»   » 'ನಾನು ಎಂದಿಗೂ ಪ್ರಶಸ್ತಿ ಬಯಸಿದವಳಲ್ಲ'

'ನಾನು ಎಂದಿಗೂ ಪ್ರಶಸ್ತಿ ಬಯಸಿದವಳಲ್ಲ'

By: ಮಲೆನಾಡಿಗ
Subscribe to Filmibeat Kannada

2010-11ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪರಿಷ್ಕೃತ ಪಟ್ಟಿ ಶುಕ್ರವಾರ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಸಿಕ್ಕಿದೆ. ಆದರೆ, ಮಂಡ್ಯ ಕ್ಷೇತ್ರದ ಸಂಸದೆ, ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ತಾವು 'ಲಕ್ಕಿ ಸ್ಟಾರ್' ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಭಾರತಿ ವಿಷ್ಣುವರ್ಧನ್ ನೇತೃತ್ವದ ಸಮಿತಿ ನೀಡಿದ್ದ ಪಟ್ಟಿಯಲ್ಲಿ ದೋಷ ಕಂಡು ಬಂದಿತ್ತು ನಿಜ. ಸೂಪರ್ ಚಿತ್ರಕ್ಕೆ ಶ್ರೇಷ್ಠ ಚಿತ್ರ ಪ್ರಶಸ್ತಿ ನೀಡಿದ್ದು ಹಲವರ ಹುಬ್ಬೇರಿಸಿತ್ತು. ಆದರೆ, ಅದಕ್ಕಿಂತ ಹೆಚ್ಚಾಗಿ ಸೂಪರ್ ಚಿತ್ರದ ಛಾಯಾಗ್ರಾಹಕರಾಗಿರುವ ಅಶೋಕ್ ಕಶ್ಯಪ್ ಅವರು ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಇದ್ದಿದ್ದು ಹಲವರ ಕೆಂಗಣ್ಣಿಗೆ ಬಿತ್ತು. ಸಮಿತಿಯಲ್ಲಿದ್ದವರ ಚಿತ್ರ ಅಥವಾ ಅವರ ನೆಂಟರಿಷ್ಟರಿಗೆ ಸಂಬಂಧಿಸಿದ ಚಿತ್ರಗಳಿಗೆ ಪ್ರಶಸ್ತಿ ಕೊಟ್ಟರೆ ಮೆಚ್ಚನಾ ಪ್ರೇಕ್ಷಕ ಪರಮಾತ್ಮನು ಎಂದು ಹೇಳಿ ನಟಿ ಪ್ರಿಯಾ ಹಾಸನ್ ಮತ್ತು ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ಕೂಡಾ ತ್ವರಿತವಾಗಿ ವಿಚಾರಣೆ ನಡೆಸಿ ಹಳೆ ಪಟ್ಟಿ ಪರಿಷ್ಕರಿಸಿ ಹೊಸ ಪಟ್ಟಿ ಪ್ರಕಟಿಸಿ ಎಂದು ನಿರ್ದೇಶಿಸಿತು. ಸರ್ಕಾರ ಎಸ್ ಕೆ ಭಗವಾನ್ ನೇತೃತ್ವದ ಸಮಿತಿಗೆ ಈ ಜವಾಬ್ದಾರಿ ವಹಿಸಿತು. ಆದರೆ, ಸಮಿತಿ ಹಳೆ ಪಟ್ಟಿಯಲ್ಲಿಅಲ್ಪ ಸ್ವಲ್ಪ ಬದಲಾವಣೆ ಮಾಡಿ ಹೊಸ ಪಟ್ಟಿಯನ್ನು ಮುಂದಿಟ್ಟಿದೆ.

ಇಲ್ಲಿ ಸಮಸ್ಯೆ ಇದ್ದದ್ದು ಸೂಪರ್ ಚಿತ್ರ ಸುತ್ತ ಮುತ್ತ ಆದರೆ ಬಲಿಯಾಗಿದ್ದು ಕಲ್ಯಾಣಿ ಎಂಬ ಅಪ್ಪಟ ಕಲಾವಿದೆ. ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಆಚ್ಚರಿಯೊಂದಿಗೆ ಖುಷಿ ವ್ಯಕ್ತಪಡಿಸಿದ್ದ ಕಲ್ಯಾಣಿ ಅವರಿಗೆ ಇಂದು ಇಲ್ಲಿ ಪ್ರಕಟಗೊಂಡಿರುವ ಹೊಂದಾಣಿಕೆ ಪಟ್ಟಿ ಬಗ್ಗೆ ಗೊತ್ತೇ ಇರಲಿಲ್ಲ.

Actress Kalyani reaction on missing out State Film Award

ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಒನ್ಇಂಡಿಯಾ ಪ್ರತಿನಿಧಿ ಕಲ್ಯಾಣಿ ಅವರಿಗೆ ಕರೆ ಮಾಡಿದಾಗ... ಕಲ್ಯಾಣಿ ಅವರು ಯಾವುದೇ ಪಟ್ಟಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿಲ್ಲ. 'ನಾನು ಎಂದೂ ಪ್ರಶಸ್ತಿಗಾಗಿ ಹಂಬಲಿಸಲಿಲ್ಲ. ಈ ಮುಂಚೆ ನೀವಾಗೇ ಪ್ರಶಸ್ತಿ ಕೊಟ್ರಿ ಈಗ ನೀವೆ ಹಿಂಪಡೆಯುತ್ತಿದ್ದೀರಾ, ಕೊಟ್ಟಾಗ ನಾವು ಕೇಳಿರಲಿಲ್ಲ ಈಗ ಹಿಂಪಡೆಯುವಾಗ ನನಗೇನು ನೋವಿಲ್ಲ' ಎಂದರು.

