ಸ್ಟಾರ್ ನಟಿಯನ್ನು ವಿವಾಹವಾಗಲಿದ್ದಾರೆ ಚಿರು ಕುಟುಂಬದ ಕುಡಿ ವರುಣ್!
ಮೆಗಾಸ್ಟಾರ್ ಚಿರಂಜೀವಿ ಕುಟುಂಬ ತೆಲುಗು ಚಿತ್ರರಂಗದ ಪ್ರಭಾವಶಾಲಿ ಕುಟುಂಬ. ಹಲವು ನಾಯಕ ನಟರು ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿದ್ದಾರೆ.
Recommended Video
ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ಅಲ್ಲು ಸಿರೀಶ್, ಸಾಯಿ ಧರಮ್ ತೇಜ್, ವರುಣ್ ತೇಜ್, ವೈಷ್ಣವ್ ತೇಜ್ ಹೀಗೆ ಪಟ್ಟಿ ಸಾಗುತ್ತದೆ. ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇತರೆ ಕುಟುಂಬಗಳಿಗೆ ಹೋಲಿಸಿದರೆ ವಿವಾದಗಳಿಗೆ ದೂರವಾಗಿ, ಕುಟುಂಬದಲ್ಲಿ ಒಳಜಗಳಗಳಿಲ್ಲದೆ ಅನ್ಯೋತ್ಯತೆಯಿಂದ ಇರುವ ಕುಟುಂಬ ಇದು.
ಪವನ್ ಕಲ್ಯಾಣ್ ಹೊರತುಪಡಿಸಿ ಚಿರಂಜೀವಿ ಕುಟುಂಬದ ನಾಯಕ ನಟರು ಸಿನಿಮಾ ನಟಿಯರನ್ನು ವಿವಾಹವಾಗಿದ್ದಿಲ್ಲ. ಆದರೆ ಇದೀಗ ಪವನ್ ಕಲ್ಯಾಣ್ ಬಳಿಕ ಇದೀಗ ಚಿರಂಜೀವಿ ಕುಟುಂಬದ ಯುವ ನಟರೊಬ್ಬರು, ಸಿನಿಮಾ ನಟಿಯನ್ನು ವಿವಾಹವಾಗಲು ತಯಾರಾಗಿದ್ದಾರೆ. ಅವರೇ ನಟ ವರುಣ್ ತೇಜ್.

ನಟಿಯನ್ನು ವಿವಾಹವಾಗಲಿದ್ದಾರೆ ವರುಣ್ ತೇಜ್?
ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ನಾಯಕ ನಟನಾಗಿ ನೆಲೆಯೂರಿದ್ದು ಕೆಲವು ತಿಂಗಳ ಹಿಂದಷ್ಟೆ ತಮ್ಮ ಸಹೋದರಿಯ ವಿವಾಹ ಮಾಡಿ ಮುಗಿಸಿದ್ದಾರೆ. ಇದೀಗ ತಾವು ವಿವಾಹವಾಗಲು ತಯಾರಾಗಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಟಿಯೊಬ್ಬರನ್ನೇ ವಿವಾಹವಾಗಲಿದ್ದಾರೆ ವರುಣ್ ತೇಜ್.

ಸಾಯಿ ಪಲ್ಲವಿ ಜೊತೆ ಹೆಸರು ಕೇಳಿ ಬಂದಿತ್ತು
ವರುಣ್ ತೇಜ್ ಈ ಹಿಂದೆ 'ಫಿದಾ' ಸಿನಿಮಾದಲ್ಲಿ ನಟಿಸಿದಾಗ ನಟಿ ಸಾಯಿ ಪಲ್ಲವಿ ಜೊತೆ ವರುಣ್ ಹೆಸರು ಕೇಳಿ ಬಂದಿತ್ತು. ನಟ ನಾಗಬಾಬು ಸಹ ಅಂಥಹಾ ನಟಿ ಸೊಸೆಯಾದರೆ ಚೆನ್ನಾಗಿರುತ್ತದೆ ಎಂದು ಟಿವಿ ಕಾರ್ಯಕ್ರಮದಲ್ಲಿ ಹೇಳಿದ್ದರು. ಅದರ ಬಳಿಕ ವರುಣ್ ತೇಜ್ ಹಾಗೂ ಸಾಯಿ ಪಲ್ಲವಿ ನಡುವಿನ ಪ್ರೀತಿಯ ವಿಚಾರ ಇನ್ನಷ್ಟು ಜೋರು ಪಡೆಯಿತು. ಆದರೆ ಅವೆಲ್ಲ ಸುಳ್ಳು ಎಂದು ವರುಣ್ ತೇಜ್ ಸ್ಪಷ್ಟನೆ ನೀಡಿದರು. ಅನವಶ್ಯಕವಾಗಿ ನಟಿಯರ ಹೆಸರು ಎಳೆಯಬೇಡಿರೆಂದು ಮನವಿಯನ್ನೂ ಮಾಡಿದ್ದರು.

