ಕನ್ನಡ ನಟಿ ನಿತ್ಯಾಗೆ ಕೇರಳದಲ್ಲಿ ನಿಷೇಧ
ಕನ್ನಡ ಮೂಲದ ಕನ್ನಡ ನಟಿ ನಿತ್ಯಾ ಮೆನನ್ ಗೆ ಕೇರಳ ನಿರ್ಮಾಪಕರ ಸಂಘ ನಿಷೇಧ ಹೇರಿದೆ. ಮಾಲಿವುಡ್ ನಲ್ಲಿ ಬೇಡಿಕೆಯ ನಟಿಯಾಗಿರುವ ನಿತ್ಯಾರನ್ನು ಯಾವುದೇ ಸಿನಿಮಾದಲ್ಲಿ ಹಾಕಿಕೊಳ್ಳದಂತೆ ಕೇರಳ ಫಿಲ್ಮ್ ಪ್ರೊಡ್ರೂಸರ್ ಅಸೋಸಿಯೇಷನ್(KFPA)ತಾಕೀತು ಮಾಡಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ನಿತ್ಯಾ ನಾನು ಯಾರ ಮನಸ್ಸನ್ನು ನೋಯಿಸಿಲ್ಲ. ತಿಳಿಯದೇ ಆದ ಘಟನೆ, ಉದ್ಧಟತನ ಮೆರೆದಿಲ್ಲ, ನಿರ್ಮಾಪಕರ ಬಗ್ಗೆ ನನಗೆ ಗೌರವವಿದೆ. ನನಗೆ ಮುಂಚಿತವಾಗಿ ತಿಳಿಸಿ ಬರಬೇಕಿತ್ತು. ಬೇರೆ ಸಿನಿಮಾ ಸೆಟ್ ಗೆ ಬಂದು ಇನ್ನೊಂದು ಸಿನಿಮಾ ಬಗ್ಗೆ ಮಾತುಕತೆ ನಡೆಸಲು ಬಯಸಿದರೆ ನಾನು ಅದಕ್ಕೆ ತಯಾರಿರಲಿಲ್ಲ. ಅದಕ್ಕೆ ನನ್ನ ಮ್ಯಾನೇಜರ್ ಅನ್ನು ಕೇಳಿ ಎಂದು ಹೇಳಿದೆ ಅಷ್ಟೇ ಎಂದಿದ್ದಾರೆ.
ಆದರೆ, ನಿಷೇಧ ಬಗ್ಗೆ ಕೇರಳ ನಟ ನಟಿಯರ ಸಂಘಟನೆ(AMMA)ಗೆ ಯಾವುದೇ ಮನವಿ ಸಲ್ಲಿಸಿಲ್ಲ. ನಿಷೇಧ ಪ್ರಶ್ನಿಸಿ ನಿತ್ಯಾ ಮನಸಿ ಸಲ್ಲಿಸಿದರೆ ನಿರ್ಮಾಪಕರ ವಿರುದ್ಧ ಹೋರಾಡಲು 'ಅಮ್ಮ' ತಯಾರಾಗಿದೆ.
ಇಷ್ಟಕ್ಕೂ ನಿಷೇಧಕ್ಕೆ ಕಾರಣ ಏನು?: ಟಿಕೆ ರಾಜೀವ್ ಕುಮಾರ್ ನಿರ್ದೇಶನದ 'ತತ್ಸಮಯಂ ಒರು ಪೆಣ್ಕುಟ್ಟಿ' ಎಂಬ ಮಲೆಯಾಳಂ ಚಿತ್ರದ ಶೂಟಿಂಗ್ ಮುಗಿಸಿ ನಿತ್ಯಾ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಆ ಸಮಯಕ್ಕೆ ನಿತ್ಯಾರನ್ನು ಕಾಣಲು ಟಾಪ್ ನಿರ್ಮಾಪಕರಾದ ಜಿ ಸುರೇಶ್ ಕುಮಾರ್, ಎ ಜೋಸೆಫ್ ಹಾಗೂ ಸಾಬು ಚೆರಿಯನ್ ಬಂದಿದ್ದಾರೆ. ಎ ಜೋಸೆಫ್ ಸಿನಿಮಾದಲ್ಲಿ ನಟನೆ ಹಾಗೂ ಹಾಡುಗಾರಿಕೆ ಸಂಬಂಧ ಮಾತನಾಡಲು ಬಂದಿದ್ದ ನಿರ್ಮಾಪಕರ ಗುಂಪನ್ನು ಭೇಟಿ ಮಾಡದ ನಿತ್ಯಾ, ನನ್ನ ಮ್ಯಾನೇಜರ್ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಕೋಪಗೊಂಡ ಹಿರಿಯ ನಿರ್ಮಾಪಕರು, ನಿತ್ಯಾ ಮೇಲೆ ನಿಷೇಧ ಹೇರಲು ಮುಂದಾಗಿದ್ದಾರೆ. ದಕ್ಷಿಣ ಭಾರತದ ಯಾವುದೇ ಸಿನಿಮಾದಲ್ಲಿ ನಿತ್ಯಾ ನಟಿಸದಂತೆ ತಡೆಯಲು ಸಿದ್ಧತೆ ನಡೆಸಿದ್ದಾರೆ.
ಮೋಹನ್ ಲಾಲ್ ಜೋಡಿಯಾಗಿ 'ಆಕಾಶ ಗೋಪುರಂ' ಸಿನಿಮಾ ಮೂಲಕ ಮಲೆಯಾಳಂ ಚಿತ್ರಜಗತ್ತಿಗೆ ಕಾಲಿರಿಸಿದ ನಿತ್ಯಾ ಸದ್ಯ ಅಲ್ಲಿ ಟಾಪ್ ಹೀರೋಯಿನ್ ಆಗಿದ್ದಾರೆ. ಇದಲ್ಲದೆ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. 'ಅಲಾ ಮೊದಲೈಯಿಂದಿ' ಚಿತ್ರ ನಟನೆಗೆ ಆಂಧ್ರಪ್ರದೇಶ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಳಿಸಿದ್ದಾರೆ.


Click it and Unblock the Notifications











