»   » ಬಂದ್‌ಗೆ ಅಪಸ್ವರ; ಸ್ವಾಭಿಮಾನ ಸಮಾವೇಶಕ್ಕೆ ವಿಷ್ಣು,ಉಪೇಂದ್ರಗೈರು

ಬಂದ್‌ಗೆ ಅಪಸ್ವರ; ಸ್ವಾಭಿಮಾನ ಸಮಾವೇಶಕ್ಕೆ ವಿಷ್ಣು,ಉಪೇಂದ್ರಗೈರು

Posted By:
Subscribe to Filmibeat Kannada

ಬೆಂಗಳೂರು : ಮೂರು ವಾರಗಳ ಒಪ್ಪಂದ ಉಲ್ಲಂಘಿಸಿ ಕನ್ನಡೇತರ ಚಿತ್ರ ಪ್ರದರ್ಶಿಸುತ್ತಿರುವ ಥಿಯೇಟರ್‌ಗಳ ಎದುರು ಸರದಿ ನಿರಸನ ನಡೆಸಲು ಹಾಗೂ ಬಿಕ್ಕಟ್ಟು ಇತ್ಯರ್ಥ ಆಗುವವರೆಗೆ ಕನ್ನಡ ಚಲನ ಚಿತ್ರೋದ್ಯಮದ ಎಲ್ಲ ಚಟುವಟಿಕೆ ಗಳನ್ನು ಅನಿರ್ದಿಷ್ಟ ಅವಧಿಯ ಕಾಲ ಸ್ಥಗಿತಗೊಳಿಸಲು ‘ಕನ್ನಡ ಸ್ವಾಭಿಮಾನದ ಹೋರಾಟ ಸಮಾವೇಶ’ದಲ್ಲಿ ನಿರ್ಧರಿಸಲಾಯಿತು.

ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನ.29ರ ಸೋಮವಾರ ನಡೆದ ಸಮಾವೇಶದಲ್ಲಿ ಮೇಲಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಭೆ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತಕುಮಾರ್‌ ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ವೈದ್ಯರ ಸಲಹೆಯ ಮೇಲೆ ವಿಶ್ರಾಂತಿಯಲ್ಲಿರುವ ವರನಟ ರಾಜ್‌ಕುಮಾರ್‌ ಸಮಾವೇಶಕ್ಕೆ ಹಾಜರಾಗಿರಲಿಲ್ಲ . ವಿಷ್ಣುವರ್ಧನ್‌, ಉಪೇಂದ್ರ, ರವಿಚಂದ್ರನ್‌ ಕೂಡಾ ಗೈರುಹಾಜರಾಗಿದ್ದರು. ಪಾರ್ವತಮ್ಮ ರಾಜ್‌ಕುಮಾರ್‌, ಶಿವ ರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್‌ ರಾಜ್‌ ಕುಮಾರ್‌, ತಾರಾ, ರಾಜೇಂದ್ರಸಿಂಗ್‌ ಬಾಬು, ಸುಂದರ್‌ರಾಜು ಮುಂತಾದ ಚಿತ್ರೋದ್ಯಮದ ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು.

ವಿಷ್ಣು, ಉಪೇಂದ್ರ, ರವಿಚಂದ್ರನ್‌ ಗೈರುಹಾಜರಿಯ ಬಗ್ಗೆ ಸಮಾವೇಶದಲ್ಲಿ ಮಾತನಾಡಿದ ಕರುನಾಡ ಸೇನೆಯ ಅಗ್ನಿ ಶ್ರೀಧರ್‌ ಅಸಮಾಧಾನ ವ್ಯಕ್ತಪಡಿಸಿದರು. ಚಿತ್ರೋದ್ಯಮದಲ್ಲಿನ ಒಳಜಗಳಗಳು ಮೊದಲು ಇತ್ಯರ್ಥವಾಗಬೇಕು. ಇಲ್ಲದಿದ್ದರೆ ಚಳವಳಿ ವಿಫಲವಾಗುತ್ತದೆ ಎಂದ ಶ್ರೀಧರ್‌- ಎಂಥಹುದೇ ಕೆಲಸವಿದ್ದರೂ ಈ ನಟರು ಸಮಾವೇಶಕ್ಕೆ ಹಾಜರಾಗಬೇಕಿತ್ತು ಎಂದರು. ದುಬಾರಿ ಸಂಭಾವನೆ ಪಡೆಯುವ ನಾಯಕ ನಟರು ತಮ್ಮ ಸಂಭಾವನೆಯನ್ನು ಕನಿಷ್ಠ ಅರ್ಧಕ್ಕೆ ಇಳಿಸಬೇಕು ಎಂದೂ ಶ್ರೀಧರ್‌ ಸಲಹೆ ನೀಡಿದರು.

ಬಂದ್‌ಗೆ ಅಪಸ್ವರ : ಸಮಾವೇಶದಲ್ಲಿ ಮಾತನಾಡದ ನಾಗಾಭರಣ, ತಾರಾ, ಸುಂದರರಾಜ್‌ ಮುಂತಾದವರು ಚಿತ್ರೋದ್ಯಮ ಬಂದ್‌ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ಅಂತಿಮವಾಗಿ ಅನಿರ್ದಿಷ್ಟಾವಧಿ ಬಂದ್‌ಗೆ ಸಮ್ಮೇಳನ ನಿರ್ಣಯ ಕೈಗೊಂಡಿತು.

ಸುಪ್ರೀಂ ಕೋರ್ಟಿನ ಮುಂದೆ ಕನ್ನಡ ಚಿತ್ರ ರಂಗದ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸುವ ರೀತಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲೂ ಸಭೆ ನಿರ್ಧರಿಸಿತು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada