»   » ಗೋವಾ ಚಿತ್ರೋತ್ಸವದಲ್ಲಿ ಡಾ.ರಾಜ್‌ಗೆ ಅಗೌರವ

ಗೋವಾ ಚಿತ್ರೋತ್ಸವದಲ್ಲಿ ಡಾ.ರಾಜ್‌ಗೆ ಅಗೌರವ

Posted By:
Subscribe to Filmibeat Kannada


ಡಾ.ರಾಜ್‌ಗೆ ಶ್ರದ್ಧಾಂಜಲಿ. ಆದರೆ ಭಾವಚಿತ್ರ ಮಾತ್ರ ಕನ್ನಡದ ಹೆಮ್ಮೆಯ ಕಾಸರವಳ್ಳಿಯವರದು! ಇಂಥದೊಂದು ಭಾರಿ ಎಡವಟ್ಟು ಮಾಡುವ ಮೂಲಕ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ, ಕನ್ನಡದ ಬಗೆಗಿನ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಲಾಗಿದೆ.

  • ಚೇತನ್‌
ಪಣಜಿ : ಈ ಬಾರಿಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ ಚಿತ್ರಗಳ ಸ್ಥೂಲ ಪರಿಚಯ ಮಾಡಿ ಕೊಡುವ ದೃಷ್ಟಿಯಿಂದ ಎಂಟರ್‌ಟೈನ್‌ಮೆಂಟ್‌ ಸೊಸೈಟಿ ಆಫ್‌ ಗೋವಾ ಕಿರು ಹೊತ್ತಿಗೆ ತಂದಿದೆ. ಆ ಹೊತ್ತಿಗೆಯ ಪುಟ 153ರಲ್ಲಿ ಡಾ.ರಾಜ್‌ ಕುಮಾರ್‌ ಅವರ ಸಾಧನೆಯ ಬಗ್ಗೆ ಕೆಲವು ವಿವರಗಳಿವೆ. ಈ ಶ್ರದ್ಧಾಂಜಲಿ ಪುಟದಲ್ಲಿ ರಾಜ್‌ ಬದಲಿಗೆ ಗಿರೀಶ್‌ ಕಾಸರವಳ್ಳಿ ಭಾವಚಿತ್ರ ಅಚ್ಚಾಗಿದೆ.

ಒಂದಲ್ಲ ಐದು : ಭಾವಚಿತ್ರ ಮಾತ್ರ ತಪ್ಪಾಗಿ ಅಚ್ಚಾಗಿಲ್ಲ. ರಾಜ್‌ ಬಗೆಗಿನ ವಿವರಗಳಲ್ಲಿ ಹಲವು ತಪ್ಪುಗಳಾಗಿವೆ. ಮುತ್ತುರಾಜ್‌ ಹೆಸರಿನ ಬದಲಾಗಿ ‘ಮುತ್ಲು ರಾಜ್‌’ ಎಂದಾಗಿದೆ. ರಾಜ್‌ ಅವರ ಕೊನೆಯ ಚಿತ್ರ ‘ಒಡಹುಟ್ಟಿದವರು’ ಎಂದು ತಪ್ಪಾಗಿ ಪ್ರಕಟವಾಗಿದೆ. ಇನ್ನು ‘ಶಂಕರ್‌ ಗುರು’, ‘ಶೇಖರ್‌ ಗುರು’ ಆಗಿದೆ. ರಾಜ್‌ ‘ಹಿರಣ್ಯ ಕಶ್ಯಪ್‌’ ಪಾತ್ರದಲ್ಲೂ ಅಭಿನಯಿಸಿದ್ದಾರೆ ಎಂಬ ವಿವರ ನೀಡಲಾಗಿದೆ.

ಕ್ಷಮೆ ಯಾಚನೆ : ಕಾರ್ಯಕ್ರಮ ಆಯೋಜಿಸಿರುವ ಸೊಸೈಟಿಯ ಸಿಇಒ ನಂದಿನಿ ಪಾಲಿವಾಳ್‌ ಪ್ರಮಾದಕ್ಕೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ‘ನಮ್ಮಿಂದ ದೊಡ್ಡ ತಪ್ಪಾಗಿದೆ. ಅದಕ್ಕೆ ಕ್ಷಮೆ ಇರಲಿ. ಹೊತ್ತಿಗೆಯನ್ನು ಸರಿಪಡಿಸಿ ವಿತರಿಸಲಾಗುವುದು ಎಂದು ನಂದಿನಿ ಭರವಸೆ ನೀಡಿದ್ದಾರೆ.

ಶನಿವಾರ ನಡೆದ ‘ಬಂಗಾರದ ಮನುಷ್ಯ’ ಪ್ರದರ್ಶನಕ್ಕೂ ನಿರೂಪಕಿಯ ಬಾಯ್ತಪ್ಪಿನಿಂದ ಹಲವು ಪ್ರಮಾದಗಳು ಆಗಿದ್ದವು.

ಭಾರತದ ಚಲನಚಿತ್ರಗಳ ಅಂತಾರಾಷ್ಟ್ರೀಯ ಚಿತ್ರೋತ್ಸವ ವಿದೇಶಗಳಲ್ಲಿ ನಡೆಯಲಿ ಅಥವಾ ದೇಶದೊಳಗೇ ಜರುಗಲಿ ಪ್ರಾದೇಶಿಕ ಚಿತ್ರಗಳಿಗೆ ಮನ್ನಣೆಯೇ ಇಲ್ಲ. ಬಾಲಿವುಡ್‌ ಚಿತ್ರಗಳಿಗೇ ಹೆಚ್ಚಿನ ಮಣೆ. ಇದು ಈ ಮೊದಲ ಸಂಪ್ರದಾಯ. ಪ್ರಾದೇಶಿಕ ಚಿತ್ರಗಳ ಕಲಾವಿದರು ಮತ್ತು ತಂತ್ರಜ್ಞರ ಬಗೆಗಿನ ಅಸಡ್ಡೆ ಈಗ ಹೊಸ ಚಾಳಿ. ಅದಕ್ಕೊಂದು ಉದಾಹರಣೆ ಡಾ.ರಾಜ್‌ಗೆ ಅಗೌರವ ಪ್ರಕರಣ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada