»   » ಸಿ.ಅಶ್ವತ್ಥ್‌ ಮಾತಲ್ಲಿ ಅಪಸ್ವರ!

ಸಿ.ಅಶ್ವತ್ಥ್‌ ಮಾತಲ್ಲಿ ಅಪಸ್ವರ!

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಡೆಸ್ಕ್‌
ಕನ್ನಡವೇ ಸತ್ಯ ಕಾರ್ಯಕ್ರಮದ ಮೂಲಕ ಸುದ್ದಿಯಲ್ಲಿದ್ದ ಗಾಯಕ ಸಿ.ಅಶ್ವತ್ಥ್‌ , ಬಸವಣ್ಣ ಮತ್ತು ವಚನ ಸಾಹಿತ್ಯದ ಬಗೆಗೆ ಲಘುವಾಗಿ ಹೇಳಿಕೆ ನೀಡಿ, ವಿವಾದಕ್ಕೆ ಗುರಿಯಾಗಿದ್ದಾರೆ.

ಸಿನಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅಶ್ವತ್ಥ್‌ ಅಸಂಬದ್ಧವಾಗಿ ಹೇಳಿಕೆ ನೀಡಿದ್ದಾರೆ. ನಟ ರಾಜ್‌ಕುಮಾರ್‌, ದಿವಂಗತ ಕಾಳಿಂಗರಾವ್‌, ಚಂಪಾ, ಮಲ್ಲಿಕಾರ್ಜುನ್‌ ಮನ್ಸೂರ್‌ ಮತ್ತು ಸುಗಮ ಸಂಗೀತ ಕಲಾವಿದರನ್ನು ಅವಹೇಳನ ಮಾಡಿದ್ದಾರೆ. ಕೂಡಲೇ ಅಶ್ವತ್ಥ್‌ ತಮ್ಮ ಹೇಳಿಕೆಗಳನ್ನು ವಾಪಸ್ಸು ಪಡೆಯಬೇಕು. ಮತ್ತು ಬೇಷರತ್ತು ಕ್ಷಮೆಯಾಚಿಸಬೇಕೆಂದು ಸುಗಮ ಸಂಗೀತ ಕಲಾವಿದರ ವೇದಿಕೆ ಆಗ್ರಹಿಸಿದೆ.

‘ಹೆಸರು ಬಂದ ತಕ್ಷಣ ಅಶ್ವತ್ಥ್‌ ಅಹಂಕಾರ ಮೆರೆದಿದ್ದಾರೆ. ರಾಜ್ಯದಲ್ಲಿ ತಾವೋಬ್ಬರೇ ಅತ್ಯುತ್ತಮ ಗಾಯಕರೆಂಬ ಧೋರಣೆಯಲ್ಲಿ ವಚನಗಾರರನ್ನು ಅವಮಾನಿಸಿದ್ದಾರೆ’ ಎಂದು ಹಿರಿಯ ರಂಗ ಕರ್ಮಿ ಸಿ.ಜಿ. ಕೃಷ್ಣಮೂರ್ತಿ ದೂರಿದ್ದಾರೆ.

ಬಸವಣ್ಣ ಭಯದಿಂದ ವಚನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಯಾವುದೇ ವಿಶೇಷತೆಯಿಲ್ಲ. ವಚನ ಗಾಯನ ಸುಲಭದ ಕೆಲಸ. ಆದರೆ ವಚನಗಳನ್ನು ರಾಜ್ಯದಲ್ಲಿ ನಾನು ಮಾತ್ರ ಸಮರ್ಥವಾಗಿ ಹಾಡಬಲ್ಲೆ ಎನ್ನುವ ಮೂಲಕ ಅಶ್ವತ್ಥ್‌ , ಪಂಚಾಕ್ಷರಿ ಗವಾಯಿ, ಮಲ್ಲಿಕಾರ್ಜುನ್‌ ಮನ್ಸೂರ್‌ರಂತಹ ಗಾಯಕರನ್ನು ಅವಮಾನ ಮಾಡಿದ್ದಾರೆ ಎಂದು ಸಿಜಿಕೆ ಆರೋಪಿಸಿದ್ದಾರೆ.

ಅಶ್ವತ್ಥ್‌ ಬಗ್ಗೆ ತೆಗಳಿಕೆಯ ಮಹಾಪೂರ :

  • ಇತರ ಪ್ರತಿಭಾವಂತ ಗಾಯಕರನ್ನು ಅವಮಾನಿಸುವ ಮತ್ತು ಐತಿಹಾಸಿಕ ವ್ಯಕ್ತಿಗಳನ್ನು ತಾತ್ಸಾರದಿಂದ ನೋಡುವ ಅಶ್ವತ್ಥ್‌ ಅವರ ಧೋರಣೆ ಖಂಡನೀಯ ಎನ್ನುವ ಗಾಯಕಿ ಕಸ್ತೂರಿ ಶಂಕರ್‌, ಎಲ್ಲ ಸಂಗೀತ ಪ್ರಕಾರಗಳು ತಮ್ಮದೇ ಆದ ಅಸ್ತಿತ್ವ ಹೊಂದಿವೆ. ಶಾಸ್ತ್ತ್ರಿಯ ಗಾಯನ ಕೇವಲ ರಾಗ ಎಳೆಯುವುದಕ್ಕಷ್ಟೇ ಸೀಮಿತ ಎಂಬ ಅರ್ಥದಲ್ಲಿ ಅಶ್ವತ್ಥ್‌ ಮಾತನಾಡಿರುವುದು ಸಲ್ಲದು ಎಂದಿದ್ದಾರೆ.
  • ಚಂಪಾ ದೊಡ್ಡ ಕವಿಯಲ್ಲ ಎನ್ನುವ ಅಶ್ವತ್ಥ್‌, ಸುಗಮ ಸಂಗೀತ ನನ್ನೊಬ್ಬನಿಂದಲೇ ನಿಂತಿದೆ ಎಂಬರ್ಥದಲ್ಲಿ ಮಾತನಾಡುತ್ತಿದ್ದಾರೆ. ಸುಗಮ ಸಂಗೀತವನ್ನು ನನ್ನನ್ನು ಹೊರತುಪಡಿಸಿ, ಬೇರೆ ಯಾರೂ ಹಾಡಿದರೂ ಜನ ಕೇಳುವುದಿಲ್ಲ ಎನ್ನುವ ಅಹಂ ಅಶ್ವತ್ಥ್‌ರಲ್ಲಿದೆ ಎಂಬುದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರ ಅಭಿಪ್ರಾಯ.
  • ಕಲಾವಿದನ ಬೆಳವಣಿಗೆಯನ್ನು ಅಹಂಕಾರ ತಡೆಯುತ್ತದೆ ಎಂಬುದನ್ನು ಅಶ್ವತ್ಥ್‌ ಮರೆಯಬಾರದು ಎನ್ನುತ್ತಾರೆ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ಮತ್ತು ಯಶವಂತ್‌ ಹಳಿಬಂಡಿ.
ಇಗೋ ನನ್ನ ಕ್ಷಮೆ : ನನ್ನ ಹೇಳಿಕೆಗಳಿಂದ ನಿಜಕ್ಕೂ ಯಾರಿಗಾದರೂ ನೋವಾಗಿದ್ದರೆ ನನ್ನ ಕ್ಷಮೆಯನ್ನು ಒಪ್ಪಿಸಿಕೊಳ್ಳಿ. ಆದರೆ ನನ್ನ ವೈಯುಕ್ತಿಕ ಅಭಿಪ್ರಾಯಗಳಿಗೆ ಈಗಲೂ ನಾನು ಬದ್ಧ ಎಂದು ಗಾಯಕ ಸಿ.ಅಶ್ವತ್ಥ್‌ ಪ್ರತಿಕ್ರಿಯಿಸಿದ್ದಾರೆ.
Post your views

ಪೂರಕ ಓದಿಗೆ-
ಎದೆಯಿಂದ ಎದೆಗೆ ಹರಿದ ಅಮೃತವಾಹಿನಿಯಲ್ಲಿ ಕನ್ನಡವೇ ಸತ್ಯ!


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada