»   » ಕರ್ನಾಟಕದಲ್ಲಿ ಸದ್ದಿಲ್ಲದಂತೆ 'ಕುಸೇಲನ್' ಬಿಡುಗಡೆ

ಕರ್ನಾಟಕದಲ್ಲಿ ಸದ್ದಿಲ್ಲದಂತೆ 'ಕುಸೇಲನ್' ಬಿಡುಗಡೆ

Posted By:
Subscribe to Filmibeat Kannada

ಅಂದುಕೊಂಡಂತೆಯೇ ಕೊನೆಗೂ ರಜನಿಕಾಂತ್‍ರ 'ಕುಸೇಲನ್' ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆ ಕಾಣುತ್ತಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಪರಿಮಿತ ಸಂಖ್ಯೆಯ ಪ್ರಿಂಟ್‌ಗಳೊಂದಿಗೆ ಚಿತ್ರ ಬಿಡುಗಡೆಗೆ ಅನುಮತಿಕೊಟ್ಟಿದೆ. ಬೆಂಗಳೂರು ನಗರದಲ್ಲೇ 10ಪ್ರಿಂಟ್‌ಗಳೊಂದಿಗೆ 13 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಜೊತೆಗೆ ಮೈಸೂರು, ಮಂಡ್ಯ, ಹಾಸನ, ಮಂಗಳೂರು ಹಾಗೂ ಕೊಳ್ಳೆಗಾಲದಲ್ಲೂ 'ಕುಸೇಲನ್' ಖುಷಿಯಿಂದ ಬಿಡುಗಡೆಯಾಗುತ್ತಿದ್ದಾನೆ.

*ದಟ್ಸ್‌ಕನ್ನಡ ವಿಶೇಷ ಸುದ್ದಿ

ರಜನಿಕಾಂತ್ ಹೊಗೇನಕಲ್ ವಿವಾದಲ್ಲಿ ತಲೆತೂರಿಸಿ ಕನ್ನಡ ವಿರೋಧಿ ಹೇಳಿಕೆಗಳನ್ನು ಕೊಟ್ಟು ತಮಿಳರ ಶಹಬಾಸ್‌ಗಿರಿ ಗಿಟ್ಟಿಸಿದ್ದರು. ಆದರೆ ಕರ್ನಾಕದಲ್ಲಿ ಪರಿಸ್ಥಿತಿ ಉಲ್ಟಾ ಆಗಿ ಕರವೇ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಕರ್ನಾಟಕದಲ್ಲಿ ರಜನಿಕಾಂತ್ ಚಿತ್ರಗಳ ಬಿಡುಗಡೆಗೆ ಹಾಗೂ ಚಿತ್ರ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಆತಂಕ ಆಗಬಾರದು ಎಂದರೆ ಸಾರ್ವಜನಿಕವಾಗಿ ರಜನಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಆಗ್ರಹಿಸಿದ್ದರು. ಇಲ್ಲದಿದ್ದರೆ ಅವರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾವುದಿಲ್ಲ ಎಂದು ಕರವೇ ಎಚ್ಚರಿಸಿತ್ತು. ನಂತರ ತಣ್ಣಗಾದ ರಜನಿಕಾಂತ್ ಕನ್ನಡಿಗರ ಕ್ಷಮೆಯಾಚಿಸಲಿಲ್ಲ. ಕರವೇ ಮಾತ್ರ ಕುಸೇಲನ್ ಬಿಡುಗಡೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ಮಾತಿಗೆ ಕಟ್ಟುಬಿದ್ದಿದೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆ ವಹಿಸಿ ಸದ್ದಿಲ್ಲದಂತೆ ಕುಸೇಲನ್ ಬಿಡುಗಡೆಗೆ ಹಸಿರು ಸೂಚನೆ ಕೊಟ್ಟಿದೆ.

ಕೆಲವು ಕನ್ನಡಪರ ಸಂಘಟನೆಗಳು ಕುಸೇಲನ್ ತೆರೆಕಂಡ ಏಳು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕುಸೇಲನ್ ವಿತರಕರಿಗೆ ತಾತ್ಕಾಲಿಕ ನಿಷೇಧ ಹೇರಿದ್ದವು. ಆದರೆ ಈ ಎಲ್ಲಾ ಕಟ್ಟಪ್ಪಣೆಗಳನ್ನು ಗಾಳಿಗೆ ತೂರಿ ಚಿತ್ರ ಬಿಡುಗಡೆಯಾಗುತ್ತಿದೆ.

ಈ ಕುರಿತು ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಕುಸೇಲನ್ ಬಿಡುಗಡೆಗೂ ಹೊಗೇನಕಲ್‌ ವಿಷಯಕ್ಕೂ ಸಂಬಂಧ ಕಲ್ಪಿಸಬೇಡಿ. ರಜನಿಕಾಂತ್ ಹಾಗೂ ನಿರ್ದೇಶಕ ಬಾಲಚಂದರ್ ಇಬ್ಬರೂ ಕನ್ನಡ ಚಿತ್ರೋದ್ಯಮಕ್ಕೆ ಅತಿ ಮುಖ್ಯವಾಗಿ ಬೇಕಾದವರು. ಕುಸೇಲನ್ ನಿರ್ದೇಶಕ ಪಿ.ವಾಸು ಸಹ ಕನ್ನಡ ಚಿತ್ರಗಳಿಗೆ ತಮ್ಮದೇ ಆದ ಕೊಡುಗೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಕನ್ನಡಿಗರು ಕುಸೇಲನ್ ಚಿತ್ರದ ಬಿಡುಗಡೆ ಹಕ್ಕುಗಳನ್ನು ಖರೀದಿಸಿದ್ದಾರೆ. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಚಿತ್ರಕ್ಕೆ ಯಾವುದೇ ಅಡ್ಡಿ ಆಗದ ರೀತಿ ನಾವು ಬಿಡುಗಡೆಗೆ ಅವಕಾಶ ಮಾಡಿಕೊಡಬೇಕಾಗಿದೆ. ಎಲ್ಲ ನೀತಿ ನಿಯಮಗಳ ನಡುವೆಯೇ ಚಿತ್ರವನ್ನು ಬಿಡುಗಡೆಗೆ ಅವಕಾಶ ನೀಡುತ್ತಿರುವುದಾಗಿ ಜಯಮಾಲಾ ತಿಳಿಸಿದರು.

ಪೂರಕ ಸುದ್ದಿ
'ಕುಸೇಲನ್‌' ರಜನಿಗೆ ಕರ್ನಾಟಕದಲ್ಲಿ ಸಂಕಟಕಾಲ!
ತಮಿಳರ ಪ್ರತಿಭಟನೆಗೆ ರಜನಿ, ಕಮಲ್ ಸೇರ್ಪಡೆ
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada