»   » ಕಾವೇರಿ ವ್ಯಾಜ್ಯಕ್ಕೆ ತಾರಾ ಸಮರದ ರಂಗು?

ಕಾವೇರಿ ವ್ಯಾಜ್ಯಕ್ಕೆ ತಾರಾ ಸಮರದ ರಂಗು?

Subscribe to Filmibeat Kannada

*ದೇವರಾಜ, ಚೆನ್ನೈ

ಕಾವೇರಿ ಸಮಸ್ಯೆ ಬಗೆಹರಿಸಲು ತನ್ನಿಂದ ಏನು ಸಾಧ್ಯವೋ ಅದನ್ನೆಲ್ಲಾ ತಮಿಳುನಾಡು ಸರ್ಕಾರ ಮಾಡುತ್ತಿದೆ. ಇಂಥಾ ಸೂಕ್ಷ್ಮ ವಿಚಾರದಲ್ಲಿ ಕನ್ನಡದ ಸಿನಿಮಾ ತಾರೆಯರು ತಲೆತೂರಿಸಿ, ಬೀದಿಗಿಳಿದಿರುವುದು ಸರಿಯಲ್ಲ. ತಾರೆಯರು ತಣ್ಣಗೆ ಸಿನಿಮಾ ಮಾಡಿಕೊಂಡು ಇರಬೇಕು !’

ಜಯಲಲಿತಾ ವಕ್ತಾರಳಂತೆ ಖುಷ್‌ಬೂ ಹೀಗೆ ಮಾತಾಡುವಾಗ ಆಕೆಗೆ ರವಿಚಂದ್ರನ್‌ ನೆನಪಿಗೇ ಬರುವುದಿಲ್ಲ. ಸ್ಯಾಂಡಲ್‌ವುಡ್‌ ಓಣಿಗಳಲ್ಲಿ ಓಡಾಡುವಾಗ ಅಣ್ಣಾವ್ರ ಕಂಡೊಡನೆ ಕೈಮುಗಿಯುತ್ತಿದ್ದುದನ್ನೂ ಮರೆತಂತಿದೆ. ಇಷ್ಟಕ್ಕೆಲ್ಲಾ ಕಾರಣ- ಸದ್ಯಕ್ಕೆ ಈಕೆ ಜಯಾ ಟಿವಿಯ ಅನ್ನ ತಿನ್ನುತ್ತಿರುವುದು .

ಮೊನ್ನೆ ಕನ್ನಡ ಚಿತ್ರೋದ್ಯಮ ಕಾವೇರಿ ಚಳವಳಿಗೆ ಬೆನ್ನು ತಟ್ಟಿ, ತಾನೂ ಇದರಲ್ಲಿ ಭಾಗಿಯೆಂದು ತೋರಲು ಪ್ರತಿಭಟನೆ ನಡೆಸಿದ್ದು ಜಯಲಲಿತಾಗೆ ಸಣ್ಣದೊಂದು ಪೆಟ್ಟು ಕೊಟ್ಟಿರುವುದಂತೂ ನಿಜ. ಅದಕ್ಕೇ ತಮಿಳುನಾಡಲ್ಲಿ ತಾರಾಬಳಗವನ್ನು ಪುಸಲಾಯಿಸಿ, ಅಲ್ಲೂ ಕಾವೇರಿ ವಿಷಯವಾಗಿ ಹುಯಿಲೆಬ್ಬಿಸುವ ಕೆಲಸವನ್ನು ಜಯಾ ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ.

ಮೊನ್ನೆ ದಕ್ಷಿಣ ಭಾರತ ತಾರೆಯರ ಒಕ್ಕೂಟದ ಅಧ್ಯಕ್ಷ ವಿಜಯಕಾಂತ್‌ ಈ ವಿಷಯವಾಗಿ ಸಭೆಯನ್ನೇ ಕರೆದುಬಿಟ್ಟರು. ತಮಿಳಿನ ನಂಬರ್‌ ಒನ್‌ ನಾಯಕಿಯರಿಂದ ಹಿಡಿದು ಈಗ ತಾನೆ ಕೆಮೆರಾ ಎದುರಿಸಿರುವ ನಾಯಕಿಯರವರೆಗೆ ಎಲ್ಲರ ದಂಡು ಅಲ್ಲಿತ್ತು. ರಜನೀಕಾಂತ್‌ ಅಥವಾ ಕಮಲ ಹಾಸನ್‌ರಂಥಾ ಹಳೆಯ ಹುಲಿಗಳು ಅಲ್ಲಿರಲಿಲ್ಲ !

ಕನ್ನಡ ಸಿನಿಮಾ ನಡೆಸಿದ ಪ್ರತಿಭಟನೆಯ ತೀವ್ರತೆ ಹಾಗೂ ಹದದ ಅರಿವಿರುವ ಯಾವುದೇ ತಮಿಳು ನಟ ಕಾವೇರಿ ಸಮಸ್ಯೆ ಬಗ್ಗೆ ತುಟಿ ಪಿಟಿಕ್‌ ಅನ್ನುತ್ತಿಲ್ಲ. ಹಾಗಂತ ಇವರಿಗೆ ಸಮಸ್ಯೆಯ ಪೂರ್ಣ ಪಾಠ ಗೊತ್ತಿದೆ ಎಂದೇನೂ ಅಲ್ಲ. ಆದರೆ, ಸಿನಿಮಾದವರು ಮೂಗು ತೂರಿಸಬಾರದು ಎನ್ನುತ್ತಲೇ ಮಾತಿಗೆ ಶುರುವಿಡುವ ಖುಷ್‌ಬೂ, ಕನ್ನಡ ಚಿತ್ರಗಳ ಅನ್ನ ತಿಂದ ಗಳಿಗೆಯನ್ನೇ ಮರೆತು ತಮಿಳ್ಮಣಿಯಾಗಿ ಮಾತು ಮುಂದುವರೆಸುತ್ತಾಳೆ. ತೀರಾ ಹೀಗೇ ಆದರೆ ತಾನೂ ಚಳವಳಿ ನೆಪದಲ್ಲಿ ಬೀದಿಗಿಳಿಯುವ ಬೆದರಿಕೆಯನ್ನೂ ಹಾಕುತ್ತಾಳೆ.

ಇಷ್ಟು ದಿನ ಸುಮ್ಮಗಿದ್ದ ನಟಿಯರನ್ನು ಎತ್ತಿ ಕಟ್ಟುತ್ತಿರುವ ಜಯಾ ವರಸೆ ಕಾವೇರಿ ಚಳವಳಿಗೆ ಹೊಸ ಭಾಷ್ಯ ಬರೆಯುವ ಅಪಾಯವಿದೆ. ತಾರಾ ಬಲ ಅಂತಿಥದ್ದಲ್ಲ. ಎರಡು ನೆರೆ ರಾಜ್ಯಗಳ ಸಿನಿಮಾ ಮಂದಿ ಪರಸ್ಪರ ಚಳವಳಿಯ ತುರುಸಿಗೆ ನಿಂತರೆ ಅದರ ಪರಿಣಾಮ ಪ್ರಕೋಪಕ್ಕೆ ಹೋಗುವ ಸಾಧ್ಯತೆಯಿದೆ.

ಅಂದಹಾಗೆ, ಖುಷ್‌ಬೂ ಚಳವಳಿಗೆ ದೇವಯಾನಿ, ತ್ರಿಶಾ ಮೊದಲಾದ ಉದಯೋನ್ಮುಖ ನಟಿಯರ ಬೆಂಬಲವಿದೆ. ದೇವಯಾನಿಯಂತೂ ‘ನೀರು ಯಾರಪ್ಪನ ಸ್ವತ್ತೂ ಅಲ್ಲ. ಅದು ಎಲ್ಲರಿಗೂ ಸೇರಿದ್ದು’ ಅಂತ ಇಂಗ್ಲಿಷ್‌ನಲ್ಲೇ ಹೇಳುತ್ತಾ ತಾನೂ ಹೋರಾಟಕ್ಕೆ ಸಿದ್ಧ ಎಂದು ಬಟ್ಟೆಯಿಂದ ಮುಖ ವರಸಿಕೊಳ್ಳುತ್ತಾ ನಿಲ್ಲುತ್ತಾಳೆ. ವಿಜಯಕಾಂತ್‌ ಒಂದು ಇಶಾರೆ ಕೊಟ್ಟರೆ, ತಮಿಳು ತಾರಾ ಬಳಗ ಕೂಡ ಚಳವಳಿಗೆ ಶುರುವಿಡುತ್ತೆ.

ಒಟ್ಟಿನಲ್ಲಿ ದೇವಸ್ಥಾನ ಕಟ್ಟಿಸಿಕೊಂಡ ಖುಷ್‌ಬೂ ಮಾತೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ತಮಿಳ್ಮಣಿ ಅಮ್ಮಾ ಜಯಲಲಿತಾ ಮುಖವಾಣಿಯಾಗಿದ್ದಾರೆ. ಜಯಲಲಿತಾರ ಇಂಥಾ ಹುನ್ನಾರಗಳನ್ನು ಖಂಡಿಸಿ.

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada