»   » ‘ನಾಗಮಂಡಲ’ದಿಂದ ಹುಟ್ಟಿದ ‘ಪಹೇಲಿ’!

‘ನಾಗಮಂಡಲ’ದಿಂದ ಹುಟ್ಟಿದ ‘ಪಹೇಲಿ’!

Subscribe to Filmibeat Kannada
  • ವಿನೋದಿನಿ
ಸದ್ದಿಲ್ಲದೇ ಕನ್ನಡ ಚಿತ್ರಗಳ ಕಥೆ ಕದ್ದು, ರೀಲ್‌ ಸುತ್ತುವ ಬಾಲಿವುಡ್‌ ನಿರ್ದೇಶಕರ ಜಾಣತನವನ್ನು ಮೆಚ್ಚಲೇ ಬೇಕು!

‘ಚಿಗುರಿದ ಕನಸು’ ಚಿತ್ರದ ತಿರುಳನ್ನು ಕದ್ದರು ಎಂಬ ಆರೋಪಗಳು ಹಸಿಯಾಗಿರುವಾಗಲೇ, ಹಿಂದಿಯ ‘ಪಹೇಲಿ’ ಚಿತ್ರದ ಕಥೆಯ ಮೂಲ ಕನ್ನಡದ್ದು ಎಂಬ ಅಂಶ ಬೆಳಕಿಗೆ ಬಂದಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಶಾರೂಖ್‌ ಖಾನ್‌ ಮತ್ತು ರಾಣಿ ಮುಖರ್ಜಿ ಅಭಿನಯದ ‘ಪಹೇಲಿ’ ಚಿತ್ರ ಜ್ಞಾನಪೀಠ ವಿಜೇತ ಕನ್ನಡ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರ ‘ನಾಗಮಂಡಲ’ ಕಥೆಯನ್ನಾಧರಿಸಿದ್ದು ಎನ್ನಲಾಗಿದೆ. ಆದರೆ ಪಹೇಲಿ ಚಿತ್ರ ತಂಡ ಈ ಬಗ್ಗೆ ಮೌನವಹಿಸಿದೆ. ಕಥೆಯನ್ನು ಬಳಸಿಕೊಂಡದ್ದಕ್ಕೆ ಒಂದು ಸಣ್ಣ ಕೃತಜ್ಞತೆ ಸಹಾ ಸ್ಯಾಂಡಲ್‌ವುಡ್‌ಗೆ ಸಂದಿಲ್ಲ.

ಪ್ರಕಾಶ್‌ ರೈ ಮತ್ತು ವಿಜಯಲಕ್ಷ್ಮಿ, ಬಿ.ಜಯಶ್ರೀ ಮತ್ತು ಮಂಡ್ಯ ರಮೇಶ್‌ ನಟಿಸಿದ್ದ, ಟಿ.ಎಸ್‌.ನಾಗಾಭರಣ ನಿರ್ದೇಶನದ ‘ನಾಗಮಂಡಲ’ ಚಿತ್ರ ಬಾಕ್ಸಾಫೀಸ್‌ ಕೊಳ್ಳೆಹೊಡೆದಿತ್ತು.

ಕೆಲವು ತಿಂಗಳುಗಳ ಹಿಂದಷ್ಟೇ, ಮತ್ತೊಬ್ಬ ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರ ಕಾದಂಬರಿ ಆಧರಿಸಿದ ‘ಚಿಗುರಿದ ಕನಸು’ ಚಿತ್ರವನ್ನು ಬಾಲಿವುಡ್‌ ಅಪಹರಿಸಿತ್ತು. ಶಾರೂಖ್‌ ಖಾನ್‌, ಗಾಯತ್ರಿ ಜೋಶಿ ಅಭಿನಯದ ‘ಸ್ವದೇಸ್‌’ ಚಿತ್ರ ಚಿಗುರಿದ ಕನಸು ಚಿತ್ರವನ್ನು ಹೋಲುತ್ತಿತ್ತು. ಈ ಕೃತಿಚೌರ್ಯವನ್ನು ಪ್ರತಿಭಟಿಸಲು ಬಲ ಸಾಲದೇ ನಿರ್ದೇಶಕ ನಾಗಾಭರಣ ಆಗ ಸುಮ್ಮನಾಗಿದ್ದರು.

ಕಥೆ ಕಳ್ಳತನ : ಕೆಲವು ವರ್ಷಗಳಿಂದೆ ತೆರೆಕಂಡಿದ್ದ ನಾನಾ ಪಾಟೇಕರ್‌ ಅಭಿನಯದ ಚಿತ್ರವೊಂದು ಗಿರೀಶ್‌ ಕಾಸರವಳ್ಳಿ ನಿರ್ದೇಶಿಸಿದ ‘ಘಟಶ್ರಾದ್ಧ ’ವನ್ನು ಹೋಲುತ್ತಿದ್ದ ಅಂಶವನ್ನು ಪ್ರೇಕ್ಷಕರು ಪತ್ತೆ ಹಚ್ಚಿದ್ದರು. ಅದಕ್ಕೂ ಮೊದಲು ‘ಮಲ್ಲಮ್ಮನ ಪವಾಡ’ ಚಿತ್ರದ ಕಥೆಯನ್ನು ತುಸು ಆಧುನಿಕಗೊಳಿಸಿ, ಹಿಂದಿಯಲ್ಲಿ ‘ಬೇಟಾ ’ ಹೆಸರಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು.(‘ಬೇಟಾ’ ಚಿತ್ರದ ರಿಮೇಕ್‌ ಕನ್ನಡದಲ್ಲಿ ‘ಅಣ್ಣಯ್ಯ’ ಆದದ್ದೂ ಬೇರೆ ವಿಚಾರ)

ಕನ್ನಡದ ಶ್ರೇಷ್ಠ ಕಥೆಗಳನ್ನು ಕದ್ದು ಸಿನಿಮಾ ತಯಾರು ಮಾಡುತ್ತಿರುವ ಬಾಲಿವುಡ್‌ ಮಂದಿಗೆ ಪಾಠ ಕಲಿಸುವವರು ಯಾರು? ಇನ್ನೊಂದೆಡೆ ಕನ್ನಡದಲ್ಲಿ ಕಥೆಗಳೇ ಇಲ್ಲ ಎಂದು ವೃಥಾ ಆರೋಪ ಮಾಡುವ ಮಂದಿ ಈ ಸಂಗತಿಗಳನ್ನು ಗಮನಿಸಿದರೆ ಒಳ್ಳೆಯದು!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada