ಒಂದಾಗ್ತಿದ್ದಾರೆ ದರ್ಶನ್- ಸುದೀಪ್, ಕಾರಣ ಪುನೀತ್ ರಾಜ್‌ಕುಮಾರ್!
ಸಿನಿಮಾರಂಗ ಅಂತ ಬಂದಾಗ ಸ್ಪರ್ಧೆ ಸರ್ವೇ ಸಾಮಾನ್ಯ. ಸ್ಟಾರ್ ವಾರ್, ಫ್ಯಾನ್ ವಾರ್ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಪ್ರತಿ ಹಂತದಲ್ಲೂ ಬಣ್ಣದ ಲೋಕದಲ್ಲಿ ಸ್ಪರ್ಧೆ ಇದ್ದೇ ಇರುತ್ತೆ. ಏನೇ ಸ್ಪರ್ಧೆ ಇದ್ದರು ಕನ್ನಡದ ಸ್ಟಾರ್ ನಟರು ಹಲವು ವಿಚಾರಗಳಲ್ಲಿ ಮಾದರಿ ಆಗಿದ್ದಾರೆ, ಸ್ಪೂರ್ತಿ ದಾಯಕವಾಗಿದ್ದಾರೆ. ಆದ್ರೆ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಡುತ್ತಿರೋ ಬೇಸರದ ವಿಚಾರ ಅಂದರೆ ಅದು ದರ್ಶನ್ ಮತ್ತು ಸುದೀಪ್ ಮುನಿಸು.
ಸ್ಯಾಂಡಲ್‌ವುಡ್‌ನಲ್ಲಿ ಆಗಾಗ ಅತಿ ಹೆಚ್ಚಾಗಿ ದಚ್ಚು-ಕಿಚ್ಚನ ಸ್ನೇಹದ ವಿಚಾರ ಸದ್ದು ಮಾಡುತ್ತಾ ಇರುತ್ತೆ. ದರ್ಶನ್ ಮತ್ತು ಸುದೀಪ್ ಇಬ್ಬರ ಸ್ನೇಹ ಮುರಿದು ಬಿದ್ದ ಬಳಿಕ ಈ ಬಗ್ಗೆ ಆಗಾಗ ಚರ್ಚೆ ಆಗುತ್ತಲಿರುತ್ತದೆ. ಇದಕ್ಕೆ ಕಾರಣ ದರ್ಶನ್ ಮತ್ತು ಸುದೀಪ್ ಅಷ್ಟು ಒಳ್ಳೆಯ ಸ್ನೇಹಿತರಾಗಿ ಇದ್ದದ್ದು. ಕನ್ನಡದ ಈ ಇಬ್ಬರು ಸೂಪರ್ ಸ್ಟಾರ್‌ಗಳು ತಮ್ಮ ಸ್ನೇಹ ಮುರಿದುಕೊಂಡು ವರ್ಷಗಳೇ ಕಳೆದು ಹೋಗಿವೆ.
ಆಗಾಗ ಈ ಜೋಡಿ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ. ದರ್ಶನ್ ಮತ್ತು ಸುದೀಪ್ ಇಬ್ಬರು ಕೂಡ ಒಟ್ಟಿಗೆ ಬರ್ತಾರೆ ಅಂತ ಹೇಳಲಾಗುತ್ತಿತ್ತು. ಆದರೆ ಇಲ್ಲಿ ತನಕ ಅದು ಸಾಧ್ಯ ಆಗಿಲ್ಲ. ಈಗ ಈ ಇಬ್ಬರೂ ಒಂದೇ ವೇದಿಕೆ ಮೇಲೆ ಬರುವ ಸೂಚನೆ ಸಿಕ್ಕಿದೆ. ಎಲ್ಲಿ ಹೇಗೆ ಎನ್ನುವ ಬಗ್ಗೆ ಮುಂದೆ ಓದಿ...

ಅಪ್ಪುಗಾಗಿ ಒಟ್ಟಿಗೆ ಸೇರಿತ್ತಿರುವ ದರ್ಶನ್, ಸುದೀಪ್!
ಕನ್ನಡದ ಚಿತ್ರರಂಗದ ದೊಡ್ಡ ಸ್ಟಾರ್‌ಗಳಾದ ನಟ ದರ್ಶನ್, ಸುದೀಪ್ ತಮ್ಮ ಸ್ನೇಹಕ್ಕೆ ಎಳ್ಳು ನೀರು ಬಿಟ್ಟು ವರ್ಷಗಳೇ ಕಳೆದಿವೆ. ಅಲ್ಲಿಂದ ಇಲ್ಲಿ ಈ ಇಬ್ಬರೂ ಒಟ್ಟಿಗೆ ಸೇರುವ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಈಗ ಈ ಜೋಡಿ ಒಟ್ಟಿಗೆ ಒಂದೆಡೆ ಸೇರಲಿದೆ ಎನ್ನುವ ಸಿಹಿ ಸುದ್ದಿ ಹರಿದಾಡುತ್ತಿದೆ. ಹೌದು 'ಜೇಮ್ಸ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ.