ಸಹೋದರಿ ವಿವಾಹ ಮಾಡಿ ಮುಗಿಸಿರುವ ವರುಣ್ ತೇಜ್
ವರುಣ್ ತೇಜ್ ಸಹೋದರಿ ನಿಹಾರಿಕ ಕೋನಿಡೆಲ ವಿವಾಹ 2020ರ ಡಿಸೆಂಬರ್‌ನಲ್ಲಿ ಉದ್ಯಮಿ ಚೈತನ್ಯ ಜೊನ್ನಲಗಡ್ಡ ಜೊತೆ ಜೈಪುರದಲ್ಲಿ ಅದ್ಧೂರಿಯಾಗಿ ನೆರವೇರಿತು. ವಿವಾಹದಲ್ಲಿ ಇಡೀ ಕೋನಿಡೇಲ ಕುಟುಂಬ ಭಾಗಿಯಾಗಿತ್ತು. ಸಹೋದರಿಯ ವಿವಾಹದ ಬಳಿಕ ಇದೀಗ ವರುಣ್ ತೇಜ್ ವಿವಾಹಕ್ಕೆ ಸಿದ್ಧವಾಗಿದ್ದು, ನಟಿಯ ಕುಟುಂಬದೊಡನೆ ಮಾತುಕತೆ ಚಾಲ್ತಿಯಲ್ಲಿದೆ. ನಾಗಬಾಬು ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಕೆಲವೇ ದಿನಗಳಲ್ಲಿ ವರುಣ್ ತೇಜ್ ಅವರೇ ಮದುವೆ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ.

ಹುಟ್ಟುಹಬ್ಬಕ್ಕೆ 'ಗನಿ' ಪೋಸ್ಟರ್ ಬಿಡುಗಡೆ
ಇಂದು (ಜನವರಿ 19) ವರುಣ್ ತೇಜ್ ಹುಟ್ಟುಹಬ್ಬವಾಗಿದ್ದು, ಇಂದು ವರುಣ್ ನಟನೆಯ ಹೊಸ ಸಿನಿಮಾ 'ಗನಿ'ಯ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ವರುಣ್ ತೇಜ್ ನಟಿಸಿದ್ದು, ವರುಣ್ ತೇಜ್‌ರ ಬಾಕ್ಸಿಂಗ್ ಗುರುವಿನ ಪಾತ್ರದಲ್ಲಿ ಕನ್ನಡದ ಸ್ಟಾರ್ ನಟ ಉಪೇಂದ್ರ ನಟಿಸಿದ್ದಾರೆ. ಈ ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಸಾಯಿ ಮಂಜ್ರೇಕರ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು, ಬಾಲಿವುಡ್‌ನ ಸುನಿಲ್ ಶೆಟ್ಟಿ ಸಹ ಸಿನಿಮಾದಲ್ಲಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ವರುಣ್ ನಟನೆಯ 'ಎಫ್3' ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಕೊರೊನಾ ಕಾರಣದಿಂದ ಬಿಡುಗಡೆ ಮುಂದೂಡಲಾಗಿದೆ. ಈ ಸಿನಿಮಾದಲ್ಲಿ ಹಿರಿಯ ನಟ ವೆಂಕಟೇಶ್ ಸಹ ಇದ್ದಾರೆ. ಹಿಟ್ ಸಿನಿಮಾ 'ಎಫ್2'ನ ಮುಂದುವರೆದ ಭಾಗವಿದು.


Click it and Unblock the Notifications