ಅಂದ ಹಾಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ವಿವಾದದ ಬಗ್ಗೆ ಏನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದರೆ, "ನನಗೆ ವಿವಾದ ಬಗ್ಗೆ ತಿಳಿದೇ ಇಲ್ಲ ನಾನು ಕಳೆದ 6 ತಿಂಗಳಿನಿಂದ ಬೆಂಗಳೂರಿನ ಹೊರಗಿದ್ದೇನೆ. ಸದ್ಯ ಮುಂಬೈನಲ್ಲಿದ್ದೇನೆ. ಇತ್ತೀಚೆಗಷ್ಟೆ ಮದುವೆಯಾಗಿದೆ ನಾನು ಸಂಸಾರ ನೋಡಿಕೊಂಡು ಇದ್ದೇನೆ ಹಾಗಾಗಿ ಗಾಂಧಿನಗರದ ಆಗುಹೋಗುಗಳು ತಿಳಿಯಲಿಲ್ಲ ಸ್ಸಾರಿ" ಎಂದರು.

ಸರಿ, ಹೀಗೆ ಹೀಗೆ ಆಗಿದೆ  "ಶ್ರೇಷ್ಠ ನಟಿ ಹೆಸರಿನ ಜಾಗದಲ್ಲಿ ನಿಮ್ಮ ಹೆಸರಿನ ಬದಲು ರಮ್ಯಾ ಹೆಸರಿದೆ" ಎಂದು ವಿವರಿಸಬೇಕಾಯಿತು.

"ಓಹ್ ಹೌದಾ. ನನಗೆ ಏನು ಹೇಳಬೇಕೋ ಗೊತ್ತಿಲ್ಲ. ಪ್ರಶಸ್ತಿ ಪಡೆದವರಿಗೆ ಅಭಿನಂದನೆಗಳು ಎಂದಷ್ಟೇ ಹೇಳಬಲ್ಲೆ. ನನಗೇನು ದುಃಖವಿಲ್ಲ. ಪ್ರಶಸ್ತಿ ಸಿಕ್ಕಿಲ್ಲ ಎಂದು ಅನ್ಯಾಯವಾಗಿದೆ ಎಂದು ನಾನೇನು ಹಲುಬುವುದಿಲ್ಲ ಎಂದರು. ಈ ಬಗ್ಗೆ ಯಾರನ್ನಾಗಲಿ ದೂರುವುದು ಅಥವಾ ಕಾನೂನು ರೀತಿಯಲ್ಲಿ ಪ್ರಶ್ನಿಸುವ ಮನಸ್ಸು ಇಲ್ಲ. ಮೊದಲೇ ಹೇಳಿದಂತೆ ನಾನು ಪ್ರಶಸ್ತಿ ಬಯಸಿರಲಿಲ್ಲ. ಹಾಗಾಗಿ ಬಯಸದೇ ಇರುವುದು ಕಳೆದು ಹೋದಾಗ ದುಃಖವಾಗುವ ಮಾತೇ ಇಲ್ಲ" ಎಂದರು.

ಕನ್ನಡ, ತಮಿಳು ಕಿರುತೆರೆಯಲ್ಲಿ ಮಿಂಚಿರುವ ಕಲ್ಯಾಣಿ ಅವರು ಇತ್ತೀಚೆಗೆ 'ಜಯಮ್ಮನ ಮಗ' ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ್ದರು. ಸದ್ಯಕ್ಕೆ ಯಾವುದೇ ಚಿತ್ರ, ಸಿರೀಯಲ್ ಒಪ್ಪಿಕೊಂಡಿಲ್ಲ ರಿಯಲ್ ಲೈಫ್ ನಲ್ಲಿ ನನ್ನ ಸಂಸಾರದಲ್ಲಿ ಸುಖವಾಗಿದ್ದೇನೆ ಅಷ್ಟು ಸಾಕು ಎಂದರು. ಕಳೆದ ಬಾರಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಪಟ್ಟಿಯಲ್ಲಿ ಕಲ್ಯಾಣಿ ಅವರ ಜತೆಗೆ ಇನ್ನಷ್ಟು ಕಲಾವಿದರು ಹೆಸರು ಈ ಬಾರಿ ಪಟ್ಟಿಯಲ್ಲಿ ಇಲ್ಲ. ಇದೇನು ಉದ್ದೇಶ ಪೂರ್ವಕವೋ ಯಾರ ಆಗ್ರಹವೋ ಅಥವಾ ಇದನ್ನೇ ಪರಿಷ್ಕರಣೆ ಎನ್ನುತ್ತಾರೋ ಪ್ರೇಕ್ಷಕ ಪ್ರಭುಗಳಿಗಂತೂ ಎಂದಿಗೂ ತಿಳಿದ ಅರ್ಧ ಸತ್ಯವಾಗೇ ಉಳಿಯಲಿದೆ.

English summary
Actress Kalyani name misses out revised State Film Award 2010-11 list. Kalyani was adjuged best actress for Suicide movie. Now Ramya gets Best Actress for Sanju weds Geetha movie. Speaking to Oneindia Kalyani said she is happy never bothered about getting any awards
Please Wait while comments are loading...