ಹೊಸಪೇಟೆಯಲ್ಲಿ 'ಜೇಮ್ಸ್' ಕಾರ್ಯಕ್ರಮ: ದರ್ಶನ್, ಸುದೀಪ್ ಗೆಸ್ಟ್!
ಹೊಸಪೇಟೆಯಲ್ಲಿ ಇದೇ ಮಾರ್ಚ್ 6ರಂದು, 'ಜೇಮ್ಸ್' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಜರುಗಲಿದೆ. ಇದು ಜೇಮ್ಸ್ ಚಿತ್ರದ ಮೊದಲ ಕಾರ್ಯಕ್ರಮ ಆಗಿದ್ದು, ಕನ್ನಡದ ಗಣ್ಯ ನಟ, ನಟಿಯರು ಆಗಮಿಸುತ್ತಿದ್ದಾರೆ. ನಟ ದರ್ಶನ್ ಮತ್ತು ಸುದೀಪ್ ವಿಶೇಷ ಅತಿಥಿಯಾಗಿ ಈ ಈವೆಂಟ್‌ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ದಚ್ಚು ಮತ್ತು ಕಿಚ್ಚನನ್ನು ಒಟ್ಟಿಗೆ ನೋಡಬೇಕು ಎನ್ನುವ ಅಭಿಮಾನಿಗಳ ಆಸೆಯೂ ಈಡೆರಲಿದೆ. 'ಜೇಮ್ಸ್' ಚಿತ್ರದ ಈ ಅದ್ಧೂರಿ ಕಾರ್ಯಕ್ರಮಕ್ಕೆ ತೆಲುಗಿನ ಜೂ.ಎನ್‌ಟಿಆರ್ ಹಾಗೂ ಚಿರಂಜೀವಿ ಅವರು ಕೂಡ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಇದೆ.

ಒಂದಾಗುತ್ತಾರ ದರ್ಶನ್, ಸುದೀಪ್ ಜೋಡಿ!
ಈ ಹಿಂದೆಯೂ ದರ್ಶನ್ ಮತ್ತು ಸುದೀಪ್ ಭಜರಂಗಿ ಚಿತ್ರದ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಆದರೆ ಈಗ ಅಪ್ಪು ಸಿನಿಮಾಗಾಗಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇಷ್ಟು ದಿನ ಕಿಚ್ಚ ಇರುವ ಕಡೆಗೆ ದಚ್ಚು ಎಂಟ್ರಿ ಕೊಡುತ್ತಾ ಇರಲಿಲ್ಲ. ಹಾಗೆ ದಚ್ಚು ಬರುವ ಕಡೆಗೆ ಕಿಚ್ಚನ ಎಂಟ್ರಿ ಇರುತ್ತಾ ಇರಲಿಲ್ಲ. ಆದರೆ 'ಜೇಮ್ಸ್' ಕಾರ್ಯಕ್ರಮಕ್ಕೆ ಇಬ್ಬರಿಗೂ ಆಹ್ವಾನ ಹೋಗಿದೆ. ಹಾಗಾಗಿ ಇಲ್ಲಿ ತಮ್ಮ ಮುನಿಸು ಮರೆತು ಒಟ್ಟಿಗೆ ಬರುತ್ತಾರೆ ಎನ್ನಲಾಗುತ್ತಿದೆ.

ಅಭಿಯಾನ ಮಾಡಿದ್ದ ಅಭಿಮಾನಿಗಳು!
ಅಷ್ಟಕ್ಕೂ ದರ್ಶನ್ ಮತ್ತು ಸುದೀಪ್ ಬೇರೆ ಆದ ಬಳಿಕ ಅವರ ಅಭಿಮಾನಿಗಳು ಒಬ್ಬರನ್ನು ಒಬ್ಬರು ಟ್ರೋಲ್ ಮಾಡುತ್ತಿದ್ದರು. ಆದರೆ ಬಳಿಕ ಇಬ್ಬರು ಒಂದಾಗಬೇಕೆಂದು ಅವರ ಅಭಿಮಾನಿಗಳು ಹಲವು ಬಾರಿ ಅಭಿಯಾನ ಕೂಡ ನಡೆಸಿದ್ದಾರೆ. ಈ ಹಿಂದೆ ಟ್ವಿಟ್ಟರ್‌ನಲ್ಲಿ ಸುದೀಪ್, ದರ್ಶನ್ ಅವರ ಅಭಿಮಾನಿಗಳು ಸಕಾರಾತ್ಮಕವಾದ ಅಭಿಯಾನ ಶುರು ಮಾಡಿದ್ದರು. ಅದರೂ ಕೂಡ ಈ ಇಬ್ಬರು ನಟರು ಒಂದಾಗುವ ಸಮಯ ಇನ್ನೂ ಕೂಡಿ ಬಂದಿಲ್ಲ. ಆದರೆ 'ಜೇಮ್ಸ್' ಕಾರ್ಯಕ್ರಮದಲ್ಲಿ ಆದರೂ ಈ ಜೋಡಿ ಒಂದಾಗುತ್ತಾ ನೋಡಬೇಕು.


Click it and Unblock the Notifications











