಿಕೊಳ್ಳಬೇಕು?
  • ಗೋಕಾಕ್‌ ಮಾದರಿಯ ಚಳವಳಿಗೆ ನಿರ್ಮಾಪಕರು ಕರೆ ನೀಡಿದ್ದಾರೆ? ನಿಮ್ಮ ಪ್ರತಿಕ್ರಿಯೆ...
  (ನಗು). ಅವರು ಪ್ರದರ್ಶನ ಮತ್ತು ಬಡಾಯಿ ಕೊಚ್ಚಿಕೊಳ್ಳಲು ಹೊರಟಿದ್ದಾರೆ. ಗೋಕಾಕ್‌ ಚಳವಳಿಯ ಸನ್ನಿವೇಶವೇ ಸಂಪೂರ್ಣ ಭಿನ್ನವಾದುದು. ನಿಜವಾಗಿ ಹೇಳಬೇಕೆಂದರೆ, ಸರ್ಕಾರವೇ ಬಲಿಷ್ಠವಾಗಿಲ್ಲ . ಯಾವುದೇ ನಿರ್ಬಂಧ ಅಥವಾ ನಿಷೇಧ ಹೇರುವ ಶಾಸನ ತರುವುದು ಸಾಧ್ಯವಿಲ್ಲ ಎಂದು ಸರ್ಕಾರ ನಿರ್ಮಾಪಕರಿಗೆ ಸ್ಪಷ್ಟವಾಗಿ ಹೇಳಬೇಕು. ಸಹಾಯ ಹಾಗೂ ಸೌಲಭ್ಯಗಳನ್ನು ಕೇಳುವಂತೆ ಹೇಳಬೇಕು. ಆದರೆ ಸರ್ಕಾರ ಈ ನಿಟ್ಟಿನಲ್ಲಿ ನಡೆಯುತ್ತಿಲ್ಲ . ಏಕೆಂದರೆ ಸರ್ಕಾರ ಬಲಿಷ್ಠವಾಗಿಲ್ಲ .
  • ಕನ್ನಡ ಚಿತ್ರಗಳ ಕಳಪೆ ಪ್ರದರ್ಶನಕ್ಕೆ ನಿಮ್ಮ ಪ್ರಕಾರ ಕಾರಣಗಳೇನು?
  ಮೊದಲಿಗೆ ಕನ್ನಡದ ಮಾರುಕಟ್ಟೆಯೇ ಸೀಮಿತವಾದುದು. ಎರಡನೆಯದು ಬಾಲಿವುಡ್‌ ನಿರ್ಮಾಪಕರಂತೆ ಕನ್ನಡದ ನಿರ್ಮಾಪಕರು 15-20 ಕೋಟಿ ರುಪಾಯಿ ಖರ್ಚು ಮಾಡಲಾರರು. ಹಿಂದಿ ಚಿತ್ರಗಳನ್ನೇ ನೋಡಿ, ಬಾಲಿವುಡ್‌ಗೆ ಸ್ಥಳೀಯ ಮಾರುಕಟ್ಟೆಯಲ್ಲದೆ ಅಂತರರಾಷ್ಟ್ರೀಯ ಮಾರುಕಟ್ಟೆಯೂ ಇದೆ. ತಮಿಳು ಚಿತ್ರಗಳು ನೆರೆ ರಾಜ್ಯಗಳಲ್ಲದೆ ಸಿಂಗಾಪುರ, ಮಲೇಷಿಯಾಗಳಲ್ಲೂ ತೆರೆ ಕಾಣುತ್ತವೆ. ತೆಲುಗು ಚಿತ್ರಗಳ ಮಾರುಕಟ್ಟೆಯೂ ದೊಡ್ಡದು. ಆದರೆ ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಮಾತ್ರ ಸೀಮಿತ. ಮೂರನೆಯದಾಗಿ ಕನ್ನಡ ಕಲಾವಿದರ ಸಂಭಾವನೆ ದುಬಾರಿಯಾಯಿತು. ಈ ಎಲ್ಲ ಕಾರಣಗಳಿಂದಾಗಿ ಕನ್ನಡ ಚಿತ್ರಗಳು ಸೊರಗುತ್ತಿವೆ.
  • ಕನ್ನಡದಲ್ಲಿ ಪ್ರತಿಭೆಗಳ ಬರವೇನಾದರೂ....
  ಖಂಡಿತಾ ಇಲ್ಲ . ಇಲ್ಲಿ ಅನೇಕ ನೈಜ ಪ್ರತಿಭಾವಂತರಿದ್ದಾರೆ.
  • ನಿರ್ಮಾಪಕರ ಪ್ರತಿಭಟನೆ ವಿರುದ್ಧವಾಗಿ ನೀವು ಪ್ರದರ್ಶಕರು ಯಾವುದಾದರೂ ಕಾರ್ಯಕ್ರಮ ರೂಪಿಸಿದ್ದೀರಾ?
  ಏನು ಯೋಜನೆಗಳು? ಸರ್ಕಾರವೇ ಅವರ ಪರವಿರುವಾಗ ನಾವು ಮಾಡುವುದಾದರೂ ಏನು?
  • ಅವರ ಪರ!?
  ಅವರ ಪರ ಎಂದರೆ, ಸರ್ಕಾರಕ್ಕೆ ತಾಕತ್ತಿಲ್ಲ ಎಂದರ್ಥ. ನಿರ್ಬಂಧ ಸಾಧ್ಯವಿಲ್ಲ , ಕಾನೂನು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದು ಸರ್ಕಾರಕ್ಕೆ ಸಾಧ್ಯವಾಗಿಲ್ಲ .

  ಕನ್ನಡೇತರ ಚಿತ್ರಗಳ ವಿರುದ್ಧ ಯಾರೊಬ್ಬರೂ ನಿಷೇಧ ಹೇರುವುದು ಸಾಧ್ಯವಿಲ್ಲ .... ನಾನದನ್ನು ಸ್ಪಷ್ಟವಾಗಿ ಹೇಳುತ್ತೇನೆ.........

  ತಲ್ಲಂ ಮಾತು ಮುಗಿಸಿದರು.

  ಈಗ ನೀವು ಹೇಳಿ? : ನಿರ್ಮಾಪಕರ ನಿಲುವು ಸರಿಯಾ? ಪ್ರದರ್ಶಕರ ಧೋರಣೆ ಸರಿಯಾ?

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X