ವಿಷ್ಣುವರ್ಧನ ಶೀರ್ಷಿಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ
'ವಿಷ್ಣುವರ್ಧನ' ಶೀರ್ಷಿಕೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದೇ ಶೀರ್ಷಿಕೆಯಲ್ಲಿ ಚಿತ್ರವನ್ನು ಮಾಡುತ್ತೇನೆ. ಯಾವುದೇ ಕಾರಣಕ್ಕೂ ಈ ಶೀರ್ಷಿಕೆಯನ್ನು ಬಿಟ್ಟುಕೊಡುವುದಿಲ್ಲ ಎಂದು ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಹೇಳಿದ್ದಾರೆ. ಅವರು 'ಈ ಟಿವಿ ಕನ್ನಡ' ವಾಹಿನಿಯಲ್ಲಿ ಮಾತನಾಡುತ್ತಿದ್ದ್ದರು.
ವಿಷ್ಣುವರ್ಧನ ಶೀರ್ಷಿಕೆ ಬಗ್ಗೆ ವಿವಾದ ತಲೆದೋರಿದ ಕಾರಣ 'ಪ್ರೊಡಕ್ಷನ್ ನಂಬರ್ 47' ಎಂಬ ಶೀರ್ಷಿಕೆಯಲ್ಲಿ ಚಿತ್ರವನ್ನು ದ್ವಾರಕೀಶ್ ನಿರ್ಮಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ವಿಷ್ಣುವರ್ಧನ ಶೀರ್ಷಿಕೆ ವಿವಾದ ಮುಗಿದ ಅಧ್ಯಾಯ ಎಂದು ಎಲ್ಲರೂ ತಿಳಿದುಕೊಂಡಿದ್ದರು. ಆದರೆ ದ್ವಾರಕೀಶ್ ಅವರು 'ವಿಷ್ಣುವರ್ಧನ' ಶೀರ್ಷಿಕೆಯಲ್ಲೇ ಚಿತ್ರ ಮಾಡುತ್ತೇನೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
'ಆಪ್ತಮಿತ್ರ' ದಂತಹ ಎಷ್ಟೋ ಹಿಟ್ ಚಿತ್ರಗಳನ್ನು ನಾನು ಕೊಟ್ಟಿದ್ದೇನೆ. ಹಾಗೆಯೇ ನನ್ನ ವೃತ್ತಿ ಜೀವನದಲ್ಲಿ 'ವಿಷ್ಣುವರ್ಧನ' ಚಿತ್ರವೂ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಚಿತ್ರ ನಿರ್ಮಾಪಕನ ಹಿತಕಾಪಾಡಬೇಕಾದದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕರ್ತವ್ಯ. ಆದರೆ ಕಳೆದ 50 ವರ್ಷಗಳಲ್ಲಿ ವಾಣಿಜ್ಯ ಮಂಡಳಿ ಎಲ್ಲೂ ನಿರ್ಮಾಪಕನ ರಕ್ಷಣೆಗೆ ಬಂದಿಲ್ಲ.
ಏತನ್ಮಧ್ಯೆ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ಪ್ರೊಡಕ್ಷನ್ ನಂ.47' ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಹದಿನೆಂಟು ದಿನಗಳ ಚಿತ್ರೀಕರಣ ಮುಗಿದಿದೆ. ಶೀರ್ಷಿಕೆಗಾಗಿ ಕೋರ್ಟ್ ಮೆಟ್ಟಿಲೇರುತ್ತೇನೆ. ಧರಣಿ ಸತ್ಯಾಗ್ರಹ ಕೂರುತ್ತೇನೆ. ಒಟ್ಟಿನಲ್ಲಿ ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಕಡಾ ಕಂಡಿತವಾಗಿ ಹೇಳಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ


Click it and Unblock the Notifications











