ವಾರೆವ್ಹಾ.. ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಡಬಲ್ ಅಲ್ಲ ತ್ರಿಬಲ್ ಧಮಾಕ!
'ಪುಷ್ಪ'-2 ಸಕ್ಸಸ್ ಅಲೆಯಲ್ಲಿ ಅಲ್ಲು ಅರ್ಜುನ್ ತೇಲುತ್ತಿದ್ದಾರೆ. ಅಭಿಮಾನಿಗಳು ಕೂಡ ಸದ್ಯಕ್ಕೆ 'ಪುಷ್ಪ'ರಾಜ್ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಇತ್ತೀಚೆಗೆ ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಟ್ಲಿ ಕಾಂಬಿನೇಷನ್‌ನಲ್ಲಿ ಸಿನಿಮಾ ಘೋಷಣೆ ಆಗಿದ್ದು ಗೊತ್ತೇಯಿದೆ.
ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಚಿತ್ರಕ್ಕೆ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ಅದರ ಸಾರಥ್ಯವನ್ನು ತಮಿಳು ನಿರ್ದೇಶಕ ಅಟ್ಲಿ ವಹಿಸಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಿದೆ. ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡುವ ಲೆಕ್ಕಾಚಾರಲ್ಲಿದ್ದಾರೆ.

ಇದು ಅಲ್ಲು ಅರ್ಜುನ್ ನಟನೆಯ 22 ಸಿನಿಮಾ ಹಾಗೂ ಅಟ್ಲಿ ನಿರ್ದೇಶನದ 6ನೇ ಸಿನಿಮಾ. ಇನ್ನು ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ. ಹಾಗಾಗಿ ಸದ್ಯಕ್ಕೆ 'AA22xA6' ಎಂದು ಕರೆಯಲಾಗುತ್ತಿದೆ. ಹಾಲಿವುಡ್ ವಿಎಫ್‌ಎಕ್ಸ್ ಟೀಂ ಜೊತೆ ಒಪ್ಪಂದ ಮಾಡಿಕೊಂಡಿದ್ದು ದೊಡ್ಡಮಟ್ಟದಲ್ಲೇ ಸಿನಿಮಾ ಮೂಡಿ ಬರಲಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ಕೂಡ ರಿಲೀಸ್ ಆಗಿ ಗಮನ ಸೆಳೆದಿತ್ತು.
ಸದ್ಯ ಚಿತ್ರದ ಕಥೆ ಏನು ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ಅದರಲ್ಲೂ ಮುಖ್ಯವಾಗಿ ಅಲ್ಲು ಅರ್ಜುನ್ ಪಾತ್ರ ಏನು? ಎನ್ನುವ ಬಗ್ಗೆ ಊಹಾಪೋಹ ಶುರುವಾಗಿದೆ. ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ದ್ವಿಪಾತ್ರ ಅಥವಾ ತ್ರಿಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ತಂದೆ ಮಗನಾಗಿ ದ್ವಿಪಾತ್ರದಲ್ಲಿ ನಟಿಸಿದ್ದು ಗೊತ್ತೇಯಿದೆ. 'ಮೆರ್ಸಲ್' ಚಿತ್ರದಲ್ಲಿ ವಿಜಯ್ ಅವರನ್ನು ತ್ರಿಪಾತ್ರದಲ್ಲಿ ತೋರಿಸಿದ್ದರು. ಅದೇ ರೀತಿ ಈ ಮುಂದಿನ ಸಿನಿಮಾದಲ್ಲಿ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಶೀಘ್ರದಲ್ಲೇ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ.
'AA22xA6' ಚಿತ್ರಕ್ಕಾಗಿ ಮಲ್ಟಿ ಯೂನಿವರ್ಸ್ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಅವತಾರ್ ಚಿತ್ರದಲ್ಲಿರುವಂತೆ ಚಿತ್ರ ವಿಚಿತ್ರ ಜೀವಿಗಳನ್ನು ತೋರಿಸುವ ಕೆಲಸ ಪ್ರಯತ್ನ ಮಾಡುತ್ತಿದ್ದಾರಂತೆ. ತ್ರಿಡಿ ಆನಿಮೇಟೆಡ್ ಪಾತ್ರದಲ್ಲಿ ಕೂಡ ಅಲ್ಲು ಅರ್ಜುನ್ ಅಬ್ಬರಿಸುತ್ತಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಹಾಗೂ ಅನನ್ಯಾ ಪಾಂಡೆ ನಾಯಕಿಯರಾಗಿ ನಟಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಬೇರೆ ನಟಿಯರು ಹೆಸರುಗಳು ಕೇಳಿಬರ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.
ಅಂದಾಜು 500 ಕೋಟಿ ರೂ. ಇಂದ 600 ಕೋಟಿ ರೂ. ಬಜೆಟ್‌ನಲ್ಲಿ 'AA22xA6' ಸಿನಿಮಾ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ಅಲ್ಲು ಅರ್ಜುನ್ 175 ಕೋಟಿ ರೂ. ಹಾಗೂ ಅಟ್ಲಿ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಲೆಕ್ಕಾಚಾರ ನಡೀತಿದೆ. ಸದ್ಯ 'ರಾಮಾಯಣ', 'ಟಾಕ್ಸಿಕ್', 'SSMB29' ರೀತಿಯ ಪ್ಯಾನ್ ವರ್ಲ್ಡ್ ಸಿನಿಮಾಗಳು ಈಗ ನಿರ್ಮಾಣ ಆಗುತ್ತಿದೆ. 'ಪುಷ್ಪ'-2 ಬಳಿಕ ಅಲ್ಲು ಅರ್ಜುನ್ ಕೂಡ ಇಂಥದ್ದೇ ದೊಡ್ಡ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ.
ಹಾಲಿವುಡ್ ಕಲಾವಿದರು, ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರ ನಿರೀಕ್ಷೆ ಮೀರಿ ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಅಲ್ಲು ಅರ್ಜುನ್ ದ್ವಿಪಾತ್ರ, ತ್ರಿಪಾತ್ರದಲ್ಲಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇದೇ ಮೊದಲು. ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯನ್ನು ದ್ವಿಪಾತ್ರದಲ್ಲಿ ತೋರಿಸುವುದು ಹೊಸದೇನು ಅಲ್ಲ. ತ್ರಿಪಾತ್ರದಲ್ಲಿ ಕೂಡ ನಾಯಕ ನಟರು ನಟಿಸಿರುವ ಸಾಕಷ್ಟು ಉದಾಹರಣೆಗಳಿವೆ. ತೆಲುಗಿನಲ್ಲಿ ಎನ್‌ಟಿಆರ್, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ಜ್ಯೂ. ಎನ್‌ಟಿಆರ್, ಮಹೇಶ್ ಬಾಬು, ರಾಮ್‌ಚರಣ್ ಎಲ್ಲರೂ ಇಂತಹ ಪ್ರಯತ್ನ ಮಾಡಿದ್ದಾರೆ. ಇದೀಗ ಅಲ್ಲು ಅರ್ಜುನ್ ಅದೇ ಸಾಲಿಗೆ ಸೇರಿಕೊಳ್ಳಲಿದ್ದಾರೆ.


Click it and Unblock the Notifications











