»   » ಯೋಗೇಶ್ವರ್‌ ನಾಯಕಿಅಮೀರ್‌ಗೆ ಖಳನಾಯಕಿ !

ಯೋಗೇಶ್ವರ್‌ ನಾಯಕಿಅಮೀರ್‌ಗೆ ಖಳನಾಯಕಿ !

Subscribe to Filmibeat Kannada

ಶಾಸಕ ಯೋಗೇಶ್ವರ್‌ ತಮ್ಮ ಚೊಚ್ಚಿಲ ಸಿನಿಮಾ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ದಲ್ಲಿ ನಾಯಕಿ ಪಟ್ಟ ಕೊಟ್ಟಿದ್ದ ದಿವ್ಯಾ ಪಾಲಟ್‌ ಎಂಬ ಬಿಳಿ ಬಿಳುಚು ಸುಂದರಿ ಈಗ ಬಾಲಿವುಡ್‌ ಬ್ಲಾಸ್ಟರ್‌ ಅಮೀರ್‌ ಖಾನ್‌ ಮಲತಾಯಿ! ಈ ಹೊಸ ಸಂಬಂಧದಿಂದ ಹಳಸಿದ್ದು ಅಪ್ಪ- ಮಕ್ಕಳ ನಡುವಿನ ಪುಷ್ಕಳ ಪ್ರೀತಿ.

ತಾಹಿರ್‌ ಹುಸೇನ್‌ ಅಂದರೆ ಬಾಲಿವುಡ್‌ನ ಸದ್ದು. ಇವರೇ ಅಮೀರ್‌ ತಂದೆ. ಮಹದಾಸೆಯಿಂದ ಮಗನನ್ನು ಸಿನಿಮಾಗೆ ಪರಿಚಯಿಸಿದವರು. ಹಾಲುಗಲ್ಲದ ಅಮೀರ್‌ ಎಂಟ್ರಿ ಕೊಟ್ಟ ‘ಖಯಾಮತ್‌ ಸೇ ಕಯಾಮತ್‌ ತಕ್‌’ನ ‘ಪಾಪಾ ಕೆಹತೇ ಹೈ ಬಡಾ ನಾಮ್‌ ಕರೇಗಾ... ’ ಹಾಡು ಇವತ್ತಿಗೂ ತಾಹಿರ್‌ಗೆ ಇಷ್ಟ. ಎಲ್ಲಾ ಚೆನ್ನಾಗಿತ್ತು ; ತಾಹಿರ್‌ಗೆ ದಿವ್ಯನಶೆ ಏರುವವರೆಗೆ. ಈಗ ಅಮೀರ್‌ ‘ನನ್ನ ಅಪ್ಪನ ಕಂಪನಿಗಳ ವ್ಯವಹಾರಕ್ಕೂ, ನನಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ’ ಅಂತ ವಕೀಲರ ಮೂಲಕ ಘೋಷಿಸಿಬಿಟ್ಟಿದ್ದಾರೆ.


ಆ ಧ್ರುವದಿಂ ಈ ಧ್ರುವದವರೆಗೆ....

ಉತ್ತರ ಧ್ರುವದಿಂ..ಗೂ ಮುಂಚಿನ ದಿನಗಳವು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಣುಕುತ್ತಿದ್ದ ದಿವ್ಯಾ ಪಾಲಟ್‌, ಜಾಹೀರಾತು ಲೋಕ ಪ್ರವೇಶಿಸಿದರು. ಪಿಯರ್ಸ್‌ ಬೇಬಿಯಾಗಿ ಕಿರುತೆರೆ ಕಂಡಿದ್ದ ಹುಡುಗಿ ಸರ್ಫ್‌ನಲ್ಲಿ ಬಟ್ಟೆ ಒಗೆದು, ಡೆಟಾಲ್‌ನಿಂದ ಸ್ನಾನ ಮಾಡಿದ್ದೂ ಆಯಿತು. ಅಷ್ಟರಲ್ಲಿ ಕ್ಯಾಪ್ಟನ್‌ ವ್ಯೋಮ್‌ ಎಂಬ ತಿಕ್ಕಲು ತಿಕ್ಕಲು ಧಾರಾವಾಹಿಯ ದೊಡ್ಡ ಬಳಗದಲ್ಲಿ ಈಕೆಗೆ ಸ್ಥಾನ ಸಿಕ್ಕಿತು. ಆ ಧಾರಾವಾಹಿ ಮೈಲೇಜ್‌ ಕೂಡ ಜೋರಾಯಿತು. ಅಮೀರ್‌ ರಾಜಾ ಎಂಬುವರ ರಾಮ ಧಾರಾವಾಹಿಯ ಸೀತೆಯಾದದ್ದೂ ಇದೇ ದಿವ್ಯಾ.

ಅನಾಮಿಕಾ, ಝಖ್ಮಿ, ತುಂ ಮೇರೆ ಹೋ, ಹಂ ಹೈ ರಾಹಿ ಪ್ಯಾರ್‌ ಕೆ ಮೊದಲಾದ ಹಿಟ್‌ ಚಿತ್ರಗಳನ್ನು ನಿರ್ಮಿಸಿದ್ದ ತಾಹಿರ್‌, ಟಿವಿ ಫಿಲ್ಮ್ಸ್‌ ಪ್ರೆೃವೇಟ್‌ ಲಿಮಿಟೆಡ್‌ ಹುಟ್ಟುಹಾಕಿ ಟಿವಿ ಧಾರಾವಾಹಿ ಲೋಕಕ್ಕೂ ಲಗ್ಗೆ ಇಟ್ಟಿದ್ದರು. ಒಂದು ಒಳ್ಳೆ ಭಾನುವಾರ ಕ್ಯಾಪ್ಟನ್‌ ವ್ಯೋಮ್‌ ಧಾರಾವಾಹಿಯ ದಿವ್ಯಾ ಪಾಲಟ್‌ ತಾಹಿರ್‌ ಕಣ್ಣಿಗೆ ಬಿದ್ದರು. ಮೆಚ್ಚಾದ ಹುಡುಗಿಯನ್ನು ಮನೆಗೆ ಕರೆತಂದು, ಕೆಲಸ ಕೊಟ್ಟರು. ದಿಲ್‌ ಢೂಂಡ್ತಾ ಹೈ ಎಂಬ ಧಾರಾವಾಹಿಯಲ್ಲಿ ಪಾತ್ರವನ್ನೂ ಕೊಟ್ಟರು. ಇಳಿ ಜೀವ- ಚೆಲ್ಲು ಹುಡುಗಿ ಹತ್ತಿರಾದರು. ಪ್ರೇಮಾಂಕುರವಾಯಿತು. ಮದುವೆಯೂ ಆಯಿತು.

ಆಮೇಲೆ... : ಹೊಸ ಹೆಂಡತಿಯನ್ನು ಸ್ಟಾರ್‌ ಮಾಡುವ ಠರಾವು ಮಾಡಿದ ತಾಹಿರ್‌ ಚಂದಾ ಎತ್ತತೊಡಗಿದರು. ದಿವ್ಯಾ ನಾಲ್ಕು ಸಿನಿಮಾಗಳಿಗೆ ನಾಯಕಿ. ಇದಕ್ಕೆ ಮಗ ಅಮೀರನೂ ಹ್ಞೂಂ ಅಂದಿದ್ದಾನೆ ಅಂತ ಥೈಲಿವಾಲಯಗಳಿಂದ ಹಣ ಬಿಚ್ಚಿಸಿದರು ತಾಹಿರ್‌. ಲಗಾನ್‌ನಿಂದ ಉತ್ತುಂಗಕ್ಕೇರಿರುವ ಅಮೀರ್‌ ಹೆಸರ ಮೇಲೆ ಹಣ ಚೆಲ್ಲಲೂ ಯಾರೂ ಹಿಂದೂಮುಂದು ನೋಡಲಿಲ್ಲ. ಆದರೆ ಅಪ್ಪನ ಈ ನಡಾವಳಿ ಮೂರನೆಯವರಿಂದ ಮಗನ ಕಿವಿಗೆ ಬಿತ್ತು. ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿರುವ ಅಮೀರ್‌ ತಮ್ಮ ವಕೀಲ ಸಿ.ಬಿ.ವಾಧ್ವಾ ಅವರನ್ನು ಕರೆಸಿ, ಸ್ಪಷ್ಟನೆ ಕೊಟ್ಟರು....
ಸಾರ್ವಜನಿಕರ ಗಮನಕ್ಕೆ- ಅಲ್‌- ತಾಹಿರ್‌ ಎಂಟರ್‌ಟೇನ್‌ಮೆಂಟ್ಸ್‌, ಟಿವಿ ಫಿಲ್ಮ್ಸ್‌ ಪ್ರೆೃವೇಟ್‌ ಲಿಮಿಟೆಡ್‌ ಮೊದಲಾದ ತಾಹಿರ್‌ ಖಾನ್‌ ಎಂಬುವರಿಗೆ ಸೇರಿದ ಸಂಸ್ಥೆಗಳ ವಹಿವಾಟಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆರ್ಥಿಕವಾಗಿ ಅವರ ವ್ಯವಹಾರವೇ ಬೇರೆ, ನನ್ನದೇ ಬೇರೆ.

ಲಗಾನ್‌ ಚಿತ್ರದ ಮುಹೂರ್ತದಲ್ಲೂ ಅಪ್ಪ- ಮಕ್ಕಳು ಒಟ್ಟಾಗೇ ಇದ್ದರು. ನಗುತ್ತಿದ್ದರು. ಹಾಡುತ್ತಿದ್ದರು. ಒಂದೇ ಜಾಗೆಯಲ್ಲಿ ಫ್ಲಾಟ್‌ಗಳನ್ನು ಖರೀದಿಸಿದ್ದರು. ತಾವೇ ಬೆಳೆಸಿದ ಮಗನ ಹೆಸರನ್ನು ತಮ್ಮ ಹೊಲಸು ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸಿಕೊಳ್ಳುವುದು ತಾಹಿರ್‌ ಅವರಂಥ ನಿರ್ಮಾಪಕರಿಗೆ ಶೋಭೆ ತರುವಂಥದ್ದಲ್ಲ ಅಂತ ಬಾಲಿವುಡ್‌ ಮಾತಾಡಿಕೊಳ್ಳುತ್ತಿದೆ. ಇದರ ನಡುವೆಯೇ ಅಮೀರನ ನಂಬಿ ಅಪ್ಪನಿಗೆ ಹಣ ಕೊಟ್ಟು ಕೆಟ್ಟೆವೋ ಎಂದು ಫೈನಾನ್ಶಿಯರ್‌ಗಳು ಅಲವತ್ತುಕೊಳ್ಳುತ್ತಿದ್ದಾರೆ.

Post your Views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada