»   » ಸಿನಿ ಚಳವಳಿಗೆ ಅಮೆರಿಕನ್ನಡಿಗರ ಬೆಂಬಲ

ಸಿನಿ ಚಳವಳಿಗೆ ಅಮೆರಿಕನ್ನಡಿಗರ ಬೆಂಬಲ

Subscribe to Filmibeat Kannada

ಸಿರಿಗನ್ನಡಂ ಗೆಲ್ಗೆ

ಕನ್ನಡಮಿತ್ರರಿಗೆಲ್ಲಾ ನಮಸ್ಕಾರಗಳು;

ಕರ್ನಾಟಕ-ಕನ್ನಡಿಗರಿಂದ, ಕನ್ನಡಿಗರಿಗಾಗಿ, ಕನ್ನಡಿಗರಿಗೋಸ್ಕರ. ಈ ನಿತ್ಯಸತ್ಯವನ್ನು ಸಾಕ್ಷಾತ್ಕಾರಗೊಳಿಸುವುದೇ ಕರ್ನಾಟಕ ಸರಕಾರದ ಪರಮ ಗುರಿ. ‘ಪರಭಾಷಾ ಚಲನಚಿತ್ರಗಳನ್ನು ಏಳು ವಾರಗಳ ನಂತರವೇ ಕರ್ನಾಟಕದಲ್ಲಿ ಬಿಡುಗಡೆಮಾಡಬೇಕು’ ಎಂಬ ಆಗ್ರಹವನ್ನು ಅಮೇರಿಕನ್ನಡಿಗರೆಲ್ಲರೂ ಘಂಟಾಘೋಷವಾಗಿ ಬೆಂಬಲಿಸುತ್ತೇವೆ.

‘ಕರ್ನಾಟಕದಲ್ಲಿ ಪರಭಾಷಾ ಚಿತ್ರಪ್ರದರ್ಶನ ಭಂಡತನ, ಕನ್ನಡ ಚಿತ್ರಪ್ರದರ್ಶನ ಗಂಡುತನ’. ನೆರೆಯ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಕನ್ನಡ ಚಿತ್ರಗಳು ಏಳು ವಾರಗಳಲ್ಲ, ಏಳು ದಿನಗಳು ನಡೆಯುವುದೂ ಕಷ್ಟ. ‘ಕರ್ನಾಟಕ, ತಮಿಳುನಾಡಲ್ಲ, ತೆಲುಗು ದೇಶಂ ಅಲ್ಲಾ, ಆದರೆ ಕನ್ನಡನಾಡು’ ಎಂಬುದನ್ನು ಮನಗಾಣಿಸಿ, ‘ಕರ್ನಾಟಕ ಕನ್ನಡಕ್ಕೆ ಮೀಸಲು’ ಎಂಬ ಧೋರಣೆಯನ್ನು ನೆರೆಯರಿಗೆ ನಿರೂಪಿಸುವುದಕ್ಕೆ, ಪರಭಾಷಾ ಚಿತ್ರಗಳ ನಿರ್ಬಂಧ ಮೊದಲನೆಯ ದಿಟ್ಟಹೆಜ್ಜೆ.

ಕರ್ನಾಟಕದ ಚಿತ್ರಮಂದಿರಗಳಲ್ಲೆಲ್ಲಾ ಕನ್ನಡ ಚಿತ್ರಗಳು ತುಳುಕಾಡಿ, ಕನ್ನಡ ಚಿತ್ರೋದ್ಯಮ ಹೆಮ್ಮರವಾಗಿ ಬೆಳೆದು, ಕನ್ನಡ ಕಲೆ ವಿಶ್ವವಿಖ್ಯಾತವಾಗಲೆಂದು ಹಾರೈಸುತ್ತೇವೆ. ಮನರಂಜನೆಯ ಮೂಲಕ ಕನ್ನಡ ಕಸ್ತೂರಿಯು ಕರ್ನಾಟಕದ ಮನೆ-ಮನೆಯಲ್ಲಿ, ಮನ-ಮನದಲ್ಲಿ, ಪರಿಮಳವನ್ನು ತುಂಬಲೆಂದು ಕೋರುತ್ತೇವೆ.

‘ಆರ್ಥಿಕ ನಾಶ, ಅಲ್ಪ ನಾಶ; ಆರೋಗ್ಯ ನಾಶ, ಸ್ವಲ್ಪ ನಾಶ; ಸಂಸ್ಕೃತಿಯ ನಾಶ, ಸರ್ವ ನಾಶ’. ಕನ್ನಡ ಕರ್ನಾಟಕ ಸಂಸ್ಕೃತಿಯ ಸಂವಾಹಕ. ‘ಕನ್ನಡ ನಾಶ, ಕರ್ನಾಟಕದ ನಾಶ’. ಕನ್ನಡವನ್ನು ಬಳಸುವುದೇ, ಕನ್ನಡವನ್ನು ಬೆಳಸುವುದು. ಕರ್ನಾಟಕ ಎಲ್ಲರಿಗೂ ಪ್ರಿಯವಾಗುತ್ತಿದೆ, ಆದರೆ ಇಲ್ಲಿಗೆ ಬಂದವರಾರೂ ಕನ್ನಡ ಪ್ರಿಯರಾಗುತ್ತಿಲ್ಲ. ನೆರೆಯ ರಾಜ್ಯಗಳಿಂದ ಕನ್ನಡನಾಡಿಗೆ ವಲಸೆ ಬಂದು ನೆಲಸುವವರಿಗೆಲ್ಲಾ ‘ಕರ್ನಾಟಕದಲ್ಲಿ ಏನಾದರೂ ಆಗು, ಮೊದಲು ಕನ್ನಡಿಗನಾಗು’ ಎಂದು ಎಚ್ಚರಿಸಿ, ಕನ್ನಡ ಕಲಿಯದ ದ್ರೋಹಿಗಳಿಗೆ ‘ಕನ್ನಡ ಬೇಡವೆಂದರೆ, ನೀನು ಕನ್ನಡನಾಡಿಗೆ ಬೇಡ, ತೊಲಗಿಲ್ಲಿಂದ’ ಎಂದು ಘರ್ಜಿಸುವ ಕೆಚ್ಚೆದೆಯ ಕಲಿಗಳಾಗಬೇಕು. ಕನ್ನಡ ಕಲೆಯನ್ನು ಮತ್ತು ಸಂಸ್ಕೃತಿಯನ್ನು ಪ್ರಚುರಪಡಿಸುವಲ್ಲಿ ಚಲನಚಿತ್ರ ಮತ್ತು ದೂರದರ್ಶನಗಳು ಅದ್ಭುತ ಸಾಧನಗಳು. ಪರಭಾಷಾ ಚಿತ್ರಗಳ ವಲಸೆಯನ್ನು ತಪ್ಪಿಸಿ, ಕನ್ನಡ ಚಿತ್ರಗಳನ್ನು ಪುರಸ್ಕರಿಸಿ, ಕನ್ನಡವನ್ನು ವಿಶ್ವ ವಿಖ್ಯಾತಿಗೊಳಿಸುವ ಕಾರ್ಯಾಚರಣೆಗಳಿಗೆ ಮತ್ತು ಆಡಳಿತ ನೀತಿ-ರೀತಿಗಳಿಗೆ ಜಯಘೋಷಿಸುತ್ತೇವೆ.

ಇಂತಿ ನಮಸ್ಕಾರಗಳು,

- ಕನ್ನಡ ದಾಸ, ragureddy@hotmail.com
Rajakumar Kannada Sangha
Seattle WA. 98133. USA

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada