»   » ಪ್ರೇಮ್‌ರ 'ಸುಳ್ಳೇ ಸುಳ್ಳು' ಹಾಡಿಗೆ ವಿರೋಧ

ಪ್ರೇಮ್‌ರ 'ಸುಳ್ಳೇ ಸುಳ್ಳು' ಹಾಡಿಗೆ ವಿರೋಧ

Subscribe to Filmibeat Kannada

ಬೆಂಗಳೂರು, ಡಿ.27: ಪ್ರೇಮ್ ನಟಿಸಿ, ನಿರ್ದೇಶಿಸಿರುವ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ 'ಸುಳ್ಳೇ ಸುಳ್ಳು' ಹಾಡಿನ ವಿರುದ್ಧ ಆಕ್ರೋಶಗೊಂಡ ಶ್ರೀರಾಮ ಸೇನಾ ಸಂಘಟನೆ ಕಾರ್ಯಕರ್ತರು ಬುಧವಾರ (ಡಿ.26) ಅಶ್ವಿನಿ ಸ್ಟುಡಿಯೊಗೆ ಕಲ್ಲು ತೂರಿ ದಾಂದಲೆ ಎಬ್ಬಿಸಿದ್ದಾರೆ. ಈ ಚಿತ್ರ ಶುಕ್ರವಾರ (ಡಿ.27) ತೆರೆಕಾಣಲಿದೆ.

ಚಿತ್ರದ ಹಾಡೊಂದರಲ್ಲಿ ಶ್ರೀರಾಮ ಸುಳ್ಳು, ಆಂಜನೇಯ ಸುಳ್ಳು, ಹನುಮಂತ ಲಂಕೆ ಸುಟ್ಟಿದ್ದು ಸುಳ್ಳು, ಹರಿಶ್ಚಂದ್ರ ಸತ್ಯ ಹೇಳಿದ್ದು ಸುಳ್ಳು, ಮಹಾಭಾರತ ಸುಳ್ಳು, ಕುರುಕ್ಷೇತ್ರ ಯುದ್ಧ ಸುಳ್ಳು... ಎಂಬ ಪದಗಳು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತವೆ. ಈ ಪದಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು, ಘಟಕದ ಅಧ್ಯಕ್ಷ ಟಿ.ಎಸ್. ವಸಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿರುವ ಅಶ್ವಿನಿ ಡಿಜಿಟಲ್ ಸ್ಟುಡಿಯೋಗೆ ಬುಧವಾರ ಮುತ್ತಿಗೆ ಹಾಕಿ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶರ ವಿರುದ್ಧ ಘೋಷಣೆ ಕೂಗಿದರು.

ಚಿತ್ರದ ನಿರ್ದೇಶಕ ಪ್ರೇಮ್ ಸ್ಟುಡಿಯೊ ಬಳಿ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಪ್ರೇಮ್ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುಂಚೆಯೇ ಪೋಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಚಿತ್ರದ ನಿರ್ದೇಶಕ ಪ್ರೇಮ್ ಚಿತ್ರಗೀತೆ ರಚಿಸಿದ್ದಾರೆ. ಸುಳ್ಳೇ ಸುಳ್ಳು ಹಾಡನ್ನು ತೆಗೆದುಹಾಕಬೇಕು ಎಂದು ವಸಂತ್‌ಕುಮಾರ್ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶ್ರೀರಾಮ ಸೇನಾ ಉಪಾಧ್ಯಕ್ಷ ಡಾ.ಶಿವಪುತ್ರ ಮತ್ತು ರಾಜ್ಯ ಸಂಚಾಲಕ ಪ್ರೇಮ್ ಕುಮಾರ್ ಮತ್ತಿತರು ಪಾಲ್ಗೊಂಡಿದ್ದರು.

ದಾಳಿಗೆ ಸಿಪಿಎಂ ಖಂಡನೆ
ರಾಜ್ಯದಲ್ಲಿ ಸಂಘ ಪರಿವಾರದ ದಾಳಿಗಳು ಹೆಚ್ಚುತ್ತಿವೆ. ಇಂಥ ದಾಳಿಗಳನ್ನು ಬೆಳೆಯಲು ಬಿಡಬಾರದು. ಕರ್ನಾಟಕದ ಸೌಹಾರ್ದ ಪರಂಪರೆಗೆ ಧಕ್ಕೆಯಾಗುತ್ತದೆ. ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ. ನಿರ್ದೇಶಕ ಪ್ರೇಮ್ ಕ್ಷಮೆ ಕೋರಿದರೂ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯುವುದಾಗಿ ಹೇಳಿಕೆ ನೀಡಿರುವ ಶ್ರೀರಾಮಸೇನಾ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ.

(ದಟ್ಸ್‌ಕನ್ನಡ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada