For Quick Alerts
  ALLOW NOTIFICATIONS  
  For Daily Alerts

  'ಜೋರಾಗಿ ಮಾತಾಡು ಶಿವಣ್ಣ , ಇಲ್ಲಾಂದ್ರೆ ಕೀರಲು ಅಂತ ಬರೀತಾರೆ..'

  By Staff
  |

  ಅಲ್ಲಿ ಪ್ರತಿವಾದಿಗಳೇ ಇರಲಿಲ್ಲ ; ಇದ್ದುದು ಪತ್ರಕರ್ತರು!
  ಆರೋಪಿಗಳು ಎಲ್ಲಿಯೋ ಇದ್ದರು; ಆದರೂ ಅವರು ಮಾತನಾಡುತ್ತಿದ್ದರು!

  - ಆ ಮಾತುಗಳಲ್ಲಿ ಅಸಮಾಧಾನ, ಆಕ್ರೋಶ, ಹತಾಶೆ ಒಟ್ಟಿಗೇ ಧ್ವನಿಸುತ್ತಿದ್ದವು. ಜೊತೆಗೆ ಪ್ರತಿ ಮಾತಿನ ಮೊನೆಗೂ ವ್ಯಂಗ್ಯದ ಲೇಪ . ಮಾತಿನಂಬು ತೂರಿದ್ದು ಪಾರ್ವತಮ್ಮ ರಾಜ್‌ಕುಮಾರ್‌. ಗುರಿ- ಸತ್ಯವನ್ನು ತಿರುಚಿದ ಇತಿಹಾಸಕಾರರು. ಅಲ್ಲಿಗೆ, 'ಕರ್ನಾಟಕ ಚಲನಚಿತ್ರ ಇತಿಹಾಸ" ಕೃತಿಗೆ ಹಾಗೂ ಕೃತಿಯ ಸಂಪಾದಕರಿಗೆ ನಿಷೇಧ ಹೇರಿದರೂ ಪಾರ್ವತಮ್ಮನವರ ಸಿಟ್ಟು ತಣ್ಣಗಾಗಿಲ್ಲ ಎಂದಾಯಿತು.

  ಸದ್ಯಕ್ಕೆ ಅದು ತಣ್ಣಾಗುಗುವಂತೆಯೂ ಕಾಣುವುದಿಲ್ಲ . ಪುಸ್ತಕಕ್ಕೆ ನಿಷೇಧ ಹೇರುವುದರೊಂದಿಗೆ ಪ್ರಕರಣ ಮುಕ್ತಾಯ ಎಂದುಕೊಳ್ಳುವಾಗಲೇ ಬಾಬು- ವಿಷ್ಣು ಮೂಲಕ ವಿವಾದ ಮತ್ತೆ ಹೊಗೆಯಾಡತೊಡಗಿದೆ. ಎಲ್ಲಿಗೆ ಮುಟ್ಟುತ್ತೋ ಯಾರಿಗೆ ಗೊತ್ತು . ಆದರೆ, ಪಾರ್ವತಮ್ಮನವರಲ್ಲಿ ಮಾತ್ರ ಅಪಮಾನ ಇನ್ನೂ ಹಸಿಯಾಗಿದೆ. ಅದು ಹೊಗೆಯಾಡಿದ್ದು 'ತವರಿಗೆ ಬಾ ತಂಗಿ" ಚಿತ್ರದ ಮುಹೂರ್ತದ ಸಂದರ್ಭದಲ್ಲಿ .

  ***

  ಶಿವಣ್ಣ ಜೋರಾಗಿ ಮಾತಾಡು. ಇಲ್ಲಾಂದ್ರೆ ಕೀರಲು ಅಂತ ಬರೀತಾರೆ..

  ಮೊದಲ ಮೂರು ಚಿತ್ರಗಳು ಇಪ್ಪತ್ತೈದು ವಾರ ಓಡಿದವು. 'ಹ್ಯಾಟ್ರಿಕ್‌ ಹೀರೋ" ಅನ್ನೋದನ್ನು ಯಾರು ಜ್ಞಾಪಕ ಇಟ್ಕೋತಾರೆ. ಕೀರಲು ಅನ್ನೋದು ಮಾತ್ರ ನೆನಪಿರುತ್ತೆ .
  ಯಾರನ್ನೂ ಉದ್ದೇಶಿಸದೆ ಪ್ರಾಸಂಗಿಕವೆಂಬಂತೆ ಪಾರ್ವತಮ್ಮ ವ್ಯಂಗ್ಯವಾಗಿ ಮಾತನಾಡುತ್ತಲೇ ಇದ್ದರು. ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಆಂದೋಲನ, ಮೈಸೂರು ಮಿತ್ರ, ಜನ ವಾಹಿನಿ, ಲಂಕೇಶ್‌ ಪತ್ರಿಕೆ, ಉದಯವಾಣಿ, ದಟ್ಸ್‌ಕನ್ನಡ.ಕಾಂ.. ಹೀಗೆ ಪತ್ರಕರ್ತರ ಹಿಂಡೇ ಅಲ್ಲಿ ನೆರೆದಿತ್ತು . ಪಾರ್ವತಮ್ಮ ಮಾತ್ರ ಪತ್ರಕರ್ತರನ್ನು ಮರೆತಂತೆ ಮಾತನಾಡುತ್ತಿದ್ದರು. ಸಾಮಾನ್ಯವಾಗಿ ಸಾರ್ವಜನಿಕ ಹಾಗೂ ಸಿನಿಮಾ ಸಮಾರಂಭಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದ ರಾಜ್‌ಕುಮಾರ್‌ ಕೂಡ 'ತವರಿಗೆ ಬಾ ತಂಗಿ" ಚಿತ್ರದ ಮುಹೂರ್ತಕ್ಕೆ ಬಂದಿದ್ದರು. ಮಾತನಾಡುವ ಚಾನ್ಸ್‌ ಮಾತ್ರ ಪಾರ್ವತಮ್ಮನವರಿಗೆ. ರಾಜ್‌ ಸೈಡ್‌ವಿಂಗ್‌ಗೆ!

  ಹಾಗೆ ನೋಡಿದರೆ, ಪಾರ್ವತಮ್ಮ ಪತ್ರಕರ್ತರೆದುರು ಯಾವತ್ತೂ ಮಾತಿನಲ್ಲಿ ಬಿಗು ಸಡಿಲಿಸಿದ್ದೇ ಇಲ್ಲ . ಅಳೆದೂ ಸುರಿದೂ, ಎಷ್ಟು ಬೇಕೋ ಅಷ್ಟೇ ಮಾತು. ಆದರೆ, ಗುರುವಾರ ಅವರ ಮಾತಿನ ವರಸೆಯೇ ಬದಲಾಗಿತ್ತು . ಅದು- ಅಪಮಾನದ ಗಾಯ. ಸುಮಾರು ಅರ್ಧ ಶತಮಾನದ ಕಾಲ ಸಿನಿಮಾ ರಂಗದಲ್ಲಿ ಹೆಣಗಿದ ಹೆಣ್ಣುಮಗಳು- ತನ್ನ ಪತಿ, ಮಕ್ಕಳು ಹಾಗೂ ಕುಟುಂಬದ ಬಗೆಗೆ ಸಿನಿಮಾ ಇತಿಹಾಸ ಪುಸ್ತಕದಲ್ಲಿ ದಾಖಲಿಸಿದ ಸುಳ್ಳು ಇತಿಹಾಸದ ಬಗೆಗೆ ತೋರಿದ ಸಾತ್ವಿಕ ಸಿಟ್ಟು !

  ***

  ಮತ್ತೆ ಬಂದರು ಸಾಯಿಪ್ರಕಾಶ್‌
  ತುಂಬಾ ದಿನಗಳ ನಂತರ ಉದ್ಯೋಗ ಸಿಕ್ಕ ನಿರುದ್ಯೋಗಿಯಂತೆ ಕಂಠೀರವ ಸ್ಟುಡಿಯೋದ ತುಂಬಾ ಸಾಯಿಪ್ರಕಾಶ್‌ ಅತ್ತಿಂದಿತ್ತ ಓಡಾಡುತ್ತಿದ್ದರು. 'ತವರಿಗೆ ಬಾ ತಂಗಿ" ಚಿತ್ರದ ನಿರ್ದೇಶಕರು ಅವರೇ. ನಂಬಿದ ದೈವ ಸಾಯಿಬಾಬಾ ಹೆಸರಿನಲ್ಲಿ ತೆಗೆದ ಸಿನಿಮಾ ಕೈ ಕಚ್ಚಿದ್ದರಿಂದ ನೆಲ ಕಚ್ಚಿದ್ದ ಸಾಯಿ ಪ್ರಕಾಶ್‌ಗೆ 'ತಂಗಿ"ಯ ಮೂಲಕ ಮತ್ತೆ ನೆಲೆ ಕಂಡುಕೊಳ್ಳುವ ಹಂಬಲ- ಹುಮ್ಮಸ್ಸು . 'ತಂಗಿ.." ಸಾಯಿ ಅವರ 53 ನೇ ಸಿನಿಮಾ.

  ಶಿವಣ್ಣನ ನಾಯಕತ್ವದಲ್ಲಿ 'ಹಳ್ಳಿ ಹೀರೋ" ಎನ್ನುವ ಸಿನಿಮಾ ತೆಗೆಯಬೇಕು ಎನ್ನುವ ಸಾಯಿ ಕನಸು ಇನ್ನೂ ಕೈಗೂಡಿಲ್ಲ . ಇಂದಲ್ಲಾ ನಾಳೆ 'ಹಳ್ಳಿ ಹೀರೋ" ಸೆಟ್ಟೇರೀತು ಎಂದು ಸಾಯಿ'ಬಾಬಾ" ಕೃಪೆ ಗಾಗಿ ಕಾಯುತ್ತಿದ್ದಾರೆ. ಸದಕ್ಕೆ ಸಾಯಿಗೆ ಕೆಲಸ ಕೊಟ್ಟಿರುವುದು- ತವರಿಗೆ ಬಾ ತಂಗಿ!

  ಅಣ್ಣ ಹಾಗೂ ತಂಗಿಯ ವಾತ್ಸಲ್ಯದ ನಡುವೆ ಸುತ್ತುವ ಕಥಾನಕದ ಹೀರೋ ಶಿವರಾಜ್‌ಕುಮಾರ್‌. ನಾಯಕಿ ಅನು ಪ್ರಭಾಕರ್‌. ಅನು ಚಿತ್ರರಂಗ ಪ್ರವೇಶಿಸಿದ್ದೇ 'ಹೃದಯಾ ಹೃದಯಾ" ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗುವುದರೊಂದಿಗೆ. ಹೃದಯದ ನಂತರ ಶಿವಣ್ಣನೊಂದಿಗೆ ನಟಿಸಲು ಕಾಲ ಕೂಡಿ ಬಂದದ್ದು ತಂಗಿಯ ಮೂಲಕ. ಅಂದಹಾಗೆ, ತಂಗಿಯ ಪಾತ್ರದಲ್ಲಿ 'ನಿನಗಾಗಿ" ನಾಯಕಿ ರಾಧಿಕಾ ನಟಿಸುತ್ತಿದ್ದಾರೆ. 'ಇದು ನನಗೆ ಚಾಲೆಂಜಿಂಗ್‌ ಪಾತ್ರ. ಶಿವಣ್ಣನ ಜೊತೆ ನಟಿಸುವ ನನ್ನ ಕನಸು ನನಸಾಗ್ತಿದೆ. ತಂಗಿಯ ಪಾತ್ರವಾದರೂ ಸಿನಿಮಾದಲ್ಲಿ ನನ್ನದು ಪ್ರಮುಖ ಪಾತ್ರ. ನಾಯಕಿ ಪಾತ್ರಕ್ಕಿರುವಷ್ಟೇ ಸ್ಕೋಪ್‌ ಇದೆ" ಎಂದರು ರಾಧಿಕಾ. ಆಕೆ, ಗಂಡನ ಮನೆಯ ಮರೆತಂತಿತ್ತು .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X