twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ವಿರುದ್ಧ ಬೀದಿಗಿಳಿಯಲು ಪಾರ್ವತಮ್ಮ ಸಿದ್ಧ

    By Rajendra
    |

    ಅಪ್ಪಿತಪ್ಪಿ ಯಾರಾದರೂ ಡಬ್ಬಿಂಗ್ ಪರ ಮಾತನಾಡಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮಾರಕವಾಗುವಂತಹ ಪ್ರಯತ್ನಗಳು ನಡೆದರೆ ಅನಾರೋಗ್ಯವನ್ನು ಲೆಕ್ಕಿಸದೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದಿದ್ದಾರೆ.

    ನನಗೆ ವಯಸ್ಸಾಗಿದೆ. ದೇಹದಲ್ಲಿ ಶಕ್ತಿ ಇಲ್ಲ. ಆದರೂ ನಮ್ಮ ಯಜಮಾನರು ತುಂಬಿದ ಸ್ಫೂರ್ತಿ, ಆದರ್ಶಗಳು ಇನ್ನೂ ಜೀವಂತವಾಗಿವೆ. ಕನ್ನಡ ಚಿತ್ರೋದ್ಯಮಕ್ಕೆ ನೂರಾರು ವಿಘ್ನಗಳು ಎದುರಾಗಿವೆ. ಅವುಗಳಲ್ಲಿ ಮುಖ್ಯವಾಗಿ ಪರಭಾಷಾ ಚಿತ್ರಗಳ ಪೈಪೋಟಿ, ಚಿತ್ರಮಂದಿರ ಸಮಸ್ಯೆ, ಪೈರಸಿ ಪಿಡುಗು...ಹೀಗೆ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅವುಗಳಿಗಿಂತಲೂ ಭೀಕರವಾದದ್ದು ಡಬ್ಬಿಂಗ್ ಪಿಡುಗು ಎಂದು ಪಾರ್ವತಮ್ಮ ಕ್ರುದ್ಧರಾಗಿದ್ದಾರೆ.

    ರೀಮೇಕ್ ಅಂದರೆ ಪರಭಾಷಾ ಚಿತ್ರದಹಕ್ಕುಗಳನ್ನು ಖರೀದಿಸಿ ಕನ್ನಡ ಕಲಾವಿದರೊಂದಿಗೆ ಚಿತ್ರನಿರ್ಮಿಸುವುದು. ಆದರೆ ಡಬ್ಬಿಂಗ್ ತೀರಾ ಭಿನ್ನವಾಗಿದೆ. ಪರಭಾಷಾ ಚಿತ್ರಕ್ಕೆ ಕನ್ನಡದ ಡೈಲಾಗ್ ಸೇರಿಸಿ ಯಥಾವತ್ತಾಗಿ ಬಿಡುಗಡೆ ಮಾಡುವುದು ಡಬ್ಬಿಂಗ್. ಇದು ಹೆಸರಿಗೆ ಮಾತ್ರ ಕನ್ನಡ ಸಿನಿಮಾ.ಉಳಿದಂತೆ ಕಲಾವಿದರೆಲ್ಲಾ ಪರಭಾಷೆಯವರು.

    ಡಬ್ಬಿಂಗ್ ನಿಂದ ಕನ್ನಡಕ್ಕೆ ನಯಾಪೈಸೆ ಲಾಭವಿಲ್ಲ. ಒಂದು ವೇಳೆ ಕನ್ನಡದಲ್ಲಿ ಡಬ್ಬಿಂಗ್ ಸಂಸ್ಕೃತಿ ಮುಂದುವರಿದಿದ್ದರೆ ರಾಜ್ ಕುಮಾರ್ ರಂತಹ ಕಲಾವಿದರು, ಪುಟ್ಟಣ್ಣನಂತರ ನಿರ್ದೇಶಕರು ಕನ್ನಡಕ್ಕೆ ಸಿಗುತ್ತಿರಲಿಲ್ಲ. ತೆಲುಗು, ತಮಿಳು, ಇಂಗ್ಲಿಷ್ ಭಾಷೆಯ ಡೈಲಾಗ್ ಗಳನ್ನು ಅನುವಾದಿಸುವವರಿಗೆ, ಡಬ್ಬಿಂಗ್ ಕಲಾವಿದರಿಗೆ ಮಾತ್ರ ಕೆಲಸವಿರುತ್ತಿತ್ತು.

    ಒಂದು ವೇಳೆ ಕನ್ನಡಲ್ಲಿ ಡಬ್ಬಿಂಗ್ ಮುಂದುವರಿದಿದ್ದರೆ ದಿಲೀಪ್ ಕುಮಾರ್, ಎಂಜಿಆರ್, ಎನ್ ಟಿಆರ್ ನಂತಹ ಕಲಾವಿದರೆಲ್ಲಾ ಕನ್ನಡಿಗರ ಪಾಲಿಗೆ ಹೀರೋ ಆಗುತ್ತಿದರು. ಈ ಅಪಾಯವನ್ನು ಗುರುತಿಸಿ ಅ ನ ಕೃಷ್ಣರಾಯರು, ಮ.ರಾಮಮೂರ್ತಿಯಂತಹ ಮಹನೀಯರು ಆರಂಭದಲ್ಲೆ ಡಬ್ಬಿಂಗ್ ಸಂಸ್ಕೃತಿಯನ್ನು ಚಿವುಟಿ ಹಾಕಿದ್ದರು.

    ಡಬ್ಬಿಂಗ್ ಸಂಸ್ಕೃತಿಯನ್ನು ಸ್ವಾಭಿಮಾನ ಉಳ್ಳ ಯಾರು ಒಪ್ಪುವುದಿಲ್ಲ. ಈಗ ಮತ್ತೆ ಡಬ್ಬಿಂಗ್ ಬಗ್ಗೆ ಕೂಗು ಕೇಳಿಬಂದಿದೆ. ಎಂದೋ ಎಳ್ಳುನೀರು ಬಿಟ್ಟಿದ್ದ ಡಬ್ಬಿಂಗ್ ಸಂಸ್ಕೃತಿಯನ್ನು ಮತ್ತೆ ಚಲಾವಣೆಗೆ ತರಬೇಕು ಎಂಬ ಬಗ್ಗೆ ಪಾರ್ವತಮ್ಮ ತೀವ್ರವಾಗಿ ನೊಂದುಕೊಂಡಿದ್ದಾರೆ. ಚಿತ್ರರಂಗದ 'ಅಮ್ಮ'ನ ಮಾತಿಗೆ ಯಾರು ವಿರೋಧಿಸಿಲ್ಲ, ಎಲ್ಲರ ಸಹಮತವೂ ವ್ಯಕ್ತವಾಗಿದೆ.

    ಖಾಸಗಿ ಸಂಸ್ಥೆ ಮಾಡಿದ ಕಿತಾಪತಿ: ಕನ್ನಡ ಚಿತ್ರಗಳ ಬೆಳವಣಿಗೆಗೆ 17 ಅಂಶಗಳ ಪಟ್ಟಿಯನ್ನು ತಯಾರಿಸಿ ಖಾಸಗಿ ಸಂಸ್ಥೆಯೊಂದು ವರದಿ ಮಾಡಿತ್ತು. ಪಟ್ಟಿಯಲ್ಲಿ ಡಬ್ಬಿಂಗ್ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಡಬ್ಬಿಂಗ್ ನಿಂದ ಕನ್ನಡ ಚಿತ್ರಗಳು ಉದ್ದಾರವಾಗುತ್ತವೆ, ಶ್ರೀಮಂತ ಭಾಷೆಯ ಚಿತ್ರಗಳನ್ನು ಕನ್ನಡಿಗರಿಗೆ ಲಭ್ಯವಾಗುತ್ತವೆ... ಎಂಬಿತ್ಯಾದಿಯಾಗಿ ಡಬ್ಬಿಂಗ್ ಪರವಾಗಿ ಹೇಳಲಾಗಿತ್ತು.

    ಈ ವರದಿಯನ್ನು ಯಥಾವತ್ತಾಗಿ ಕನ್ನಡ ಸಿನಿಮಾ ಅಕಾಡೆಮಿ ಮುದ್ರಿಸಿತ್ತು. ಪರೋಕ್ಷವಾಗಿ ಡಬ್ಬಿಂಗ್ ಚಿತ್ರಗಳಿಗೆ ಬೆಂಬಲ ವ್ಯಕ್ತಪಡಿಸಿದ ಕನ್ನಡ ಸಿನಿಮಾ ಅಕಾಡೆಮಿಯನ್ನು ಪಾರ್ವತಮ್ಮ ತರಾಟೆಗೆ ತೆಗೆದುಕೊಂಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ಈ ವಿಷಯ ನಮ್ಮ ಗಮನಕ್ಕೆ ಬರದೆ ಮುದ್ರಿತವಾಗಿದೆ. ಈ ಅಚಾತುರ್ಯಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ಪತ್ರ ಬರೆದಿದ್ದರು. ಬಳಿಕ ಮುದ್ರಣಗೊಂಡಿದ್ದ ಪ್ರತಿಗಳಲ್ಲಿ ಡಬ್ಬಿಂಗ್ ವಿಷಯ ತೆಗೆದು ಪ್ರಕಟಿಸಲಾಗಿತ್ತು.

    Friday, August 27, 2010, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X