»   » ವಜ್ರೇಶ್ವರಿಯ ಕೆಣಕಿದ ಕುಮಾರ ಸ್ವಾಮಿ

ವಜ್ರೇಶ್ವರಿಯ ಕೆಣಕಿದ ಕುಮಾರ ಸ್ವಾಮಿ

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ತಾವು ಕಾಸು ಹಾಕಿರುವ ‘ಚಂದ್ರ ಚಕೋರಿ’ ಚಿತ್ರ ತುಂಬಿದ ಗೃಹಗಳಲ್ಲಿ ಪ್ರದರ್ಶಿತವಾಗುತ್ತಿದ್ದರೂ, ಚಿತ್ರಮಂದಿರಗಳಿಂದ ಅದನ್ನು ಎತ್ತಂಗಡಿ ಮಾಡಲು ಡಾ.ರಾಜ್‌ಕುಮಾರ್‌ ಕುಟುಂಬದವರ ‘ವಜ್ರೇಶ್ವರಿ ಕಂಬೈನ್ಸ್‌’ ಹುನ್ನಾರ ನಡೆಸಿದೆ ಎಂದು ರಾಜಕಾರಣಿ ಕಂ ಚಿತ್ರ ನಿರ್ಮಾಪಕರ ವೇದಿಕೆಯ ಅಧ್ಯಕ್ಷ ಎಚ್‌.ಡಿ.ಕುಮಾರ ಸ್ವಾಮಿ ಕಿಡಿ ಕಾರಿದ್ದಾರೆ.

ವಜ್ರೇಶ್ವರಿ ಕಂಬೈನ್ಸ್‌ನ, ಶಿವರಾಜ್‌ಕುಮಾರ್‌ ಅಭಿನಯದ ‘ಚಿಗುರಿದ ಕನಸು’ ಚಿತ್ರವನ್ನು ಬಿಡುಗಡೆ ಮಾಡುವ ಸಲುವಾಗಿ ‘..ಚಕೋರಿ’ಗೆ ಕೊಕ್‌ ಕೊಡಲು ಚಿತ್ರಮಂದಿರಗಳ ಮಾಲೀಕರ ಮೇಲೆ ರಾಜ್‌ ಕುಟುಂಬ ಒತ್ತಡ ಹೇರುತ್ತಿದೆ ಎಂದು ಸೋಮವಾರ (ಸೆ.29) ಸುದ್ದಿಗೋಷ್ಠಿಯಲ್ಲಿ ಕುಮಾರ ಸ್ವಾಮಿ ಸಿಡಿದರು.

ಅದಕ್ಕೆ ಅವರು ಉದಾಹರಣೆಯಾಗಿ ವೀರೇಶ್‌ ಚಿತ್ರಮಂದಿರವನ್ನು ಹೆಸರಿಸಿದರು. ಇಲ್ಲಿ ತಮ್ಮ ‘ಚಂದ್ರ ಚಕೋರಿ’ ಚಿತ್ರ ಸಾಕಷ್ಟು ದುಡ್ಡು ಮಾಡುತ್ತಿದೆ. ಹಾಗಿದ್ದೂ ಚಿತ್ರಮಂದಿರದ ಮಾಲೀಕರ ಮೇಲೆ ಅದನ್ನು ತೆರವುಗೊಳಿಸುವಂತೆ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ವಜ್ರೇಶ್ವರಿ ಕಂಬೈನ್ಸ್‌ ತಮಗಷ್ಟೇ ಅಲ್ಲದೆ ಇತರೆ ನಿರ್ಮಾಪಕರಿಗೂ ತೊಂದರೆ ಕೊಡುತ್ತಿದೆ. ಹೀಗೇ ಆದರೆ ಪ್ರತಿಭಟನೆಗೆ ಇಳಿಯಬೇಕಾದೀತು ಎಂದು ಕುಮಾರ ಸ್ವಾಮಿ ಎಚ್ಚರಿಸಿದರು.

ಮುನಿರತ್ನ ‘ರಕ್ತ ಕಣ್ಣೀರು’ : ಕುಮಾರ ಸ್ವಾಮಿ ಆರೋಪವನ್ನು ಸಮರ್ಥಿಸಿದ ಮತ್ತೊಬ್ಬ ನಿರ್ಮಾಪಕ ಮುನಿರತ್ನ ತಮ್ಮ ‘ರಕ್ತ ಕಣ್ಣೀರು’ ಚಿತ್ರವನ್ನೂ ಕೂಡ ಎತ್ತಂಗಡಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಮುಂಜಾಗ್ರತೆಯಾಗಿ ನಮ್ಮ ಚಿತ್ರ ಓಡುತ್ತಿರುವ ಚಿತ್ರಮಂದಿರಗಳ ಮಾಲೀಕರಿಗೆ ಚಿತ್ರ ಎತ್ತಂಗಡಿ ಮಾಡಕೂಡದೆಂದು ಕೋರ್ಟ್‌ ನೋಟೀಸ್‌ ಕೊಟ್ಟಿದ್ದೇನೆ. ಅದನ್ನೂ ಮೀರಿದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತುತ್ತೇನೆ ಎಂದು ಧಮಕಿ ಹಾಕಿದರು.

‘ರಾಜ್‌ ಬಗ್ಗೆ ಮಾತಾಡುವ ಯೋಗ್ಯತೆ ಕುಮಾರ ಸ್ವಾಮಿಗೆ ಇಲ್ಲ’

‘ರೌಡಿ ಅಳಿಯ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಶಿವರಾಜ್‌ಕುಮಾರ್‌, ಕುಮಾರ ಸ್ವಾಮಿ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು. ರಾಜ್‌ಕುಮಾರ್‌ ಕುಟುಂಬದ ಬಗ್ಗೆ ಅಥವಾ ಸಂಸ್ಥೆಯ ಬಗ್ಗೆ ಮಾತಾಡುವ ಯೋಗ್ಯತೆ ಕುಮಾರ ಸ್ವಾಮಿಗೆ ಇಲ್ಲ. ಕನ್ನಡ ಚಿತ್ರರಂಗ ಅಂದರೆ ರಾಜ್‌ಕುಮಾರ್‌ ಅಂತಲೇ ಪ್ರೇಕ್ಷಕರಿಗೆ ಪರಿಚಿತ. ಅಂತಹ ವ್ಯಕ್ತಿಗೆ ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸಿ, ಚಿತ್ರಮಂದಿರ ಕಸಿದುಕೊಳ್ಳುವ ಅಗತ್ಯವೇ ಇಲ್ಲ ಎಂದರು.

‘ಚಿಗುರಿದ ಕನಸು’ ಬಿಡುಗಡೆ ಇಂತ ದಿನವೇ ಆಗಬೇಕು ಅಂತ ಮೊದಲೇ ನಿರ್ಧರಿತವಾಗಿತ್ತು. ತಮ್ಮ ಚಿತ್ರವನ್ನು ಎತ್ತಂಗಡಿ ಯಾಕೆ ಮಾಡುತ್ತಾರೆ ಅಂತ ಚಿತ್ರಮಂದಿರದ ಮಾಲೀಕರನ್ನು ಕುಮಾರ ಸ್ವಾಮಿ ಕೇಳಲಿ ಅಥವಾ ವಜ್ರೇಶ್ವರಿ ಕಂಬೈನ್ಸ್‌ ಕಚೇರಿಗೆ ಬಂದು ಕೂತು ಮಾತಾಡಲಿ. ಅದು ಬಿಟ್ಟು, ಸುದ್ದಿಗೋಷ್ಠಿ ನಡೆಸಿ ರಂಪ ಮಾಡುವುದು ಸರಿಯಲ್ಲ ಎಂದು ಶಿವರಾಜ್‌ ವಿಷಾದಿಸಿದರು.

ಕೋಲಾರದಲ್ಲಿ ‘ಚಿಗುರಿದ ಕನಸು’ ಬಿಡುಗಡೆ ಮಾಡಿ ಅಂತ ಅಭಿಮಾನಿಗಳು ಕೇಳಿಕೊಂಡರು. ಆದರೂ ಅದಕ್ಕೆ ಒಪ್ಪಲಿಲ್ಲ. ಅಭಿಮಾನ ಇದ್ದರೆ ಬೆಂಗಳೂರಿಗೇ ಬಂದು ನೋಡಿ. ಗಲಾಟೆ ಇರುವ ಕಡೆ ಚಿತ್ರ ತೋರುವುದು ಸರಿಯಲ್ಲ ಅಂತ ಹೇಳಿದೆ. ನಮಗೆ ಮೊದಲು ನರ್ತಕಿ ಚಿತ್ರಮಂದಿರ ಕೊಡ್ತೀವಿ ಅಂದಿದ್ದರು. ಈಗ ಸಿಗಲಿಲ್ಲ. ಅದಕ್ಕೂ ನಾನು ಗಲಾಟೆ ಮಾಡ್ಲಿಲ್ಲ. ನನ್ನ ‘ಶ್ರೀರಾಮ್‌’ ಚಿತ್ರವನ್ನು 97 ದಿನಕ್ಕೇ ಎತ್ತಂಗಡಿ ಮಾಡಿದರು. ಆಗಲೂ ಸುಮ್ಮನಿದ್ದೆ. ಚಂದ್ರ ಚಕೋರಿ ಸಿನಿಮಾದಲ್ಲಿ ನಟಿಸಿರುವುದು ನಮ್ಮ ಸಂಬಂಧದ ಹುಡುಗ. ಆತನಿಗೆ ನಾವೇ ಯಾಕೆ ಅನ್ಯಾಯ ಮಾಡ್ತೀವಿ? ಪರಿಸ್ಥಿತಿ ಹೀಗಿರುವಾಗ ಸುಮ್ಮನೆ ವಿವಾದ ಮಾಡುವುದು ಸರಿಯಲ್ಲ. ನಮ್ಮ ಕುಟುಂಬದ ಬಗ್ಗೆ ಮಾತಾಡೋಕೆ ಕುಮಾರ ಸ್ವಾಮಿ ಯಾರು ಎಂದು ಶಿವರಾಜ್‌ ಕುಮಾರ್‌ ಕೆಂಡಾಮಂಡಲಾದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada