ಒರಟ ಪ್ರಶಾಂತ್ ಕೇಸ್: ಪೊಲೀಸರ ಮೇಲೆ ದೂರು
ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಒರಟ ಪ್ರಶಾಂತ್ ಎಸ್ಕೇಪ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಮಾದರಿಯಲ್ಲಿ ಪತ್ನಿಗೆ ಹೊಡೆದು ಬಡೆದು ಮಾಡಿ, ಪರಸ್ತ್ರೀ ಜೊತೆ ಚಕ್ಕಂದವಾಡುವಾಗ ಸಿಕ್ಕಿಬಿದ್ದ ಹಿನ್ನೆಲೆಯುಳ್ಳ ಪ್ರಶಾಂತ್ ಸದ್ಯಕ್ಕೆ ಕಣ್ಮರೆಯಾಗಿದ್ದಾನೆ.
ಈ ನಡುವೆ ಪರಿ ಪರಮೇಶ್ವರನ ಮೇಲೆ ಅನೈತಿಕ ಸಂಬಂಧದ ಆರೋಪ ಹೊರೆಸಿ ದೂರು ನೀಡಿದ್ದ ಪತ್ನಿ ಶಶಿರೇಖಾ ಈಗ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಂಜಯ ನಗರ ಪೊಲೀಸರು ಪ್ರಶಾಂತ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ನ್ಯಾಯ ದೊರಕಿಸಿಕೊಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಅವರಿಗೆ ಶಶಿರೇಖಾ ದೂರು ನೀಡಿದ್ದಾರೆ.
ಸಂಜಯನಗರದ ಅಪಾರ್ಟ್ಮೆಂಟ್ ನಲ್ಲಿ ಯುವತಿಯೊಬ್ಬಳ ಜೊತೆ ನನ್ನ ಪತಿ ಪ್ರಶಾಂತ ಇದ್ದಾಗಲೇ ಸಂಜಯನಗರ ಪೊಲೀಸರನ್ನು ಕರೆದುಕೊಂಡು ಹೋಗಿ ಹಿಡಿದು ಕೊಟ್ಟಿದ್ದೆ. ಪ್ರಶಾಂತ್ ಬಂಧನವಾದ ಸ್ವಲ್ಪ ಸಮಯದ ನಂತರ ಠಾಣೆಯಿಂದ ಎಸ್ಕೇಪ್ ಆಗಿದ್ದಾನೆ. ಅಥವಾ ಪೊಲೀಸರೇ ಅವನನ್ನು ಬಿಟ್ಟು ಕಳಿಸಿದ್ದಾರೆ. ಬಳಿಕ ನನ್ನ ಬಳಿ ಬಂದು ನಿಮ್ಮ ಪತಿ ಎಲ್ಲಿ ಹೋಗಿದ್ದಾರೆ ಗೊತ್ತಾ ಎಂದು ಪ್ರಶ್ನಿಸಿದ್ದಾರೆ.
ಪ್ರಶಾಂತ್ ಆಸ್ತಿಪಾಸ್ತಿಯಲ್ಲಿ ಚಿಕ್ಕಾಸು ನನಗೆ ಬೇಡ ನನ್ನ ಪತಿ ನನ್ನ ಬಳಿ ಇದ್ದರೆ ಸಾಕು. ಪೊಲೀಸರಿಗೆ ಬುದ್ಧಿ ಹೇಳಿ ಬೇಗ ಪ್ರಕರಣ ಮುಂದುವರೆಯುವಂತೆ ಮಾಡಿ ಎಂದು ಆಯುಕ್ತರಲ್ಲಿ ಶಶಿರೇಖಾ ಮನವಿ ಮಾಡಿಕೊಂಡಿದ್ದಾರೆ.
ಹಲಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ರಶಾಂತ್ ಹಾಗೂ ಶಶಿರೇಖಾ ಮದುವೆಯಾಗಿ ಎಂಟು ವರ್ಷ ಕಳೆದಿದೆ. ದಂಪತಿಗೆ ಐದು ವರ್ಷದ ಮಗು ಇದೆ. ಒರಟ ಐ ಲವ್ ಯೂ, ಮಹರ್ಷಿ, ಅಂಜದಿರು ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡ 'ಅಭಿನಯ ತರಂಗ' ದ ಹುಡುಗ ಪ್ರಶಾಂತ್ ಗೆ ಸಿನಿ ಜೀವನದಲ್ಲೂ ಸುಖ ಕಂಡಿಲ್ಲ.


Click it and Unblock the Notifications











