»   » ಸೆನ್ಸಾರ್ ನೊಂದಿಗೆ 'ಮೊಗ್ಗಿನ ಮನಸು' ಗುದ್ದಾಟ

ಸೆನ್ಸಾರ್ ನೊಂದಿಗೆ 'ಮೊಗ್ಗಿನ ಮನಸು' ಗುದ್ದಾಟ

Posted By:
Subscribe to Filmibeat Kannada

ಮುಂಗಾರು ಮಳೆ ನಿರ್ಮಾಪಕ ಈ.ಕೃಷ್ಣಪ್ಪ ಅವರ ಎರಡನೆಯ ಚಿತ್ರ 'ಮೊಗ್ಗಿನ ಮನಸು' ಸೆನ್ಸಾರ್ ಬೋರ್ಡ್‌ನ ಕತ್ತರಿಗೆ ಸಿಲುಕಿದೆ. ಬೆಂಗಳೂರು ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಮುಖ್ಯಸ್ಥರಾದ ಚಂದ್ರಶೇಖರ್ 'ಮೊಗ್ಗಿನ ಮನಸು' ಚಿತ್ರಕ್ಕೆ 'ಎ' ಪ್ರಮಾಣ ಪತ್ರ ಕೊಟ್ಟು ಈ.ಕೃಷ್ಣಪ್ಪನನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇದು ಆ ರೀತಿಯ ಚಿತ್ರ ಅಲ್ಲ. ಆದರೂ ಇದಕ್ಕೆ 'ಎ'ದರ್ಜೆ ನೀಡಿದ್ದಾರೆ ಎಂದು ಸೆನ್ಸಾರ್ ಮಂಡಳಿಯ ಮಹಿಳಾ ಸದಸ್ಯರೊಂದಿಗೆ ಚರ್ಚಿಸಿರುವುದಾಗಿ 'ಮೊಮ' ಚಿತ್ರ ನಿರ್ಮಾಪಕರು ಹೇಳಿದ್ದಾರೆ.

ನಾನು ಸಮಾಜದಲ್ಲಿ ಜವಾಬ್ದಾರಿಯುಳ್ಳ ವ್ಯಕ್ತಿ. ನನ್ನ ಬಗ್ಗೆ ಜನ ಏನು ತಿಳಿದುಕೊಳ್ಳುತ್ತಾರೆ ಎಂದು 'ಯು' ಪ್ರಮಾಣ ಪತ್ರ ಕೊಡದೆ ಸತಾಯಿಸುತ್ತಿರುವ ಸೆನ್ಸಾರ್ ಮಂಡಳಿಯನ್ನು ದೂರಿದ್ದಾರೆ. ಹದಿಹರಿಯದ ಹುಡುಗಿಯರ ಬಗ್ಗೆ ಚಿತ್ರಕಥೆ ಮಾಡಿದ್ದೀಯ. ಆದ ಕಾರಣ ನಾವು ನಿಮ್ಮ ಚಿತ್ರಕ್ಕೆ 'ಎ' ಪ್ರಮಾಣ ಪತ್ರ ಕೊಟ್ಟಿದ್ದೀವಿ ಎಂದು ಸೆನ್ಸಾರ್ ಮಂಡಳಿಯ ಮುಖ್ಯಸ್ಥರು ಹೇಳಿದ್ದಾರೆ. ಸೆನ್ಸಾರ್ ಮಂಡಳಿಯನ್ನು ಹಳಿಯುತ್ತಾ ಅವರ ವಾದವನ್ನು ಈ.ಕೃಷ್ಣಪ್ಪ ಸಾರಾಸಗಟಾಗಿ ತಳ್ಳಿಹಾಕುತ್ತಿದ್ದಾರೆ.

ಸದ್ಯಕ್ಕೆ ಸೆನ್ಸಾರ್ ಮಂಡಳಿ ಮತ್ತು ಈ.ಕೃಷ್ಣಪ್ಪ ಇಬ್ಬರೂ ಸೋಲುತ್ತಿಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಬ್ಬರೂ ದೂರು ಸಲ್ಲಿಸಿದ್ದಾರೆ. ಇವರಿಬ್ಬರ ನಡುವೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಲು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಸಂದೇಶ್ ನಾಗರಾಜ್ ಆಸಕ್ತಿ ವಹಿಸುತ್ತಿಲ್ಲ.

ಏತನ್ಮಧ್ಯೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮೊಗ್ಗಿನ ಮನಸಿಗೆ 'ಎ' ಹಣೆಪಟ್ಟಿ ಅಂಟಿಸಲು ಮುಂಬೈ ಕಚೇರಿಗೆ ಪಾದ ಬೆಳಸಿದೆ. ಏ.28ರಂದು ಬಿಡುಗಡೆಯಾಗಬೇಕಿದ್ದ 'ಮೊಗ್ಗಿನ ಮನಸು' ಮುಂದೂಡಲ್ಪಟ್ಟಿದೆ. ಚಿತ್ರಮಂದಿರ ಕಾದಿರಿಸಲು, ಚಿತ್ರದ ಜಾಹೀರಾತು ಫಲಕಗಳಿಗಾಗಿ, ಪೋಸ್ಟರ್‌ಗಳಿಗಾಗಿ ವೆಚ್ಚಿಸಿದ 40 ಲಕ್ಷ ರೂ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂಗಾಗಿದೆ ಈ.ಕೃಷ್ಣಪ್ಪ ಅವರ ಪರಿಸ್ಥಿತಿ.

'ಮೊಗ್ಗಿನ ಮನಸು' ಚಿತ್ರದ ಹೆಸರು ಕೇಳಿದರೆ ಇದು ಯಾವುದೋ ಕಲಾತ್ಮಕ ಚಿತ್ರ ಅನ್ನಿಸುತ್ತದೆ. ಈ.ಕೃಷ್ಣಪ್ಪನವರಿಗೆ 'ಮುಂಗಾರು ಮಳೆ' ಒಳ್ಳೆ ದುಡ್ಡಿನ ಬೆಳೆಯನ್ನೇ ತಂದುಕೊಟ್ಟಿದೆ. ಅವರ ಎರಡನೆಯ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಹಜವಾಗಿ ಕುತೂಹಲ ಇದ್ದೇ ಇದೆ. ಆದರೆ ಸೆನ್ಸಾರ್ ಮಂಡಳಿ ಮತ್ತು ನಿರ್ಮಾಪಕರ ಜಗಳದಲ್ಲಿ ಪ್ರೇಕ್ಷಕ ಬಡವಾಗಿದ್ದಾನೆ ಅಷ್ಟೇ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada